ಕೂಡಿಗೆ, ಮಾ. ೨೭: ಇಲ್ಲಿಗೆ ಸಮೀಪದ ಯಡನವಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಕುಶಾಲನಗರ ಮಹಾತ್ಮ ಗಾಂಧಿ ಸ್ಮಾರಕ ಪದವಿ ಕಾಲೇಜಿನ ರಾಷ್ಟಿçÃಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ನಡೆಯುತ್ತಿದೆ. ‘ಎನ್.ಎಸ್. ಎಸ್.ನ ಗುರಿ ಮತ್ತು ಉದ್ದೇಶಗಳು’ ಎಂಬ ವಿಷಯದ ಬಗ್ಗೆ ಮಾತನಾಡಿದ ವೀರಾಜಪೇಟೆ ಸೆಂಟ್ ಆ್ಯನ್ಸ್ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಅರ್ಜುನ್ ಮೌರ್ಯ, ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವವು ಗುಣತ್ಮಾಕ ಶಿಕ್ಷಣದೊಂದಿಗೆ ಪುನರ್‌ಚೇತನ ನೀಡುತ್ತದೆ. ಅಲ್ಲದೇ ಬದುಕಿನ ಸಾರ್ಥಕತೆಗೆ ದಾರಿ ಮೂಲಕ ಸ್ಫೂರ್ತಿ ನೀಡುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶಿಬಿರದ ಗುರಿ ಮತ್ತು ಉದ್ದೇಶವನ್ನು ಎಲ್ಲಾ ಹಂತಗಳಲ್ಲಿ ಅಭಿವೃದ್ಧಿಗೆ ಪೂರಕವಾಗಿ, ಮುಂದೆ ನಾನು ಯಾವ ಮಾರ್ಗದಲ್ಲಿ ಸಾಗಬೇಕು ಎಂಬ ಆದರ್ಶ ಜೀವನದ ಮೌಲ್ಯಗಳನ್ನು ತಿಳಿಸುತ್ತವೆ ಎಂದರು.

ವಿಶೇಷ ಆಹ್ವಾನಿತರಾಗಿದ್ದ ಪತ್ರಕರ್ತ ಕೆ.ಕೆ. ನಾಗರಾಜಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳಿಗೆ ಗುರಿ ಇದ್ದರೆ ಭವಿಷ್ಯವನ್ನು ರೂಪಿಸಿ ಕೊಳ್ಳಲು ಅನುಕೂಲ. ಜೊತೆಯಲ್ಲಿ ಆತ್ಮವಿಶ್ವಾಸವನ್ನು ಮೈಗೂಡಿಸಿ ಕೊಂಡು ಸೇವಾ ಮನೋಭಾವ ಬೆಳೆಸಿಕೊಂಡು ಸಮಯ ವ್ಯರ್ಥ ಮಾಡದೆ ಜ್ಞಾನ ವಿಕಸದ ಕಡೆಗೆ ಹೆಚ್ಚು ಗಮನ ಹರಿಸಬೇಕು ಎಂದರು. ಮುಖ್ಯ ಅತಿಥಿಯಾದ ಯಡನವಾಡು ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಮಂಜುನಾಥ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಕಾಲೇಜು ಕಚೇರಿ ಆಡಳಿತಗಾರರಾದ ಸಿ.ಡಿ. ನಮಿತ ವಹಿಸಿದ್ದರು.

ಈ ಸಂದರ್ಭ ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಮಂಜುಳಾ, ಶಿಬಿರಾಧಿಕಾರಿ ಕೆ.ಆರ್. ಮಂಜೇಶ್, ದೈಹಿಕ ಶಿಕ್ಷಣ ನಿರ್ದೇಶಕ ಪಿ.ಎಸ್. ದಿನೇಶ್‌ಕುಮಾರ್, ಕಾಲೇಜು ಪ್ರಾಂಶುಪಾಲೆ ಟಿ.ಎ. ಲಿಖಿತ, ಉಪನ್ಯಾಸಕರಾದ ಶರಣ್, ದೀಪ್ತಿ, ಡಿಸೋಜ, ಭವ್ಯ, ಮಂಜುಶ್ರೀ ಸೇರಿದಂತೆ ಕಾಲೇಜು ಉಪನ್ಯಾಸಕ ವೃಂದ ಹಾಗೂ ಶಿಬಿರಾರ್ಥಿಗಳು ಹಾಜರಿದ್ದರು.

ಸಂಜೆ ಶಿಬಿರಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.