(ಕಾಯಪಂಡ ಶಶಿ ಸೋಮಯ್ಯ)

ಮಡಿಕೇರಿ, ಮಾ. ೨೭: ವಿಶ್ವಮಟ್ಟದಲ್ಲಿಯೂ ಖ್ಯಾತಿ ಪಡೆಯುವ ಮೂಲಕ ಕಳೆದ ವರ್ಷ ಗಿನ್ನಿಸ್ ದಾಖಲೆಯನ್ನು ನಿರ್ಮಿಸಿರುವ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ವೈಭವಕ್ಕೆ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ಸಜ್ಜುಗೊಂಡಿದೆ. ಕೌಟುಂಬಿಕ ಹಾಕಿ ಉತ್ಸವ ಈ ಬಾರಿ ಬೆಳ್ಳಿಹಬ್ಬದ ಸಂಭ್ರಮದಲ್ಲೂ ಇದ್ದು, ರಜತಮಹೋತ್ಸವ ವರ್ಷದ ಹಾಕಿ ಪಂದ್ಯಾವಳಿಯನ್ನು ಆಯೋಜಿಸುತ್ತಿರುವ ಅವಕಾಶ ಮಡಿಕೇರಿ ಸನಿಹದವರಾದ ಮುದ್ದಂಡ ಕುಟುಂಬಸ್ಥರದ್ದಾಗಿದೆ.

ಇದನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕೊಡವ ಹಾಕಿ ಅಕಾಡೆಮಿಯ ಸಹಕಾರದೊಂದಿಗೆ ಮುದ್ದಂಡ ಕುಟುಂಬಸ್ಥರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಇದರೊಂದಿಗೆ ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲಿ ೨೦೦೫ರ ಬಿದ್ದಂಡ ಕಪ್, ೨೦೧೬ರ ಶಾಂತೆಯAಡ ಕಪ್‌ನ ಬಳಿಕ ೨೦೨೫ರಲ್ಲಿ ಮುದ್ದಂಡ ಹಾಕಿ ಉತ್ಸವ ಜರುಗುತ್ತಿದ್ದು, ಮಡಿಕೇರಿ ನಗರವೂ ಒಂದು ತಿಂಗಳ ಕಾಲ ಬಿರುಸಿನ ಚಟುವಟಿಕೆಗಳಿಗೆ ಮೈತೆರೆದುಕೊಳ್ಳುವ ತವಕದಲ್ಲಿದೆ.

ಪಂದ್ಯಾವಳಿ ನಡೆಯುವ ಸ್ಥಳವಾದ ಫೀಲ್ಡ್ ಮಾರ್ಷಲ್ ಕೊಡಂದೇರ ಎಂ. ಕಾರ್ಯಪ್ಪ ಕಾಲೇಜು ಮೈದಾನ ಹಾಕಿ ಪಂದ್ಯಾವಳಿಗೆ ಎಲ್ಲಾ ರೀತಿಯಲ್ಲೂ ಸಿದ್ಧವಾಗಿದೆ. ಕಾರ್ಯಪ್ಪ ಕಾಲೇಜಿನ ಮುಖ್ಯ ಮೈದಾನ, ಇದರ ಒತ್ತಿನಲ್ಲಿರುವ ಮತ್ತೊಂದು ಮೈದಾನ ಹಾಗೂ ಜಿಲ್ಲಾ ಪೊಲೀಸ್ ಮೈದಾನ ಸೇರಿ ಒಟ್ಟು ಮೂರು ಮೈದಾನಗಳಲ್ಲಿ ಆರಂಭಿಕ ಪಂದ್ಯಾಟ ನಡೆಯಲಿದೆ.

