*ಗೋಣಿಕೊಪ್ಪ, ಮಾ. ೨೮: ದ್ವಿಚಕ್ರ ಚಾಲನೆ ಮಾಡುತ್ತಿದ್ದ ಅಪ್ರಾಪ್ತ ಯುವಕರ ಪೋಷಕರಿಗೆ ಗೋಣಿಕೊಪ್ಪ ಪೊಲೀಸರು ದಂಡ ವಿಧಿಸಿದ್ದಾರೆ.

ಠಾಣಾಧಿಕಾರಿ ಪ್ರದೀಪ್ ಕುಮಾರ್ ಮತ್ತು ಸಿಬ್ಬಂದಿಗಳು ಪಟ್ಟಣದಲ್ಲಿ ವಾಹನ ಮತ್ತು ಚಾಲಕರ ದಾಖಲಾತಿ ಪರಿಶೀಲನೆ ನಡೆಸುತ್ತಿದ್ದಾಗ ಅಪ್ರಾಪ್ತ ಯುವಕರನ್ನ ಎಚ್ಚರಿಸಿ, ಪೋಷಕರಿಗೆ ತಲಾ ರೂ. ೨೫,೦೦೦ ದಂಡ ವಿಧಿಸಿದ್ದಾರೆ.

ಮೂಲತಃ ಗೋಣಿಕೊಪ್ಪ ನಿವಾಸಿ ಮತ್ತು ಕೈಕೇರಿ ನಿವಾಸಿಗಳಾಗಿರುವ ಇಬ್ಬರು ಪೋಷಕರಿಗೆ ಎರಡು ಪ್ರಕರಣದ ಹಿನ್ನೆಲೆಯಲ್ಲಿ ಒಟ್ಟು ೫೦ ಸಾವಿರ ರೂಪಾಯಿಗಳ ದಂಡ ವಿಧಿಸಲಾಗಿದೆ.

ಒಂದು ದ್ವಿಚಕ್ರ ವಾಹನದಲ್ಲಿ ಮೂವರು, ಮತ್ತೊಂದು ದ್ವಿಚಕ್ರದಲ್ಲಿ ಇಬ್ಬರು ಅಪ್ರಾಪ್ತ ಬಾಲಕರು ಚಾಲನೆ ಮಾಡುತ್ತಿದ್ದ ಕಾರಣ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಪ್ರಾಪ್ತ ಮಕ್ಕಳು ಒತ್ತಡ ಹಾಕುತ್ತಾರೆ ಎಂದು ಪೋಷಕರು ವಾಹನ ನೀಡಿ ಚಾಲನೆಗೆ ಅವಕಾಶ ಕೊಡುವುದು, ಇಬ್ಬರಿಗಿಂತ ಅಧಿಕ ಮಂದಿ ವಾಹನ ಸವಾರಿ ಮಾಡುವುದು, ಪರವಾನಗಿ ಇಲ್ಲದೇ ವಾಹನ ಚಾಲನೆ ಕಾನೂನಿನಲ್ಲಿ ಅಪರಾಧ. ಹೀಗೆ ವಾಹನ ಚಾಲನೆ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದಲ್ಲಿ ಪೋಷಕರಿಗೆ ರೂ. ೨೫,೦೦೦ ನ್ಯಾಯಾಲಯದಲ್ಲಿ ದಂಡ ಹಾಗೂ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಠಾಣಾಧಿಕಾರಿ ಪ್ರದೀಪ್‌ಕುಮಾರ್ ಎಚ್ಚರಿಸಿದರು.

ವಾಹನ ರಸ್ತೆಯಲ್ಲಿ ಚಲಾಯಿಸುವಾಗ ಚಾಲಕರು ರಸ್ತೆ ಸುರಕ್ಷತೆ ಬಗ್ಗೆ ಮಾಹಿತಿ ಹೊಂದಿರಬೇಕು. ವಾಹನ ಚಾಲನಾ ಪರವಾನಗಿ ಹಾಗೂ ಜೀವವಿಮೆ ಪಾವತಿಸಿರಬೇಕು. ವಾಹನಕ್ಕೆ ಸಂಬAಧಿಸಿದ ದಾಖಲಾತಿ ಪತ್ರ ವಾಹನದಲ್ಲಿ ಇರಿಸಿಕೊಳ್ಳಬೇಕು. ಆದ್ದರಿಂದ ಕಾನೂನು ರೀತಿಯಲ್ಲಿ ವಾಹನ ಚಾಲನೆ ಮಾಡಿ ಎಂದು ಸವಾರರಿಗೆ ಮಾಹಿತಿ ನೀಡಿದರು.