ಮಡಿಕೇರಿ, ಮಾ. ೨೭: ಪುಟ್ಟ ಗ್ರಾಮದಲ್ಲಿ ಮಾರಕ ಕಾಯಿಲೆ ಕಂಡುಬAದು ಊರಿನವರೆಲ್ಲರೂ ಕಾಡುಸೇರುವ ಪರಿಸ್ಥಿತಿ ಉಂಟಾದ ಸಂದರ್ಭದಲ್ಲಿ ಊರಿನವರ ಪ್ರಾಣ ರಕ್ಷಣೆಗಾಗಿ ಶ್ರೀರಾಮನ ಭಜನೆ ಮೂಲಕ ಮೈದಳೆದ ಭಜನಾ ಮಂದಿರವೊAದು ಇಂದು ಭವ್ಯ ಶ್ರೀರಾಮಮಂದಿರವಾಗಿ ಕಂಗೊಳಿಸುತ್ತಿದೆ. ಸರಿಸುಮಾರು ೭೫ ವರ್ಷಗಳ ಇತಿಹಾಸ ಹೊಂದಿರುವ ಭಜನಾ ಮಂದಿರ ಇದೀಗ ಪುನರುಜ್ಜೀವನಗೊಂಡು ಭವ್ಯ ಮಂದಿರವಾಗಿ ಲೋಕಾರ್ಪಣೆಗೆ ಸಿದ್ಧಗೊಂಡಿದೆ.

ದಕ್ಷಿಣದ ಕಾಶಿ ಎಂದೇ ಕೀರ್ತಿವೆತ್ತಿರುವ ದಕ್ಷಿಣದ ಗಂಗೆ ಎಂದು ಕರೆಯಲ್ಪಡುವ ಪುಣ್ಯನದಿ ಕಾವೇರಿ ಹುಟ್ಟಿ ಹರಿಯುವ ಭಾಗಮಂಡಲದಲ್ಲಿ ಭವ್ಯವಾದ ಶ್ರೀ ರಾಮಮಂದಿರ ಜೀರ್ಣೋದ್ಧಾರಗೊಂಡಿದ್ದು, ಇದೀಗ ಲೋಕಾರ್ಪಣೆಗೆ ಸಜ್ಜುಗೊಂಡಿದೆ.

೭೫ ವರ್ಷಗಳ ಇತಿಹಾಸ..!

ಸರಿಸುಮಾರು ನಮ್ಮ ದೇಶಕ್ಕೆ ಸ್ವಾತಂತ್ರö್ಯ ಲಭಿಸಿದ ಕಾಲಘಟ್ಟವದು. ಪುಟ್ಟದಾದ ಭಾಗಮಂಡಲ ನಾಡಿನಲ್ಲಿ ಮಾರಕ ಸಿಡುಬು ರೋಗ ಕಾಣಿಸಿಕೊಂಡು ಜೀವಭಯದಿಂದ ಜನರು ಗ್ರಾಮದ ಪಟ್ಟಣದೊಳಗಡೆ ಆಗಮಿಸದೆ ಕಾಡಿನಲ್ಲಿ ಅವಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ತಂತ್ರಿಗಳ ಮೂಲಕ ಪ್ರಶ್ನೆ ಇರಿಸಿದಾಗ ಗ್ರಾಮದಲ್ಲಿ ಭಜನಾ ಮಂದಿರ ನಿರ್ಮಿಸಿ, ದೇವರ ಭಜನೆ ಮಾಡಿದರೆ ನಾಡಿಗೆ ಸುಭಿಕ್ಷೆಯಾಗಲಿದೆ ಎಂದು ಕಂಡುಬAದಿರುವುದಾಗಿ ಇತಿಹಾಸ ಹೇಳುತ್ತದೆ.

