ಸೋಮವಾರಪೇಟೆ, ಮಾ. ೨೬: ಇಲ್ಲಿನ ಪಟ್ಟಣ ಪಂಚಾಯಿತಿಯ ೨೦೨೫-೨೬ನೇ ಸಾಲಿನ ವಾರ್ಷಿಕ ಆಯವ್ಯಯವನ್ನು ಪ.ಪಂ. ಸಭಾಂಗಣದಲ್ಲಿ ಅಧ್ಯಕ್ಷೆ ಜಯಂತಿ ಶಿವಕುಮಾರ್ ಅವರು ಮಂಡಿಸಿದ್ದು, ಒಟ್ಟಾರೆ ಬಜೆಟ್ ಗಾತ್ರ ರೂ. ೧೦.೬೦ ಕೋಟಿಯಷ್ಟಿದೆ.

ಇದರಲ್ಲಿ ರೂ. ೨.೭೧ ಲಕ್ಷ ಉಳಿತಾಯ ನಿರೀಕ್ಷಿಸಲಾಗಿದ್ದು, ಪಟ್ಟಣದ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ.೨೦೨೫-೨೬ನೇ ಸಾಲಿನಲ್ಲಿ ಒಟ್ಟು ರೂ. ೧೦೬೩.೧೯ ಲಕ್ಷ ಆದಾಯ ನಿರೀಕ್ಷಿಸಿದ್ದು, ರೂ. ೧೦೬೦.೪೮ ಲಕ್ಷ ಖರ್ಚು ಅಂದಾಜಿಸಲಾಗಿದೆ. ಈ ಆರ್ಥಿಕ ವರ್ಷದಲ್ಲಿ ರೂ. ೨.೭೧ ಲಕ್ಷ ಆದಾಯ ನಿರೀಕ್ಷಿಸಿದ್ದು, ಅಧ್ಯಕ್ಷೆ ಜಯಂತಿ ಶಿವಕುಮಾರ್ ಅವರು ಉಳಿತಾಯ ಬಜೆಟ್ ಮಂಡಿಸಿದ್ದಾರೆ.

ವೇತನ, ವಿದ್ಯುತ್, ವಾಣಿಜ್ಯ ಮಳಿಗೆ ಬಾಡಿಗೆ, ಎಸ್.ಎಫ್.ಸಿ., ಉದ್ದಿಮೆ ಪರವಾನಗಿ, ಕಟ್ಟಡ ಪರವಾನಗಿ, ನೀರಿನ ಕಂದಾಯ, ಆಸ್ತಿ ತೆರಿಗೆ, ಡೇ ನಲ್ಮ್ ಅನುದಾನ, ಗೃಹಭಾಗ್ಯ, ೧೫ನೇ ಹಣಕಾಸು, ವಿಶೇಷ ಅನುದಾನ, ಡಿ.ಪಿ.ಆರ್., ಕುಡಿಯುವ ನೀರಿನ ಅನುದಾನ, ಎನ್.ಡಿ.ಆರ್.ಎಫ್. ಪ್ರಕೃತಿ ವಿಕೋಪ ಅನುದಾನ, ನಿವೇಶನ ಖರೀದಿ ಅನುದಾನ, ಸ್ಮಶಾನ ಅಭಿವೃದ್ಧಿ, ಕೆರೆ ಅಭಿವೃದ್ಧಿ, ಸಂಸದರು, ಶಾಸಕರ ನಿಧಿಯಿಂದ ಅನುದಾನಗಳನ್ನು ನಿರೀಕ್ಷಿಸಲಾಗಿದೆ.

