*ಗೋಣಿಕೊಪ್ಪ, ಮಾ. ೨೮: ಸರ್ಕಾರ ರೈತರ ಕಣ್ಣೊರೆಸುವ ತಂತ್ರಬಿಟ್ಟು ರೈತರ ನೈಜ ಸಮಸ್ಯೆ ಗಳನ್ನು ಬಗೆಹರಿಸಲು ಗಂಭೀರ ಚಿಂತನೆ ನಡೆಸಬೇಕು ಎಂದು ಪ್ರಗತಿಪರ ರೈತ ಬೋಸ್ ಮಂದಣ್ಣ ಅಭಿಪ್ರಾಯ ಮಂಡಿಸಿದರು.

‘ಸಸ್ಯ ತಳಿಗಳ ರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯ್ದೆ' ಈ ವಿಚಾರವಾಗಿ ಗೋಣಿಕೊಪ್ಪ ಕೆವಿಕೆ ಸಭಾಂಗಣದಲ್ಲಿ, ಬೆಂಗಳೂರು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಕೃಷಿ ತಂತ್ರಜ್ಞಾನ ಅಳವಡಿಕೆ ಸಂಶೋಧನಾ ಸಂಸ್ಥೆ ಮತ್ತು ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ ಆಯೋಜಿಸಿದ ವಿಚಾರಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದರು.

ನೆಪ ಮಾತ್ರಕ್ಕೆ ಈ ದೇಶದ ಬೆನ್ನೆಲುಬು ರೈತರು ಎಂದು ಎಲ್ಲಾ ಸರ್ಕಾರಗಳು ಕನಿಕರವನ್ನು ತೋರುತ್ತವೆ. ಆದರೆ, ಯಾವುದೇ ಸರ್ಕಾರವು ರೈತರ ಸಮಸ್ಯೆಗಳಿಗೆ ಮನ ಪೂರ್ವಕ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲತೆಯನ್ನು ಹೊಂದಿದೆ. ನೈಜ ಚಿಂತನೆ ಮತ್ತು ಕಾಳಜಿಯಿಂದ ಸಮಸ್ಯೆಗೆ ಪರಿಹಾರ ನೀಡಲು ಸರ್ಕಾರ ಮುಂದಾಗಬೇಕು ಎಂದು ಹೇಳಿದರು.

ಇಂದು ಬೆಳೆಗಾರ ಮತ್ತು ರೈತರಿಗೆ ಕಾರ್ಮಿಕರ ಸಮಸ್ಯೆ ಎದುರಾಗಿದೆ ಸರ್ಕಾರ ಉಚಿತ ಯೋಜನೆಗಳನ್ನು ನೀಡಿ ಕಾರ್ಮಿಕರ ಬದುಕುವ ಭರವಸೆ, ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ.

ಆಹಾರ ಧಾನ್ಯ ವಸ್ತುಗಳನ್ನು ಅಗತ್ಯ ಮೀರಿ ಉಚಿತವಾಗಿ ವಿತರಿಸುತ್ತಿರು ವುದರಿಂದ ಕಾರ್ಮಿಕರು ಸೋಮಾರಿಗಳಾಗುತ್ತಿದ್ದಾರೆ ಎಂದರು.

ರೈತರು ಸ್ವಲ್ಪಮಟ್ಟಿಗಾದರೂ ಆಧುನಿಕ ಕೃಷಿಯನ್ನು ಅನುಸರಿಸ ಬೇಕು. ತಂತ್ರಜ್ಞಾನಗಳ ಅಳವಡಿಕೆ ಯಿಂದ ಕೃಷಿಯಲ್ಲಿ ಉನ್ನತೀಕರಣ ಹೊಂದಬಹುದು.

೮೦ ದೇಶಗಳಲ್ಲಿ ಕಾಫಿ ಬೆಳೆಯಲಾಗುತ್ತಿದೆ. ಆ ದೇಶಗಳಲ್ಲಿ ಕಾರ್ಮಿಕರಿಗೆ ಶೇ. ೨೫ ರಷ್ಟು ವೆಚ್ಚ ಮಾಡಿದರೆ ನಮ್ಮ ಭಾರತದಲ್ಲಿ ಶೇ. ೬೫ ವೆಚ್ಚ ಮಾಡಲಾಗುತ್ತಿದೆ. ಕೊಡಗಿನಲ್ಲಿ ಭಾರತ ದೇಶದಲ್ಲಿನ ಶೇ. ೪೦ ರಷ್ಟು ಕಾಫಿಯನ್ನು ಬೆಳೆಯಲಾಗುತ್ತಿದ್ದರೂ, ಇಂದಿನ ಹವಾಮಾನ ಬದಲಾವಣೆ ಯಿಂದ ಕಾಫಿಯ ಇಳುವರಿ ಕುಸಿಯುತ್ತಿದೆ. ವಾತಾವರಣಕ್ಕೆ ಅನುಗುಣವಾಗಿ ಕಾಫಿ ಬೆಳೆಯುವ ಪದ್ಧತಿಗೆ ತೆರೆದುಕೊಳ್ಳಬೇಕು ಎಂದರು.

