ಮಡಿಕೇರಿ, ಮಾ. ೨೮: ಜನವಸತಿ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿಗೆ ವಿರೋಧ ವ್ಯಕ್ತಪಡಿಸಿ ಮಾಲ್ದಾರೆ ಗ್ರಾಮ ಪಂಚಾಯಿತಿ ಮುಂದೆ ನಡೆಯುತ್ತಿರುವ ಆಹೋರಾತ್ರಿ ಪ್ರತಿಭಟನೆ ೫ನೇ ದಿನಕ್ಕೆ ಮುಂದುವರೆದಿದ್ದು ಇಂದಿನಿAದ ಉಪವಾಸ ಸತ್ಯಾಗ್ರಹ ಪ್ರತಿಭಟನೆ ಮುಂದುವರಿಸಿದ್ದಾರೆ.
ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಒತ್ತಾಯಿಸಿ ಮಾಲ್ದಾರೆಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಹೋರಾಟ ತೀವ್ರ ರೀತಿಯ ಸ್ವರೂಪ ಪಡೆದುಕೊಳ್ಳುತ್ತಿದೆ. ದಿನನಿತ್ಯ ಹೋರಾಟದಲ್ಲಿ ರಾಜ್ಯದ ವಿವಿಧ ಸಂಘಟನೆಗಳ ಮುಖಂಡರುಗಳು ಜಿಲ್ಲೆಯ ಸಂಘ ಸಂಸ್ಥೆಗಳ ಪ್ರಮುಖರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟಕ್ಕೆ ಬೆಂಬಲ ಸೂಚಿಸಿ ಸಾತ್ ನೀಡುತ್ತಿದ್ದಾರೆ.
ಕಳೆದ ೫ ದಿನಗಳಿಂದ ನಡೆಯುತ್ತಿರುವ ಹೋರಾಟಕ್ಕೆ ಯಾವುದೇ ಅಧಿಕಾರಿಗಳು ಬಾರದೆ ಅಸಹಾಯಕತೆ ತೋರುತ್ತಿರುವ ಹಿನ್ನೆಲೆ ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾರಣವಾಗಿದೆ.
ಬೇಡಿಕೆ ಈಡೇರುವರೆಗೂ ಹೋರಾಟ ಮುಂದುವರಿಸುವುದಾಗಿ ಹೋರಾಟದ ನೇತೃತ್ವ ವಹಿಸಿರುವ ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಆಟ್ರಂಗಡ ದಿವಿಲ್ ಕುಮಾರ್ ಎಚ್ಚರಿಸಿದ್ದಾರೆ.
ವೀರಾಜಪೇಟೆ ತಾಲೂಕಿನ, ಮಾಲ್ದಾರೆ ಗ್ರಾಮ ಪಂಚಾಯಿತಿ ಚೊಟ್ಟೆಪಾಳಿ (ಕಲ್ಲಳ್ಳ) ಜಾಗದಲ್ಲಿ ಕಸ ವಿಲೇವಾರಿಗೆ ಗುರುತಿಸಿರುವ ಜಾಗದ ಸುತ್ತಮುತ್ತಲಿನಲ್ಲಿ ಹಲವು ಕುಟುಂಬಗಳು ವಾಸವಾಗಿದ್ದು ಜನವಸತಿ ಪ್ರದೇಶವಾಗಿದೆ. ಸಮೀಪದಲ್ಲಿ ಅರಣ್ಯ ಪ್ರದೇಶವಿದ್ದು ತೋಡು ನೀರಿನ ಮೂಲಕ ಲಕ್ಷö್ಮಣತೀರ್ಥ ನದಿ ಸೇರುತ್ತಿದೆ.