ದಾನಿಗಳಿಂದ ಜಾಗ

ಭಾಗಮಂಡಲದಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಆ ಕಾಲದಲ್ಲಿಯೇ ಅಂದರೆ ೧೯೪೮ರಲ್ಲಿ ಗ್ರಾಮದ ಹಿರಿಯರಾದ ಶ್ರೀನಿವಾಸಯ್ಯ ಹಾಗೂ ನರಸಿಂಹನಾಯಕ ಎಂಬವರುಗಳು ಒಟ್ಟು ೧೨ ಸೆಂಟ್ ಜಾಗ ದಾನವಾಗಿ ನೀಡಿದರಂತೆ. ಆ ಜಾಗದಲ್ಲಿ ೩೦ ರಿಂದ ೩೫ ಮಂದಿ ಸೇರಿಕೊಂಡು ಭಜನಾ ಮಂದಿರ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದಾರೆ. ಇದರೊಂದಿಗೆ ಊರಿನವರೆಲ್ಲರೂ ಸೇರಿಕೊಂಡು ಭಜನಾ ಕಾರ್ಯವನ್ನು ಕೂಡ ಆರಂಭಿಸಿದ್ದು, ಶ್ರೀ ಭಗಂಡೇಶ್ವರ ದೇವಾಲಯದ ಪೌಳಿಯಲ್ಲಿ ಭಜನೆ ಮಾಡಲು ಪ್ರಾರಂಭಿಸಿದ್ದಾರೆ. ಈ ಭಜನೆ - ಪ್ರಾರ್ಥನೆಯಿಂದಾಗಿ ಗ್ರಾಮದಲ್ಲಿ ತಲೆದೋರಿದ್ದ ಸಿಡುಬು ಕಾಯಿಲೆ ಶಮನವಾಗಿದೆ. ಸುಮಾರು ಎರಡು ವರ್ಷಗಳ ಕಾಲ ಮಂದಿರ ನಿರ್ಮಾಣ ಕಾರ್ಯ ನಡೆದು ೧೯೫೦ರಲ್ಲಿ ಪರಿ ಪೂರ್ಣಗೊಂಡಿರುವುದಾಗಿ ಗ್ರಾಮದ ಪ್ರಮುಖರು, ರಾಮಮಂದಿರ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರೂ ಆಗಿರುವ ಹೊಸೂರು ಜಿ. ಸತೀಶ್‌ಕುಮಾರ್ ಹೇಳುತ್ತಾರೆ.

ರೂ. ೧ ಕೋಟಿ ವೆಚ್ಚ

ಸುಮಾರು ೭೫ ವರ್ಷಗಳ ಕಾಲ ಹಳೆಯದಾದ ಈ ಭಜನಾ ಮಂದಿರದ ಅಧ್ಯಕ್ಷರನ್ನಾಗಿ ಆ ಕಾಲದಲ್ಲಿ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ರೈಟರ್ ಆಗಿದ್ದ ಚೆರುಮಂದAಡ ದೇವಯ್ಯ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ಸಮಿತಿಯೊಂದನ್ನು ರಚನೆ ಮಾಡಿ ಭಜನಾ ಕಾರ್ಯ ರಾಮನವಮಿ ಆಚರಣೆ ಮಾಡಿಕೊಂಡು ಬರಲಾಗುತ್ತಿತ್ತು.

ಇದೀಗ ಭಜನಾ ಮಂದಿರ ಜೀರ್ಣಾವಸ್ಥೆಗೆ ತಲುಪಿದ ಹಿನ್ನೆಲೆಯಲ್ಲಿ ಮತ್ತೆ ಗ್ರಾಮದ ಪ್ರಮುಖರು ಸೇರಿಕೊಂಡು ಜೀರ್ಣೋದ್ಧಾರ ಸಮಿತಿ ರಚನೆ ಮಾಡಿ ದಾನಿಗಳ ನೆರವಿನಿಂದ ಭವ್ಯವಾದ ಮಂದಿರ ನಿರ್ಮಾಣ ಮಾಡಿದ್ದಾರೆ. ಮಂದಿರ ನಿರ್ಮಾಣಕ್ಕೆ ಸುಮಾರು ೮೦ ಲಕ್ಷಕ್ಕೂ ಅಧಿಕ ಹಣ ವೆಚ್ಚವಾಗಿದ್ದು, ಪುನರ್ ಪ್ರತಿಷ್ಠೆ - ಲೋಕಾರ್ಪಣೆ ಕಾರ್ಯಕ್ಕಾಗಿ ಅಂದಾಜು ೧೫ ಲಕ್ಷಕ್ಕೂ ಅಧಿಕ ವೆಚ್ಚವಾಗಲಿದೆ. ಮಂದಿರ ನಿರ್ಮಾಣಕ್ಕಾಗಿ ಒಟ್ಟು ರೂ. ೧ ಕೋಟಿ ವೆಚ್ಚ ಮಾಡಿದಂತಾಗುತ್ತದೆ ಎಂದು ಸತೀಶ್‌ಕುಮಾರ್ ಮಾಹಿತಿ ನೀಡಿದರು.

ಮೂರ್ತಿ ಪೂಜೆ ಇಲ್ಲ...!