ಬಜೆಟ್ ಮಂಡನಾ ಸಭೆಯಲ್ಲಿ ಮಾತನಾಡಿದ ಅಧ್ಯಕ್ಷೆ ಜಯಂತಿ ಶಿವಕುಮಾರ್ ಅವರು, ಪಟ್ಟಣವು ದಿನೇ-ದಿನೇ ಬೆಳೆಯುತ್ತಿದ್ದು, ೮.೩೩ ಚ.ಕಿ.ಮೀ. ವಿಸ್ತೀರ್ಣ ಹೊಂದಿದೆ. ಮೂಲಭೂತ ಸೌಕರ್ಯ ಒದಗಿಸುವುದು ಆಡಳಿತ ಮಂಡಳಿಯ ಆದ್ಯ ಕರ್ತವ್ಯವಾಗಿದೆ. ರಸ್ತೆ, ನೀರು, ಚರಂಡಿ, ನೈರ್ಮಲ್ಯ, ಬೀದಿದೀಪ ವ್ಯವಸ್ಥೆಗಳು ಹೆಚ್ಚು-ಹೆಚ್ಚಾಗಿ ಹಾಗೂ ಈಗಿನ ಪರಿಸ್ಥಿತಿಗೆ ಅನುಗುಣವಾಗಿ ವೈಜ್ಞಾನಿಕವಾಗಿ ಆಗಬೇಕಾಗಿದೆ ಎಂದರು.

ಪಟ್ಟಣದ ಜನರಿಗೆ ಅತ್ಯುತ್ತಮ ಮೂಲಭೂತ ಸೌಲಭ್ಯ ಒದಗಿಸುವುದು ಮತ್ತು ಪಂಚಾಯಿತಿಯನ್ನು ಆರ್ಥಿಕವಾಗಿ ಸದೃಢಗೊಳಿಸುವುದು, ಅದಕ್ಕೆ ತಕ್ಕ ಆದಾಯ ಮೂಲಗಳಾದ ತೆರಿಗೆ ಸಂಗ್ರಹ ಹಾಗೂ ಅನುದಾನ ಪಡೆದುಕೊಳ್ಳಬೇಕಿದೆ. ಬರುವ ಆದಾಯ ಹಾಗೂ ಖರ್ಚನ್ನು ಅಂದಾಜಿಸಿಕೊAಡು ಉಳಿತಾಯ ಬಜೆಟ್ ಮಂಡಿಸಲಾಗಿದೆ ಎಂದರು.

(ಮೊದಲ ಪುಟದಿಂದ) ಪಟ್ಟಣದ ಅಭಿವೃದ್ಧಿಗೆ ಪೂರಕವಾಗಿರುವ ಬಜೆಟ್ ಮಂಡಿಸಿದ್ದು, ಎಲ್ಲಾ ಕಾರ್ಯಕ್ರಮ, ಯೋಜನೆಗಳ ಅನುಷ್ಠಾನಕ್ಕೆ ಆಡಳಿತ ಮಂಡಳಿ ಬದ್ದವಾಗಿದೆ. ಸಾರ್ವಜನಿಕರು ಆಡಳಿತ ಮಂಡಳಿಯೊAದಿಗೆ ಕೈಜೋಡಿಸಬೇಕಿದೆ ಎಂದು ಮನವಿ ಮಾಡಿದರು.

ಸಭೆಯಲ್ಲಿ ಮುಖ್ಯಾಧಿಕಾರಿ ಸತೀಶ್, ಉಪಾಧ್ಯಕ್ಷೆ ಮೋಹಿನಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಆರ್. ಮಹೇಶ್, ಸದಸ್ಯರುಗಳಾದ ಬಿ. ಸಂಜೀವ, ಮೃತ್ಯುಂಜಯ, ಬಿ.ಸಿ. ವೆಂಕಟೇಶ್, ಶೀಲಾ ಡಿಸೋಜ, ಪಿ.ಕೆ. ಚಂದ್ರು, ನಾಗರತ್ನ, ಜೀವನ್, ನಾಮನಿರ್ದೇಶನ ಸದಸ್ಯರುಗಳಾದ ಹೆಚ್.ಎ. ನಾಗರಾಜು, ಡಿ.ಯು. ಕಿರಣ್, ಸಿಬ್ಬಂದಿಗಳಾದ ಜಾಸಿಂ ಖಾನ್, ಜೀವನ್, ರೂಪಾ, ಭಾವನಾ ಸೇರಿದಂತೆ ಇತರರು ಉಪಸ್ಥಿತರಿದ್ದರು.