ಶಾಲಾ ವಿದ್ಯಾರ್ಥಿಗಳು ಸಾರ್ವಜನಿಕರು ನಡೆದಾಡುವ ರಸ್ತೆಯೂ ಆಗಿದ್ದು ತ್ಯಾಜ್ಯ ವಿಲೇವಾರಿಗೆ ಮುಂದಾದಲ್ಲಿ ಪರಿಸರ, ನೀರು ಹಾಳಾಗುವುದರೊಂದಿಗೆ ಸ್ಥಳೀಯ ನಿವಾಸಿಗಳು ಸಾಂಕ್ರಾಮಿಕ ರೋಗಗಳೊಂದಿಗೆ ಮೂಗು ಮುಚ್ಚಿ ಜೀವನ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಮಳೆಗಾಲ ಸಂದರ್ಭದಲ್ಲಿ ತೋಡಿನ ಮೂಲಕ ನೀರು ತುಂಬುವ ಪ್ರದೇಶವಾಗಿದ್ದು ತ್ಯಾಜ್ಯ ವಿಲೇವಾರಿ ಮಾಡಿದಲ್ಲಿ ನೀರು ಮಲಿನದೊಂದಿಗೆ ಲಕ್ಷö್ಮಣ ತೀರ್ಥ ನದಿ ಸೇರಲಿದೆ.
ಪ್ರಾಣಿಗಳು ಜಾನುವಾರಗಳು ತೋಡು ನೀರನ್ನೆ ಅವಲಂಬಿತರಾಗಿರುವುದರಿAದ ಪ್ರಾಣಿ ಪಕ್ಷಿಗಳಿಗೂ ಸಂಚಕಾರ ಎದುರಾಗಲಿದೆ. ಸುತ್ತಮುತ್ತಲ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದೆ ಕೊಳಚೆ ಪ್ರದೇಶವಾಗಿ ಮಾರ್ಪಾಡಾಗುವ ಸಂಭವ ಇರುವುದರಿಂದ ಜನ ವಸತಿ ಪ್ರದೇಶ ಬಿಟ್ಟು ಬೇರೆ ಕಡೆಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಜಾಗ ಗುರುತಿಸಿ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡಲಿ; ಯಾವುದೇ ಕಾರಣಕ್ಕೂ ಉದ್ದೇಶಿತ ಜಾಗದಲ್ಲಿ ತ್ಯಾಜ್ಯ ಘಟಕ ನಿರ್ಮಾಣವನ್ನ ಕೈಬಿಡಬೇಕೆಂದು ದಿವಿಲ್ ಕುಮಾರ್ ಒತ್ತಾಯಿಸಿದ್ದಾರೆ
ಸಂಸದರ ಭೇಟಿ : ಕೊಡಗು - ಮೈಸೂರು ಲೋಕಸಭಾ ಸದಸ್ಯ ಯದುವೀರ್ ಒಡೆಯರ್ ಮಾಲ್ದಾರೆಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಹೋರಾಟದ ಸಮಸ್ಯೆಗಳನಾಲಿಸಿದರು.
ತ್ಯಾಜ್ಯ ವಿಲೇವಾರಿಗೆ ನಿಗದಿಯಾಗಿರುವ ಸ್ಥಳವನ್ನು ಪರಿಶೀಲನೆ ಮಾಡಿ ದೂರವಾಣಿ ಮೂಲಕ ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.
ನಂತರ ‘ಶಕ್ತಿ’ಯೊಂದಿಗೆ ಮಾತನಾಡಿ; ಜನವಸತಿ ಪ್ರದೇಶ, ತೊಡು ನೀರು ಹರಿಯುವ ಸ್ಥಳ, ಸೇರಿದಂತೆ ಹಲವು ಕಾರಣಗಳಿದ್ದು ತ್ಯಾಜ್ಯ ವಿಲೇವಾರಿಗೆ ಸೂಕ್ತವಾದದ್ದಲ್ಲ. ನಿಯಮಗಳನ್ನು ಮೀರಿ ಮಾಡುವುದು ಸರಿಯಲ್ಲ; ಸಂಬAಧಪಟ್ಟ ಅಧಿಕಾರಿಗಳಿಗೆ ಪರಿಶೀಲನೆಗೆ ಸೂಚನೆ ನೀಡಲಾಗಿದೆ ಎಂದರು.
ಈ ಸಂದರ್ಭ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಸ್ಥಳೀಯರು ಹಾಜರಿದ್ದರು.
-ಎಸ್.ಎಂ. ಮುಬಾರಕ್