ಸೋಮವಾರಪೇಟೆ, ಮಾ. ೨೭: ಜನರಿಗೆ ಹತ್ತಿರವಾಗಿರುವ ಗ್ರಾಮ ಪಂಚಾಯಿತಿ ಆಡಳಿತವು ಮೂರು ತಿಂಗಳಿಗೊಮ್ಮೆ ಗ್ರಾಮಸಭೆ ನಡೆಸಿ ಜನರ ಬೇಕು ಬೇಡಿಕೆಗಳನ್ನು ಆಲಿಸುವುದು ವಾಡಿಕೆ. ಆದರೆ ತಾಲೂಕಿನ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಗ್ರಾಮಸಭೆ ಮೂರು ವರ್ಷದ ನಂತರ ನಡೆದಿದ್ದು ಒಂದು ಅಚ್ಚರಿ...! ಈ ಸಂದರ್ಭ ನೂರಾರು ಸಮಸ್ಯೆಗಳು ಒಮ್ಮೆಲೆ ಚರ್ಚೆಗೆ ಬಂದವು.
ಕೊಡ್ಲಿಪೇಟೆ ಗ್ರಾಮ ಪಂಚಾಯಿತಿಯ ಗ್ರಾಮ ಸಭೆ ಪಂಚಾAಯಿತಿ ಆವರಣದಲ್ಲಿ ಅಧ್ಯಕ್ಷೆ ಅಪ್ಸರಿ ಬೇಗಂ ಅಧ್ಯಕ್ಷತೆಯಲ್ಲಿ ಮೂರು ವರ್ಷಗಳ ನಂತರ ನಡೆಯಿತು. ಮೂರು ವರ್ಷಗಳ ನಂತರ ಸಭೆ ಆಯೋಜನೆಗೊಂಡಿದ್ದರಿAದ ಸಭೆಯಲ್ಲಿ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಾರ್ವಜನಿಕರು ಮುಗಿಬಿದ್ದರು. ಆರೋಗ್ಯ ಇಲಾಖೆಗೆ ಸಂಬAಧಿಸಿದAತೆ ಆರೋಗ್ಯ ಶಿಕ್ಷಕಿ ಮಂಜುಳಾ ಅವರು ಮಾಹಿತಿ ನೀಡುವ ಸಂದರ್ಭ, ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಅಲಭ್ಯತೆ ಬಗ್ಗೆ ನಿವೃತ್ತ ಸೈನಿಕ ವಿಶ್ವನಾಥ್ ಗಮನ ಸೆಳೆದರು.
ಆರೋಗ್ಯ ಕೇಂದ್ರದ ಕಾರ್ಯಕ್ರಮಗಳ ಬಗ್ಗೆ ಪಂಚಾಯಿತಿಗೆ ಮಾಹಿತಿ ನೀಡದ ಬಗ್ಗೆ ಸದಸ್ಯ ಪ್ರಸನ್ನ ಅಸಮಾಧಾನ ವ್ಯಕ್ತಪಡಿಸಿದರು. ೧೦೮ ಆಂಬ್ಯುಲೆನ್ಸ್ನ್ನು ಇಲ್ಲಿಂದ ಸ್ಥಳಾಂತರ ಮಾಡಿರುವ ಬಗ್ಗೆ ಸಭೆಯಲ್ಲಿ ವ್ಯಾಪಕ ಆಕ್ಷೇಪ ವ್ಯಕ್ತವಾಯಿತು. ಕೊಡ್ಲಿಪೇಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಾಶ್ವತವಾಗಿ ಆಂಬ್ಯುಲೆನ್ಸ್ ಸೌಲಭ್ಯ ಕಲ್ಪಿಸುವಂತೆ ಸಭೆಯಲ್ಲಿ ಸಾರ್ವಜನಿಕರು ಆಗ್ರಹಿಸಿದರು. ವಿದ್ಯುತ್ ಇಲಾಖೆ ಅಪ್ಪೇಶ್ ಅವರು ಇಲಾಖೆ ಬಗ್ಗೆ ಮಾಹಿತಿ ನೀಡುವ ಸಂದರ್ಭ ಅನಿಯಮಿತ ವಿದ್ಯುತ್ ಕಡಿತದ ಸಮಸ್ಯೆ ಹೆಚ್ಚಾಗಿರುವ ಬಗ್ಗೆ ಸಭೆಯಲ್ಲಿ ಆಸಮಾಧಾನ ವ್ಯಕ್ತವಾಯಿತು. ಪ್ರಸ್ತುತ ಕಾಫಿ ಬೆಳೆಗೆ ನೀರು ಹಾಯಿಸುವುದು ಅನಿವಾರ್ಯವಾಗಿದೆ. ಇಂತಹ ಸಂದರ್ಭದಲ್ಲೇ ವೋಲ್ಟೇಜ್ ಸಮಸ್ಯೆಯ ಕಾರಣ ಕೃಷಿಕರಿಗೆ ತೊಂದರೆಯಾಗಿದೆ ಎಂದು ಸದಸ್ಯ ಶೋಬಿತ್ ಗೌಡ ದೂರಿದರು.