ಈ ತನಕದ ಉತ್ಸವಗಳ ಪೈಕಿ ಅತೀ ಹೆಚ್ಚು ಕುಟುಂಬಗಳು (೩೯೬ ಕುಟುಂಬ) ಮುದ್ದಂಡ ಕಪ್‌ಗೆ ಹೆಸರು ನೋಂದಾಯಿಸಿಕೊAಡಿರುವುದು ಮತ್ತೊಂದು ವಿಶೇಷವಾಗಿದೆ. ಕಳೆದ ವರ್ಷ ನಾಪೋಕ್ಲುವಿನಲ್ಲಿ ನಡೆದ ಕುಂಡ್ಯೋಳAಡ ಕಪ್ ಗಿನ್ನಿಸ್ ದಾಖಲೆಯ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. (ಮೊದಲ ಪುಟದಿಂದ) ಇದೀಗ ಮರು ವರ್ಷದ ಮುದ್ದಂಡ ಕಪ್ ಕೂಡ ಹಲವು ವೈವಿಧ್ಯತೆಗಳ ಮೂಲಕ ದಾಖಲೆಯ ಪುಟ ಸೇರುವ ನಿರೀಕ್ಷೆಯಿದೆ.

ವಿಶೇಷವಾಗಿ ಈ ಬಾರಿ ಒಲಂಪಿಕ್ ಟಾರ್ಚ್ ಮಾದರಿಯಲ್ಲಿ ಹಾಕಿ ಉತ್ಸವ ಪ್ರಾರಂಭಿಸಿದ ಪಾಂಡAಡ ಕುಟುಂಬ ಐನ್‌ಮನೆ ಯಿಂದ ಕ್ರೀಡಾಜ್ಯೋತಿಯನ್ನು ಹೊರಡಿಸಲಾಗಿದ್ದು, ಈ ತನಕ ಉತ್ಸವ ಆಯೋಜಿಸಿರುವ ಇನ್ನಿತರ ೨೪ ಕುಟುಂಬಗಳ ಐನ್‌ಮನೆಗಳತ್ತ ಮುದ್ದಂಡ ಕುಟುಂಬಸ್ಥರು ಕೊಂಡೊಯ್ದು ಕ್ರೀಡಾಜ್ಯೋತಿಯ ಸಂಭ್ರಮ ಕೂಡ ಹಾಕಿ ಪಂದ್ಯಾವಳಿ ಆರಂಭಕ್ಕೂ ಮುನ್ನವೇ ವಿವಿಧ ಊರುಗಳಲ್ಲಿ ಹೊಸತೊಂದು ಸಂಭ್ರಮವನ್ನೂ ಸೃಷ್ಟಿಸಿದೆ.

ಬೃಹತ್ ಗ್ಯಾಲರಿ

ಮುಖ್ಯ ಮೈದಾನದಲ್ಲಿ ಸುಮಾರು ೨೫ ಸಾವಿರ ಮಂದಿಗೆ ಸ್ಥಳಾವಕಾಶವಿರುವಂತೆ ಬೃಹತ್ ಗ್ಯಾಲರಿ ನಿರ್ಮಾಣವಾಗಿದೆ. ಮೂರು ಬದಿಗಳಲ್ಲಿ ಹತ್ತು ಮೆಟ್ಟಿಲಿನ ಕಬ್ಬಿಣದ ಗ್ಯಾಲರಿ ಇದ್ದರೆ, ಒಂದು ಬದಿಯಲ್ಲಿ ಕುರ್ಚಿಯ ವ್ಯವಸ್ಥೆಯಿರುವ ವಿಐಪಿ ಗ್ಯಾಲರಿ, ಐನ್‌ಮನೆಯನ್ನು ಪ್ರತಿಬಿಂಬಿಸುವ ಮಾದರಿಯ ಆಕರ್ಷಕ ವೇದಿಕೆ, ಐಐಪಿ ಗ್ಯಾಲರಿ ಸ್ಥಳದ ಹಿಂಭಾಗದಲ್ಲಿ ಕೊಡವ ಸಂಸ್ಕೃತಿ ಪ್ರತಿಬಿಂಬಿಸುವ ಮಾದರಿಯ ಚಿತ್ರಣಗಳಿರುವ ಫ್ಲೆಕ್ಸ್ ಮೈದಾನದ ಸುತ್ತಲೂ ಪ್ರಾಯೋಜಕತ್ವ ನೀಡಿರುವ ಸಂಸ್ಥೆ, ಕಂಪೆನಿಗಳ ಬ್ಯಾನರ್‌ಗಳು, ಮೈದಾನದ ಸುತ್ತ ನೂರಾರು ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ, ಶೌಚಾಲಯ, ವಿವಿಧ ವ್ಯಾಪಾರ ಮಳಿಗೆಗಳನ್ನು ನಿರ್ಮಿಸಲಾಗಿದೆ.

