ಕಣಿವೆ, ಮಾ. ೨೮ : ಬುಧವಾರ ಸಂಜೆ ಸುರಿದ ಭಾರೀ ಮಳೆ ಗಾಳಿಗೆ ಕುಶಾಲನಗರ ತಾಲೂಕಿನ ಹುದುಗೂರು ಗ್ರಾಮದ ರವೀಂದ್ರ ಎಂಬ ಕೃಷಿಕರ ಮನೆ ಸಂಪೂರ್ಣ ನಾಶವಾಗಿದೆ. ಅಂದರೆ ಮನೆಯ ಮೇಲೆ ಮರ ಬಿದ್ದ ಪರಿಣಾಮ ಮನೆಯ ಮೇಲ್ಛಾವಣಿಗೆ ಅಳವಡಿಸಿದ್ದ ಶೀಟುಗಳು ಹಾಗೂ ಹೆಂಚುಗಳು ಪೂರ್ಣ ಜಖಂಗೊAಡಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಮಳೆಯಿಂದಾಗಿ ಕೆಲವು ದಿನಗಳ ಹಿಂದೆ ಕಟಾವು ಮಾಡಿ ಶೇಖರಿಸಿಟ್ಟಿದ್ದ ಭತ್ತದ ಫಸಲು ತುಂಬಿದ ಚೀಲಗಳು ನೀರಿಗೆ ಆಹುತಿಯಾಗಿವೆ.
ಮನೆ ಮಂದಿ ಮಲಗುವ ಹಾಸಿಗೆ ಹೊದಿಕೆಗಳು, ಪಾತ್ರೆ ಸಾಮಗ್ರಿಗಳು, ಅಡುಗೆ ಮನೆ ಸಂಬಾರ ಪದಾರ್ಥಗಳು ಎಲ್ಲವೂ ಬಹುತೇಕ ಹಾಳಾಗಿವೆ. ಸ್ಥಳಕ್ಕೆ ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಭೇಟಿ ನೀಡಿ ಪರಿಶೀಲಿಸಿದರು. ಗ್ರಾ.ಪಂ. ಸದಸ್ಯರಾದ ಅನಂತು, ಶಿವಕುಮಾರ್ ಹಾಗೂ ಗ್ರಾಮಸ್ಥರಿದ್ದರು.