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುವ ಸಂದರ್ಭದಲ್ಲಿಯೂ ಬೇಕಾಬಿಟ್ಟಿ ವಿದ್ಯುತ್ ತೆಗೆಯುತ್ತಿರುವ ಬಗ್ಗೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಡಿ.ಎನ್. ವಸಂತ್ ತರಾಟೆಗೆ ತೆಗೆದುಕೊಂಡರು.
ಸರಕಾರಿ ಶಾಲೆಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿರುವ ಬಗ್ಗೆ ಶಿಕ್ಷಕಿಯರು ಸಭೆಯಲ್ಲಿ ಪ್ರಸ್ತಾಪಿಸಿದರು. ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್ ಅವರು ಇದಕ್ಕೆ ದನಿಗೂಡಿಸಿದರು. ರೂ. ೧೦ ಲಕ್ಷ ಅನುದಾನದಡಿ ಕೈಗೊಂಡ ಸ್ಥಳೀಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಕೆಲಸ ಕಳಪೆಯಾಗಿದ್ದು, ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ವಸಂತ್ ಮತ್ತು ಸೋಮಣ್ಣ ಆಗ್ರಹಿಸಿದರು. ಪಂಚಾಯಿತಿಗೆ ಬರುತ್ತಿರುವ ಮಾಸಿಕ ಆದಾಯದ ಬಗ್ಗೆ ವಾಸೀಂ ಅವರು ಸಭೆಯಲ್ಲಿ ಮಾಹಿತಿ ಬಯಸಿದರು. ಪಂಚಾಯಿತಿ ವಾಣಿಜ್ಯ ಮಳಿಗೆಗಳ ಬಾಡಿಗೆ ಸರಿಯಾಗಿ ನಿಗದಿಪಡಿಸಿಲ್ಲ. ಮಳಿಗೆಗಳನ್ನು ಬಾಡಿಗೆ ಪಡೆದ ಕೆಲವರು, ಹೆಚ್ಚಿನ ಬಾಡಿಗೆಗೆ ಬೇರೆಯವರಿಗೆ ಮಾಸಿಕ ಬಾಡಿಗೆ ನೀಡಿದ್ದಾರೆ. ಇಂತವರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು. ಟೆಂಡರ್ ವಜಾ ಮಾಡಬೇಕೆಂದು ಸಭೆಯಲ್ಲಿದ್ದವರು ಆಗ್ರಹಿಸಿದರು. ೯ & ೧೧ ಬಗ್ಗೆ ಮಾಹಿತಿ ಹಕ್ಕಿನಡಿ ಮಾಹಿತಿ ಕೇಳಿದರೆ ಮೂರು ತಿಂಗಳ ನಂತರವೂ ಮಾಹಿತಿ ನೀಡದೇ ‘ವೈಯಕ್ತಿಕ’ ಎಂದು ಹಿಂಬರಹ ನೀಡಿದ್ದಾರೆ. ಪಂಚಾಯಿತಿ ಸದಸ್ಯರಿಗೇ ಈ ರೀತಿಯಾದರೆ ಸಾರ್ವಜನಿಕರಿಗೆ ಯಾವ ರೀತಿ ಮಾಹಿತಿ ಲಭಿಸುತ್ತದೆ ಎಂದು ಸದಸ್ಯ ಶೋಬಿತ್ ಅಸಮಾಧಾನ ವ್ಯಕ್ತಪಡಿಸಿದರು.
ಶಿವಪುರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸ್ಥಳೀಯರು ಪ್ರಸ್ತಾಪಿಸಿದರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಬೆಳಿಗ್ಗೆ ೧೦ ಗಂಟೆಗೆ ಕಚೇರಿಗೆ ಆಗಮಿಸಿ ಮಧ್ಯಾಹ್ನ ೧೨ಕ್ಕೆ ವಾಪಸ್ ಹೋಗುತ್ತಿದ್ದಾರೆ ಎಂದು ಆಸಿಫ್ ಆರೋಪಿಸಿದರು.
ಸಭೆಯಲ್ಲಿ ಉಪ ಅರಣ್ಯಾಧಿಕಾರಿ ಪುನೀತ್ ಮಾಹಿತಿ ನೀಡುವ ಸಂದರ್ಭ, ತಾಲೂಕು ಅಕ್ರಮ-ಸಕ್ರಮ ಸಮಿತಿ ಮಾಜಿ ಸದಸ್ಯ ಕೆಂಚೇಶ್ವರ ಮಾತನಾಡಿ, ಊರುಡುವೆ ಸೇರಿದಂತೆ ಅರಣ್ಯ ಜಾಗದಲ್ಲಿ ಮನೆ ಕಟ್ಟಿಕೊಂಡವರಿಗೆ ಹಕ್ಕು ಪತ್ರ ನೀಡಲು ಅರಣ್ಯ ಹಕ್ಕು ಸಮಿತಿ ರಚಿಸಬೇಕು. ಗ್ರಾ.ಪಂ. ಆಡಳಿತ ಈ ಬಗ್ಗೆ ಗಮನ ಹರಿಸಬೇಕೆಂದರು. ಕಿರಿಕೊಡ್ಲಿ ಗ್ರಾಮದ ಅರುಣ ಅವರು ಮಾತನಾಡಿ, ತನ್ನ ಮನೆಯನ್ನು ಅರಣ್ಯ ಇಲಾಖೆಯವರು ಕೆಡವಿರುವುದರಿಂದ ಜೀವನ ಕಷ್ಟಕರವಾಗಿದೆ ಎಂದು ಸಭೆಯಲ್ಲಿ ಕಣ್ಣೀರಾಕಿದರು. ವಾಸಕ್ಕೆ ನಿರ್ಮಿಸಿಕೊಂಡಿರುವ ಮನೆಗಳನ್ನು ಯಾವುದೇ ಕಾರಣಕ್ಕೂ ತೆರವು ಮಾಡಬಾರದು ಎಂದು ಸಭೆ ಸೂಚಿಸಿತು.
ಕೊಡ್ಲಿಪೇಟೆಯಲ್ಲಿ ಸಂತೆ ನಡೆದ ನಂತರ ಮರ‍್ನಾಲ್ಕು ದಿನಗಳಾದರೂ ಶುಚಿಗೊಳಿಸುತ್ತಿಲ್ಲ. ಸಂತೆ ಆವರಣದಲ್ಲಿ ಶೌಚಾಲಯ ಮತ್ತು ಬೀದಿದೀಪ ಇಲ್ಲ. ಪಕ್ಕದಲ್ಲಿಯೇ ಶಾಲೆಯೂ ಇದ್ದು, ಸಂತೆಯನ್ನು ಬೇರೆಡೆಗೆ ಸ್ಥಳಾಂತರಿಸುವAತೆ, ಶಾಲೆಯ ಮುಂಭಾಗ ಅಂಗಡಿ ಮುಂಗಟ್ಟು ಹಾಕದಂತೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರಾದ ಸೋಮಣ್ಣ ಮತ್ತು ನಿಖಿಲ್ ಆಗ್ರಹಿಸಿದರು.