೧೬ ಸಿ.ಸಿ. ಕ್ಯಾಮರಾಗಳು

ಗ್ಯಾಲರಿ, ವೇದಿಕೆ ಸೇರಿದಂತೆ ಮೈದಾನದ ಸುತ್ತಮುತ್ತಲು, ಪಾರ್ಕಿಂಗ್ ಸ್ಥಳದಲ್ಲಿ ೧೬ ಸಿ.ಸಿ. ಕ್ಯಾಮರಾಗಳನ್ನು ಮುಂಜಾಗ್ರತಾ ದೃಷ್ಟಿಯಿಂದ ಆಯೋಜಕರು ವ್ಯವಸ್ಥೆ ಮಾಡಿದ್ದಾರೆ.

ಶಾಂತೆಯAಡ ಕುಟುಂಬ ತಲುಪಿದ ಕ್ರೀಡಾಜ್ಯೋತಿ

ಕರಡದ ಪಾಂಡAಡ ಐನ್‌ಮನೆಯಿಂದ ಹೊರಟ ಕ್ರೀಡಾಜ್ಯೋತಿ ೩ ದಿನಗಳಲ್ಲಿ ಜಿಲ್ಲೆಯ ವಿವಿಧೆಡೆಯ ೨೩ ಆಯೋಜಕ ಕುಟುಂಬಗಳ ಸ್ಥಳ ತಲುಪಿ ಇದೀಗ ತಾ. ೨೭ರ ಸಂಜೆ ಶಾಂತೆಯAಡ ಕುಟುಂಬದತ್ತ ತಲುಪಿ ಬಳಿಕ ಕರವಲೆ ಭಗವತಿ ದೇವಸ್ಥಾನ ಮುಟ್ಟಿದೆ.

ಇಂದು ಏನೇನು..?

ಇಂದು ಈ ಕ್ರೀಡಾಜ್ಯೋತಿ ಸಹಿತವಾಗಿ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಿಂದ ಒಡ್ಡೋಲಗ, ದುಡಿಕೊಟ್ಟ್ಪಾಟ್ ಚಂಡೆ ಸಹಿತವಾಗಿ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. ಮುದ್ದಂಡ ಕುಟುಂಬಸ್ಥರು, ಕೊಡವ ಹಾಕಿ ಅಕಾಡೆಮಿಯವರು, ಸುತ್ತಮುತ್ತಲ ಗ್ರಾಮಸ್ಥರು, ಮಡಿಕೇರಿ ಕೊಡವ ಸಮಾಜ, ವಿವಿಧ ಕೇರಿಗಳು, ಇನ್ನಿತರ ಅಭಿಮಾನಿಗಳು ಮೆರವಣಿಗೆಯಲ್ಲಿ ಸಾಗಿ ಬರಲಿದ್ದಾರೆ.

ಮೆರವಣಿಗೆ ಮುಖ್ಯ ಮೈದಾನದಲ್ಲಿ ಸಮಾಪನಗೊಳ್ಳಲಿದ್ದು, ಅಲ್ಲಿ ಜ್ಯೋತಿ ಬೆಳಗುವಿಕೆ, ಧ್ವಜಾರೋಹಣ, ಬಾಳೆ ಕಡಿಯುವುದು, ಆಗಸಕ್ಕೆ ಗುಂಡು ಹಾರಿಸುವುದು, ಸಾಂಸ್ಕೃತಿಕ ವೈವಿಧ್ಯತೆಗಳು, ವೇದಿಕೆ ಕಾರ್ಯಕ್ರಮಗಳು ಎರಡು ಪ್ರದರ್ಶನ ಪಂದ್ಯದ ಮೂಲಕ ಹಾಕಿ ನಮ್ಮೆ ಶುಭಾರಂಭಗೊಳ್ಳಲಿದೆ.