*ಗೋಣಿಕೊಪ್ಪ, ಮಾ. ೨೭: ಅಸ್ಸಾಂ ವಲಸೆ ಕಾರ್ಮಿಕರಿಂದ ಕೊಡಗಿನ ವಾತಾವರಣದ ನೆಮ್ಮದಿಯಲ್ಲಿ ಕಲುಷಿತ ಕಾಣುತ್ತಿದೆ ಎಂದು ಪೊನ್ನಂಪೇಟೆ ತಾಲೂಕು ಕೃಷಿ ಸಮಾಜದ ಗೌರವ ಕಾರ್ಯದರ್ಶಿ, ತಾಲೂಕು ಬಗರ್‌ಹುಕುಂ ಸಮಿತಿ ಮಾಜಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ ಆತಂಕ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ವಲಸೆ ಕಾರ್ಮಿಕರು ಈ ನೆಲದಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಲೆಕ್ಕವಿಲ್ಲದಷ್ಟು ಕಾರ್ಮಿಕರು ಆಗಮಿಸುತ್ತಿರುವ ಪರಿಣಾಮ ಹೆಚ್ಚು ಸಮಸ್ಯೆಗಳು ಉದ್ಭವಿಸುತ್ತಿವೆ. ಕಾಫಿ ತೋಟ ಇನ್ನಿತರ ಕೆಲಸ ಕಾರ್ಯಗಳಿಗಾಗಿ ಕಾರ್ಮಿಕರಾಗಿ ಜಿಲ್ಲೆಗೆ ಆಗಮಿಸಿರುವ ವಲಸಿಗರು ಈ ಭಾಗದಲ್ಲಿ ಸ್ವಂತ ನೆಲೆ ಕಂಡುಕೊಳ್ಳಲು ಮುಂದಾಗುತ್ತಿದ್ದಾರೆ.

ಕೆಲಸ ನಿರ್ವಹಿಸಲು ಬಂದವರು ಇತ್ತೀಚಿನ ಬೆಳವಣಿಗೆಯಲ್ಲಿ ಗೋಣಿಕೊಪ್ಪ ಸಂತೆಗಳಲ್ಲಿ ವ್ಯಾಪಾರಿಗಳಾಗಿ ಬದಲಾಗುತ್ತಿದ್ದಾರೆ. ಇದು ಆತಂಕಕಾರಿ ಬೆಳವಣಿಗೆಯಾಗಿದೆ.

ಈ ವಿಚಾರದಲ್ಲಿ ನಿರ್ಲಕ್ಷ ವಹಿಸದೆ ಪೊಲೀಸರು ಕ್ರಮ ಕೈಗೊಳ್ಳಲು ಮುಂದಾಗಬೇಕಿದೆ. ತೋಟದ ಮಾಲೀಕರು ತಮ್ಮ ತೋಟದಲ್ಲಿನ ಕಾರ್ಮಿಕರ ಬಗ್ಗೆ ಪೂರ್ಣ ಮಾಹಿತಿಯನ್ನು ಒದಗಿಸಿಕೊಡಬೇಕಾಗಿದೆ. ಇಲ್ಲವಾದಲ್ಲಿ ಉಂಟಾಗುವ ಅನಾಹುತ, ಆಘಾತಗಳಿಗೆ ಹೊಣೆಗಾರರಾಗಬೇಕಾದ ಪರಿಸ್ಥಿತಿ ಎದುರಾಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಕೊಡಗಿನಲ್ಲಿರುವ ಅಸ್ಸಾಂ ಕಾರ್ಮಿಕರು ಈಗಾಗಲೇ ಸಣ್ಣಪುಟ್ಟ ದಾಂಧಲೆಗಳನ್ನು ನಡೆಸುತ್ತಿದ್ದು, ಕಾಫಿ, ಕಾಳುಮೆಣಸು ಕಳ್ಳತನಕ್ಕೆ ಮುಂದಾಗುತ್ತಿದ್ದಾರೆ. ವ್ಯಾಪಾರ ವಹಿವಾಟುಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಸಂತೆಯ ದಿನಗಳಲ್ಲಿ ಇಲ್ಲಿನ ಸ್ಥಳೀಯರ ಮೇಲೆ ಹಲ್ಲೆಗೂ ಮುಂದಾಗುತ್ತಿರುವ ಘಟನೆಗಳು ನಡೆಯುತ್ತಿವೆ.

ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸದೆ ಇದ್ದರೆ ಮುಂದಿನ ಬೆಳವಣಿಗೆಯಲ್ಲಿ ಬಹುದೊಡ್ಡ ಅಪಾಯವನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು. ಅಸ್ಸಾಂ ಕಾರ್ಮಿಕರೆಂದು ಹೇಳಿಕೊಳ್ಳುವ ಮೂಲತಃ ಬಾಂಗ್ಲಾದೇಶದವರ ನುಸುಳುವಿಕೆಯು ಕೊಡಗಿನ ಕಾರ್ಮಿಕರ ವಲಸೆ ಪರಿಸ್ಥಿತಿಯಲ್ಲಿ ಗೋಚರಿಸುತ್ತಿದೆ.

ಈ ಬಗ್ಗೆ ಸೂಕ್ತ ತನಿಖೆಯಾಗಬೇಕು. ಕೊಡಗಿಗೆ ಆಗಮಿಸುವ ವಲಸೆ ಕಾರ್ಮಿಕರ ಬಗ್ಗೆ ಜಿಲ್ಲಾಡಳಿತ, ಶಾಸಕರುಗಳು ಗಂಭೀರವಾಗಿ ಪರಿಗಣಿಸಿ ಗ್ರಾಮಮಟ್ಟದಲ್ಲಿ ಪೊಲೀಸ್ ಬೂತ್‌ಗಳನ್ನು ತೆರೆದು ಕಾರ್ಮಿಕರ ನೋಂದಾವಣೆಗೆ ಮುಂದಾಗಬೇಕು ಮತ್ತು ಅವರಿಗೆ ತಾತ್ಕಾಲಿಕ ಕಾರ್ಮಿಕರು ಎಂಬ ಗುರುತಿನ ಚೀಟಿಯನ್ನು ನೀಡಿ ವಲಸೆ ಬಂದ ಕಾರ್ಮಿಕರ ಅಂಕಿ ಅಂಶವನ್ನು ಪಡೆದುಕೊಳ್ಳಬೇಕು. ವಲಸೆ ಕಾರ್ಮಿಕರಿಂದ ಮಾಲೀಕರಿಗೆ ಎದುರಾಗಬಹುದಾದ ಅಪಾಯವನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಬೇಕಾದ ಅಗತ್ಯತೆ ಇದೆ ಎಂದು ಒತ್ತಾಯಿಸಿದ್ದಾರೆ.