ವಿಶೇಷವೆಂದರೆ ಈ ಮಂದಿರದಲ್ಲಿ ಯಾವುದೇ ಮೂರ್ತಿ ಇಲ್ಲ. ನಿತ್ಯ ಪೂಜೆಯೂ ನಡೆಯುವುದಿಲ್ಲ. ರಾಮ - ಲಕ್ಷö್ಮಣ - ಸೀತಾ ಮಾತೆ, ಹನುಮಾನ್‌ನ ಭಾವಚಿತ್ರ ಮಾತ್ರ ಇದ್ದು, ದೀಪ ಹಚ್ಚಿ ಪ್ರಾರ್ಥನೆ ಮಾಡಿದ ಬಳಿಕ ಭಜನಾ ಕಾರ್ಯಗಳು ನಡೆಯುತ್ತವೆ. ಸಮಯಾವಕಾಶ ನೋಡಿಕೊಂಡು ಊರಿನವರು ಸೇರಿಕೊಂಡು ಭಜನೆ ಮಾಡಿಕೊಂಡು ಬರಲಾಗುತ್ತಿದೆ.

ಭಾವಚಿತ್ರ ಪ್ರತಿಷ್ಠಾಪನೆ

ಇದೀಗ ಮಂದಿರದ ಪುನರ್ ಪ್ರತಿಷ್ಠಾಪನೆ, ಲೋಕಾರ್ಪಣೆ, ಸಾನ್ನಿಧ್ಯ ಕಲಶಾಭಿಷೇಕ ಕಾರ್ಯಕ್ರಮಗಳು ತಾ. ೨೯ ರಿಂದ ೩೧ ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲೂ ಕೂಡ ಮೂರ್ತಿ ಪ್ರತಿಷ್ಠಾಪನೆ ಇರುವುದಿಲ್ಲ. ಚಿನ್ನದ ಬಣ್ಣದಲ್ಲಿ ರಚಿಸಿರುವ ಭಾವಚಿತ್ರವನ್ನು ಮರದಿಂದ ರಚಿಸಲಾಗಿರುವ ಮಂಟಪದಲ್ಲಿರಿಸಿ - ಪ್ರತಿಷ್ಠಾಪನೆ ಮಾಡಲಾಗುತ್ತದೆ. ಇಂದು ಭಾವಚಿತ್ರ ಹಾಗೂ ಮಂಟಪವನ್ನು ಮಂಗಳವಾದ್ಯ, ಕಲಶದೊಂದಿಗೆ ಮೆರವಣಿಗೆ ಮೂಲಕ ತರಲಾಗಿದೆ. ಸುತ್ತಮುತ್ತಲಿನ ಗ್ರಾಮದ ಭಕ್ತರು ಈ ಒಂದು ಮಂಗಳಕರವಾದ ಕಾರ್ಯದಲ್ಲಿ ಭಾಗಿಯಾಗಿದ್ದರು.

ಜೀರ್ಣೋದ್ಧಾರ ಸಮಿತಿ ಟ್ರಸ್ಟ್

ಈ ರಾಮ ಮಂದಿರದ ಜೀರ್ಣೋದ್ಧಾರ ಕಾರ್ಯ ಹಾಗೂ ಪುನರ್ ಪ್ರತಿಷ್ಠಾಪನಾ ಸಂಬAಧ ಜೀರ್ಣೋದ್ಧಾರ ಸಮಿತಿ ಹಾಗೂ ವಿಶ್ವಸ್ಥ ಮಂಡಳಿ ರಚನೆ ಮಾಡಲಾಗಿದೆ. ಹೊಸೂರು ಸತೀಶ್‌ಕುಮಾರ್ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿದ್ದು, ರಾಜೀವ್ ಕಾರ್ಯದರ್ಶಿಯಾಗಿದ್ದಾರೆ. ಜಯನ್ ವಿಶ್ವಸ್ಥ ಮಂಡಳಿ ಅಧ್ಯಕ್ಷರಾಗಿದ್ದು, ಶಿವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದು, ಇವರೊಂದಿಗೆ ಹಲವು ಮಂದಿ ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪೂಜಾದಿ ಕಾರ್ಯಗಳು

ತಾ. ೨೯ ರಿಂದ ಶ್ರೀ ರಾಮಮಂದಿರದಲ್ಲಿ ಪುನರ್ ಪ್ರತಿಷ್ಠಾಪನೆ, ಲೋಕಾರ್ಪಣೆ ಸಾನ್ನಿಧ್ಯ, ಕಲಶಾಭಿಷೇಕದೊಂದಿಗೆ ಮೂರು ದಿನಗಳ ಕಾಲ ವಿವಿಧ ಪೂಜಾದಿ ಕಾರ್ಯಗಳು ನೆರವೇರಲಿವೆ. ತಾ. ೩೧ ರಂದು ಸಭಾ ಕಾರ್ಯಕ್ರಮ ನಡೆಯಲಿದ್ದು, ಏಪ್ರಿಲ್ ೬ ರಂದು ಶ್ರೀ ರಾಮನವಮಿ ಉತ್ಸವ ನೂತನ ಮಂದಿರದಲ್ಲಿ ಜರುಗಲಿದೆ. - ಸಂತೋಷ್