ಕುಶಾಲನಗರ, ಮಾ. ೨೮: ಭಾಷೆ ಉಳಿಸಿ ಬೆಳೆಸುವ ಕೆಲಸದಲ್ಲಿ ಮಹಿಳೆಯರ ಪಾತ್ರ ಪ್ರಮುಖ ಎಂದು ಸಾಹಿತಿ ಐಚಂಡ ರಶ್ಮಿ ಮೇದಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಕುಶಾಲನಗರ ಕೊಡವ ಸಮಾಜದಲ್ಲಿ ಕೊಡವ ಸಮಾಜ ಮತ್ತು ಪೊಮ್ಮಕ್ಕಡ ಕೂಟ ಆಶ್ರಯದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಭಾಷೆ - ಸಂಸ್ಕೃತಿ ಜೊತೆ ಜೊತೆಯಾಗಿ ಸಾಗಬೇಕು. ಕೊಡವ ಭಾಷೆ ಸ್ಥಾನಮಾನ ನಶಿಸದಂತೆ ಎಚ್ಚರಿಕೆ ವಹಿಸಬೇಕು. ಭಾಷೆ ಸಂಸ್ಕೃತಿಯ ಬಗ್ಗೆ ಪ್ರತಿಯೊಬ್ಬರು ಕಾಳಜಿ ವಹಿಸಬೇಕು. ತಾಯಿ ಭಾಷೆ ಉಳಿವು ಅಗತ್ಯವಾಗಿದೆ.

ಆಂಗ್ಲ ಭಾಷೆ ವ್ಯಾಮೋಹ ಅತಿಯಾಗಬಾರದು. ಕೊಡವ ಭಾಷೆ ಬಳಕೆ ಪ್ರತಿನಿತ್ಯ ವ್ಯವಹಾರದಲ್ಲಿ ಬಳಸುವಂತಾಗಬೇಕು ಎಂದು ಕರೆ ನೀಡಿದರು. ಮನೆಯಲ್ಲಿ ಮಕ್ಕಳಿಗೆ ಸಂಸ್ಕಾರ, ಭಾಷೆ, ಸಂಪ್ರದಾಯದ ಬಗ್ಗೆ ಅರಿವು ಮೂಡಿಸುವಂತಹ ಕೆಲಸ ನಿರಂತರವಾಗಿ ಆಗಬೇಕು. ಮಹಿಳೆಯರು ಕೀಳರಿಮೆ ತೊರೆದು ಸ್ವಾವಲಂಬಿ ಬದುಕು ಕಾಣುವಂತಾಗಬೇಕು. ಆರ್ಥಿಕ ಬೆಳವಣಿಗೆ ಕಾಣುವ ಮೂಲಕ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ಪಾತ್ರ ವಹಿಸುವ ಜೊತೆಗೆ ಸಮರ್ಥ ಜವಾಬ್ದಾರಿ ನಿಭಾಯಿಸಬೇಕು ಎಂದರು.

ಮಹಿಳಾ ದಿನಾಚರಣೆ ಕಾರ್ಯಕ್ರಮ ಅಂಗವಾಗಿ ಮಹಿಳೆಯರಿಗೆ ಹಗ್ಗಜಗ್ಗಾಟ, ಬಾಂಬ್ ಇನ್ ದ ಸಿಟಿ, ಬಾಸ್ಕೆಟ್‌ಗೆ ಬಾಲ್ ಹಾಕುವುದು ಮತ್ತು ಕುಟುಂಬದ ಹೆಸರು ಹೇಳುವುದು ಮತ್ತಿತರ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಾಧಕಿಯರಾದ ಬಾಚರಣಿಯಂಡ ರಾಣು ಅಪ್ಪಣ್ಣ, ಪಾಸುರ ಇಂದಿರಾ ಮುತ್ತಣ್ಣ, ಐಮುಡಿಯಂಡ ಶೈಲ ಕುಶಾಲಪ್ಪ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ವಿಜೇತರಾದ ಸ್ಪರ್ಧಿಗಳಿಗೆ ಬಹುಮಾನ ವಿತರಣೆ ನಡೆಯಿತು. ಕುಶಾಲನಗರ ಕೊಡವ ಸಮಾಜ ಅಧ್ಯಕ್ಷ ವಾಂಚೀರ ಮನು ನಂಜುAಡ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಐಲಪಂಡ ಸಂಜು ಬೆಳ್ಳಿಯಪ್ಪ, ಖಜಾಂಚಿ ಬೊಳ್ಳಚಂಡ ಸನ್ನಿ ಮುತ್ತಣ್ಣ ಮತ್ತು ಸಮಾಜದ ನಿರ್ದೇಶಕರು ಇದ್ದರು.