ಮಡಿಕೇರಿ, ಮಾ. ೨೭: ಆಸ್ಪತ್ರೆ ವಿರುದ್ಧ ರೋಗಿಯೊಬ್ಬರು ಸೇವಾ ನ್ಯೂನತೆ ಆರೋಪದಡಿ ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದೂರುದಾರರಿಗೆ ಪರಿಹಾರ ನೀಡುವಂತೆ ಆದೇಶ ನೀಡಿದೆ.
ಮಾಯಮುಡಿ ಗ್ರಾಮದ ಮಲ್ಲಿಕಾರ್ಜುನ ಎಂಬವರು ತಾ. ೧೨.೬.೨೪ ರಂದು ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಹಿನ್ನೆಲೆ ಮೈಸೂರಿನ ಸಿಗ್ಮ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ತೆರಳಿದ್ದು, ವೈದ್ಯರು ರಕ್ತ ಪರೀಕ್ಷೆ ಹಾಗೂ ಎಂಡೋಸ್ಕೊಪಿ ಮಾಡಲು ಸಲಹೆ ನೀಡಿದ್ದರು. ಅದರಂತೆ ಅಲ್ಲಿ ಪರೀಕ್ಷೆ ಮಾಡಿಸಿ ವರದಿ ತೆಗೆದುಕೊಳ್ಳಲು ತೆರಳಿದ ಸಂದರ್ಭ ಸಿಬ್ಬಂದಿ ವರ್ಗದವರು ವರದಿ ನೀಡದೆ ಇಲ್ಲಸಲ್ಲದ ಕಾರಣ ಹೇಳಿ ಸತಾಯಿಸಿ ಅಲೆದಾಡಿಸಿದ್ದಾರೆ.
ಆಸ್ಪತ್ರೆಯಿಂದ ಸೇವಾ ನ್ಯೂನತೆ - ಪರಿಹಾರಕ್ಕೆ ಆದೇಶ
(ಮೊದಲ ಪುಟದಿಂದ) ಇದರಿಂದ ಹೊಟ್ಟೆ ನೋವು ಹೆಚ್ಚಾಗಿ ವರದಿ ಪರಿಶೀಲಿಸದೆ ಆಸ್ಪತ್ರೆಗೆ ದಾಖಲಾಗಲು ಸೂಚಿಸಿದ್ದು, ಇದನ್ನು ಮಲ್ಲಿಕಾರ್ಜುನ ಅವರು ನಿರಾಕರಿಸಿ ಆಸ್ಪತ್ರೆಯಲ್ಲಿ ಆದ ಸೇವಾ ನ್ಯೂನತೆ ಕುರಿತು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು.
ವಾದ ವಿವಾದ ಆಲಿಸಿದ ಆಯೋಗದ ಅಧ್ಯಕ್ಷರಾದ ಸಿ. ರೇಣುಕಾಂಬ ಹಾಗೂ ಸದಸ್ಯರಾದ ಗೌರಮ್ಮಣಿ ಅವರುಗಳು ಆಸ್ಪತ್ರೆಯವರು ವೈದ್ಯಕೀಯ ಪರೀಕ್ಷೆಗೆ ಪಡೆದ ರೂ. ೨ ಸಾವಿರ, ಮಾನಸಿಕ ವೇದನೆಗೆ ರೂ. ೫ ಸಾವಿರ ಹಾಗೂ ವ್ಯಾಜ್ಯದ ಖರ್ಚುವೆಚ್ಚಗಳಿಗೆ ರೂ. ೨ ಸಾವಿರಗಳನ್ನು ಪರಿಹಾರವಾಗಿ ಪಾವತಿಸುವಂತೆ ಆದೇಶ ಹೊರಡಿಸಿದ್ದಾರೆ.