ಅಂಬೇಡ್ಕರ್ ಜಯಂತಿಗೆ ಮುಂಚಿತವಾಗಿ ಗ್ರಾಮಗಳನ್ನು ಸ್ವಚ್ಛಗೊಳಿಸಿ ಬೀದಿ ದೀಪಗಳನ್ನು ಸರಿಪಡಿಸುವಂತೆ ಡಿ.ಆರ್. ಜಗದೀಶ್ ಮನವಿ ಮಾಡಿದರು. ರೂ. ೪ ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಂಡಿರುವ ನಂದಿಪುರ ಕೆರೆಯಲ್ಲಿ ಜಾನುವಾರುಗಳಿಗೆ ನೀರು ಕುಡಿಯಲು ವ್ಯವಸ್ಥೆ ಇಲ್ಲದ ಕಾರಣ ತೊಂದರೆಯಾಗಿದೆ ಎಂದು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಡಿ. ಭಗವಾನ್ ಪ್ರಸ್ತಾಪಿಸಿದರು. ಈ ಬಗ್ಗೆ ಸಂಬAಧಿಸಿದ ಇಲಾಖೆಗೆ ಪತ್ರ ಬರೆಯುವಂತೆ ಸಭೆ ನಿರ್ಣಯಿಸಿತು.
ಪಂಚಾಯತ್ ರಾಜ್ ಇಲಾಖೆಯ ಅಭಿಯಂತರ ಸಲೀಂ, ನೀರಾವರಿ ಇಲಾಖೆಯ ಕೀರ್ತನ್, ಕಂದಾಯ ಇಲಾಖೆಯ ಹೋಬಳಿ ಪರಿವೀಕ್ಷಕ ಮನುಕುಮಾರ್, ಉದ್ಯೋಗ ಖಾತ್ರಿಯ ಇಂಜಿನಿಯರ್ ಕಿಶೋರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಾವಿತ್ರಮ್ಮ, ತೋಟಗಾರಿಕೆ ಇಲಾಖೆಯ ಈಶ್ವರ್ ಕಲ್ಯಾಣಿ ತಮ್ಮ ಇಲಾಖಾ ಕಾರ್ಯಕ್ರಮಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
ತಾಲೂಕು ಕೆ.ಡಿ.ಪಿ. ಸದಸ್ಯ ಔರಂಗಜೇಬ್ ಸರಕಾರದ ಯೋಜನೆಗಳ ಬಗ್ಗೆ ಮಾಹಿತಿ ಒದಗಿಸಿದರು. ಕ.ರ.ವೇ. ಅಧ್ಯಕ್ಷ ರಾಜೇಶ್, ಕೆ.ಸಿ. ಪ್ರಸನ್ನ, ಇಂದ್ರೋಜಿರಾವ್, ಸುಧೀಂದ್ರ, ಅಲ್ತಾಫ್, ಗುರು, ಸೋಮಶೇಖರ್ ಸೇರಿದಂತೆ ಇತರರು ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಸಭೆಯ ಗಮನಸೆಳೆದರು. ಸಭೆಯ ನೋಡಲ್ ಅಧಿಕಾರಿಯಾಗಿ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನಾ ಭರತ್ ಭಾಗಿಯಾಗಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಧನಂಜಯ್, ಉಪಾಧ್ಯಕ್ಷೆ ಯಶೋದಮ್ಮ, ಸದಸ್ಯರಾದ ಕೆ.ಆರ್. ಚಂದ್ರಶೇಖರ್, ಹನೀಫ್, ವಹಾಬ್, ಪ್ರಸನ್ನ, ನಗೀನಾ ಭಾನು, ಅಶ್ವಿನಿ ಮಂಜುನಾಥ್, ನಂದೀಶ್, ಮುತ್ತಯ್ಯ ಉಪಸ್ಥಿತರಿದ್ದರು.