ಸೋಮವಾರಪೇಟೆ, ಮಾ. ೨೭: ಅರೆಸೇನಾ ಪಡೆಯ ನಿವೃತ್ತ ಯೋಧರ ಒಕ್ಕೂಟಕ್ಕೆ ಕಳೆದ ೧೩ ವರ್ಷಗಳಿಂದ ನಿವೇಶನ ನೀಡದೇ ಸತಾಯಿಸುತ್ತಿರುವುದೂ ಸೇರಿದಂತೆ ಇನ್ನಿತರ ಬೇಡಿಕೆಗಳ ಬಗ್ಗೆ ನಿವೃತ್ತ ಯೋಧರ ಒಕ್ಕೂಟದ ಪದಾಧಿಕಾರಿಗಳು, ಶಾಸಕ ಡಾ. ಮಂತರ್ ಗೌಡ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಪಟ್ಟಣದಲ್ಲಿರುವ ಶಾಸಕರ ಕಚೇರಿಯಲ್ಲಿ ಈ ಬಗ್ಗೆ ಮನವಿ ಸಲ್ಲಿಸಿದ ಸಮಿತಿಯ ಜಿಲ್ಲಾಧ್ಯಕ್ಷ ಯತೀಶ್ ಸೇರಿದಂತೆ ಪದಾಧಿಕಾರಿಗಳು, ಅರೆಸೇನಾಪಡೆಯ ನಿವೃತ್ತ ಯೋಧರಿಗೆ ಸರ್ಕಾರದಿಂದ ಸವಲತ್ತುಗಳನ್ನು ಒದಗಿಸುವಂತೆ ಮನವಿ ಮಾಡಿದರು.
ಕಳೆದ ೧೩ ವರ್ಷಗಳಿಂದ ನಿವೃತ್ತ ಯೋಧರ ಒಕ್ಕೂಟಕ್ಕೆ ನಿವೇಶನ ನೀಡುವಂತೆ ಮನವಿ ಸಲ್ಲಿಸುತ್ತಾ ಬಂದಿದ್ದರೂ ಈವರೆಗೆ ಜಾಗವನ್ನು ಹಸ್ತಾಂತರಿಸಿಲ್ಲ. ಕೊಡಗಿನಲ್ಲಿ ೮೦೦ ಸದಸ್ಯರಿದ್ದರೂ ಜಾಗ ನೀಡಲು ಜಿಲ್ಲಾಡಳಿತ ಮುಂದಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಗೆ ನಮ್ಮನ್ನೂ ಒಳಪಡಿಸಿ ಸೌಲಭ್ಯ ನೀಡಬೇಕು. ತಪ್ಪಿದ್ದಲ್ಲಿ ಅರೆಸೇನಾ ಪಡೆಯ ನಿವೃತ್ತ ಸೈನಿಕರಿಗೆ ಅರೆಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಅಥವಾ ನಿಗಮ ಸ್ಥಾಪನೆ ಮಾಡಬೇಕು. ಅರೆ ಸೇನಾಪಡೆಯ ನಿವೃತ್ತರಿಗೆ ಸಿಜಿಹೆಚ್‌ಎಸ್ ಆರೋಗ್ಯ ಕಾರ್ಡ್ ಒದಗಿಸಿ ಸಿಜಿಹೆಚ್‌ಎಸ್ ವೆಲ್‌ನೆಸ್ ಸೆಂಟರ್ ಸ್ಥಾಪನೆ ಮಾಡಬೇಕು. ಮದುವೆ ಸಮಾರಂಭದಲ್ಲಿ ಮದ್ಯ ಬಳಕೆಗೆ ಅಬಕಾರಿ ಇಲಾಖೆಯಿಂದ ಅನುಮತಿ ಪಡೆಯಬೇಕೆಂಬ ನಿಯಮವನ್ನು ಕೈಬಿಡಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಒಕ್ಕೂಟದ ಬೇಡಿಕೆಗಳ ಈಡೇರಿಕೆಗೆ ಕ್ರಮವಹಿಸಲಾಗುವುದು. ಸಂಬAಧಿಸಿದ ಇಲಾಖಾಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದರು. ಈ ಸಂದರ್ಭ ಒಕ್ಕೂಟದ ಸಂಚಾಲಕ ಎನ್.ಎಂ. ಭೀಮಯ್ಯ, ಜಂಟಿ ಕಾರ್ಯದರ್ಶಿ ಬಿ.ಎನ್. ರಾಜಶೇಖರ್ ಅವರುಗಳು ಉಪಸ್ಥಿತರಿದ್ದರು.