ಹೊಸ ತಳಿಗಳ ಅಭಿವೃದ್ಧಿಗೆ ವ್ಯವಸ್ಥಿತ ಮಾರುಕಟ್ಟೆಯ ಸೃಷ್ಟಿ ಪ್ರಬಲವಾಗಿ ನಡೆಯಬೇಕಾಗಿದೆ. ಮಹಿಳೆಯರು ಕೃಷಿಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವ ಅವಶ್ಯಕತೆ ಇದೆ.

ಕೊಡಗಿನಲ್ಲಿ ಜೇನು ಕೃಷಿ ಪ್ರಾಮುಖ್ಯತೆಯನ್ನು ಹೊಂದಿದೆ. ಬೀದಿ ಬದಿಗಳಲ್ಲಿ ಮಾರಾಟ ಮಾಡುವ ಜೇನುಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳುತ್ತಿಲ್ಲ. ಇದರಿಂದ ಕೊಡಗಿನ ಜೇನಿನ ಬಗ್ಗೆ ಅಪಸ್ವರಗಳು ಕೇಳಿ ಬರುತ್ತಿದ್ದು, ನಂಬಿಕೆಗಳು ಕಳೆದುಕೊಳ್ಳುತ್ತಿದೆ. ಈ ವಿಚಾರದಲ್ಲಿ ಎಚ್ಚೆತ್ತುಕೊಳ್ಳದಿದ್ದರೆ ಕೊಡಗಿನ ಜೇನು ಕೃಷಿಯಲ್ಲಿ ಉಂಟಾಗಬಹುದಾದ ಅನಾಹುತವನ್ನು ಎದುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಪ್ರಭಾಕರ್ ಮಾತನಾಡಿ ಕೊಡಗಿನ ಕಾಫಿ, ಕಾಳುಮೆಣಸು, ಭತ್ತ ಮತ್ತು ಇನ್ನಿತರ ತರಕಾರಿ ಹಣ್ಣುಗಳಲ್ಲಿ ವೈವಿಧ್ಯತೆಯನ್ನು ಹೊಂದಿದೆ ಇಂತಹ ವಿಶಿಷ್ಟ ತಳಿಗಳನ್ನು ಉಳಿಸಿ ಬೆಳೆಸುವ ಕಾರ್ಯ ನಡೆಸಬೇಕಾಗಿದೆ ರೈತರು ತಾವು ಕಂಡುಕೊAಡ ಹೊಸ ತಳಿಗಳ ಬಗ್ಗೆ ನೋಂದಾಯಿಸಿಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿವಮೂರ್ತಿ, ಕಾಫಿ ಬೋರ್ಡ್ ಉಪ ನಿರ್ದೇಶಕಿ ಶ್ರೀದೇವಿ ರೈತರಿಗೆ ಉಪಯುಕ್ತ ಸಲಹೆಗಳನ್ನು ನೀಡಿದರು.

ಪ್ರಗತಿಪರ ರೈತರುಗಳಾದ, ರಾಮಚಂದ್ರ ರಾವ್, ಪೂಣಚ್ಚ, ರವಿಶಂಕರ್, ಅಪ್ತರ್, ದೀರ್ಘಕೇಶಿ ಶಿವಣ್ಣ ಇವರುಗಳನ್ನು ಸನ್ಮಾನಿಸಲಾಯಿತು. ಕೃಷಿ ಉಪಯುಕ್ತ ೩ ಕೈಪಿಡಿಗಳನ್ನು ಬಿಡುಗಡೆ ಮಾಡಲಾಯಿತು. ಕೆವಿಕೆ ವಿಜ್ಞಾನಿ ಡಾ. ವೀರೇಂದ್ರ, ಚೆಟ್ಟಳಿ ಮುಖ್ಯಸ್ಥ ಡಾ. ರಾಜೇಂದ್ರ ಹಾಗೂ ರೈತರು ಹಾಜರಿದ್ದರು.