ಕೂಡಿಗೆ, ಮಾ. ೨೭: ಇಲ್ಲಿಗೆ ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೆ ಕಾವೇರಿ ನದಿತೀರದ ದಂಡೆಯಲ್ಲಿರುವ ಶ್ರೀ ರಾಮಲಿಂಗೇಶ್ವರ ಸ್ವಾಮಿಯ ವಾರ್ಷಿಕ ಬ್ರಹ್ಮ ರಥೋತ್ಸವ ಹಾಗೂ ವಾರ್ಷಿಕ ಜಾತ್ರೆ ಏಪ್ರಿಲ್ ೬ ರಂದು ಆರಂಭಗೊಳಲಿದೆ.

ಸ್ವಸ್ತಿ ಶ್ರೀ ಶಾಲಿವಾಹನ ಶಕ ೧೯೪೫ಕ್ಕೆ ಸಲ್ಲುವ ವಿಶ್ವಾವಸು ನಾಮ ಸಂವತ್ಸರ ಉತ್ತರಾಯಣೇ ವಸಂತ ಋತು ಚೈತ್ರ ಮಾಸ ಕೃಷ್ಣ ಪಕ್ಷ ಶಿಶಿರ ಋತು ಏ. ೬ ರಂದು ಮಧ್ಯಾಹ್ನ ೧.೩೦ ರಿಂದ ೨.೧೮ ರ ಶುಭ ಅಭಿಜಿನ್ ಮುಹೂರ್ತದಲ್ಲಿ ವೇದ ಬ್ರಹ್ಮ ನರಹರಿಶರ್ಮಾ ಇವರ ನೇತ್ರತ್ವದಲ್ಲಿ ಶ್ರೀ ರಾಮಲಿಂಗೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಕಾರ್ಯಕ್ರಮ ನಡೆಯಲಿವೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್. ಸುರೇಶ್ ತಿಳಿಸಿದ್ದಾರೆ.

ರಥೋತ್ಸವದ ಅಂಗವಾಗಿ ಏ. ೪ ರಿಂದಲೇ ದೇವಾನಾಂದಿ, ಅಂಕುರಾರ್ಪಣ, ರಕ್ಷಾಬಂಧನ, ಧ್ವಜಾರೋಹಣ, ನವಗ್ರಹ ಸ್ಥಾಪನೆ, ಏ. ೫ ರಂದು ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ಗಣಪತಿ ಹೋಮ, ಸಂಜೆ ಕೂಡಿಗೆ ಮತ್ತು ಶಿರಂಗಾಲ ಗ್ರಾಮಸ್ಥರಿಂದ ಸಂಧ್ಯಾಪೂಜೆ ಮತ್ತು ಸಂಜೆ ೭ ಗಂಟೆಗೆ ಸೀತಾ ಕಲ್ಯಾಣೋತ್ಸವ, ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ದೇವಾಲಯದ ಆವರಣದಲ್ಲಿ ನಡೆಯಲಿವೆ ಎಂದು ಅಧ್ಯಕ್ಷ ಕೆ.ಎನ್. ಸುರೇಶ್ ತಿಳಿಸಿದ್ದಾರೆ.