ಮಡಿಕೇರಿ, ಮಾ. ೨೮: ಜಿಲ್ಲೆಯ ಕ್ರೀಡಾಭಿಮಾನಿಗಳು ಕೂತಹಲದಿಂದ ಕಾಯುತ್ತಿದ್ದ ಹಾಕಿ ಕದನಕ್ಕೆ ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನ ಅಖಾಡವಾಗಿ ಸಿದ್ಧವಾಗಿದ್ದು, ಅಧಿಕೃತ ಪಂದ್ಯಾವಳಿಗೂ ಮುನ್ನ ಶುಕ್ರವಾರ ನಡೆದ ಪ್ರದರ್ಶನ ಪಂದ್ಯ ನೋಡುಗರ ಮೈನವಿರೇಳಿಸಿತು.
ಬಿಸಿಲಿನ ಝಳದ ನಡುವೆ ಧೂಳೆಬ್ಬಿಸುವ ಮೈದಾನದಲ್ಲಿ ರೋಚಕ ಹಾಕಿ ಪಂದ್ಯಾಟ ನೋಡುಗರ ಮೈಜುಮ್ಮೆನಿಸುವಂತೆ ಮಾಡಿತು. ಯುವಪಡೆಯ ಚಾಕಚಕ್ಯತೆ ಆಟ, ಮಿಂಚಿನ ಓಟ ರಸದೌತಣವನ್ನು ಉಣಬಡಿಸಿದರೆ ತಾ. ೨೯ ರಿಂದ (ಇಂದಿನಿAದ) ಆರಂಭಗೊಳ್ಳಲಿರುವ ಕೊಡವ ಕುಟುಂಬಗಳ ನಡುವಿನ ಹಣಾಹಣಿ ರೋಚಕತೆಯನ್ನು ಸೃಷ್ಟಿಸಿದೆ.
ಮೊದಲ ಪ್ರದರ್ಶನ ಪಂದ್ಯ ಮುದ್ದಂಡ ಕುಟುಂಬ ಹಾಗೂ ಕೊಡಗು ಜಿಲ್ಲಾಡಳಿತ ನಡುವೆ ನಡೆಯಿತು. ಪೊಲೀಸ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಜಿಲ್ಲಾಡಳಿತವನ್ನು ತಂಡವನ್ನು ಪ್ರತಿನಿಧಿಸಿದರು. ತಲಾ ೧೫ ನಿಮಿಷಗಳ ಎರಡು ಸುತ್ತುಗಳಲ್ಲಿ ನಡೆದ ಪಂದ್ಯಾಟದಲ್ಲಿ ಮೊದಲಾರ್ಧ ಉಭಯ ತಂಡಗಳು ಗೋಲು ಗಳಿಸುವಲ್ಲಿ ವಿಫಲಗೊಂಡವು. ಮೊದಲಾರ್ಧದಲ್ಲಿ ಮುದ್ದಂಡ ತಂಡಕ್ಕೆ ಮೂರು ಪೆನಾಲ್ಟಿ ಶೂಟೌಟ್‌ನ ಅವಕಾಶ ದೊರೆತರೂ ಅದನ್ನು ಗೋಲಾಗಿ ಪರಿವರ್ತಿಸುವಲ್ಲಿ ಆಟಗಾರರು ವಿಫಲರಾದರು.
ದ್ವಿತೀಯಾರ್ಧದಲ್ಲಿ ಆಟದ ವೇಗ ಹೆಚ್ಚಿಸಿದ ಮುದ್ದಂಡ ತಂಡ ಜಿಲ್ಲಾಡಳಿತ ತಂಡದ ವಿರುದ್ಧ ಸರಣಿ ಗೋಲುಗಳನ್ನು ಹಾಕಿದರು. ಅತಿಥಿ ಆಟಗಾರ ಅಮ್ಮಣಿಚಂಡ ವಿಘ್ನೇಶ್ ಬೋಪಣ್ಣ ಮುದ್ದಂಡ ಪರ ಮೊದಲು ಗೋಲು ಬಾರಿಸಿ ಮುನ್ನಡೆ ತಂದು ಆತ್ಮವಿಶ್ವಾಸ ಮೂಡಿಸಿದರು. ಇದರ ಬೆನ್ನಲ್ಲೇ ಮುದ್ದಂಡ ಆದ್ಯ ಪೂವಣ್ಣ, ನೆಲ್ಲಮಕ್ಕಡ ಚಂಗಪ್ಪ ತಲಾ ಒಂದು ಗೋಲುಗಳನ್ನು ಬಾರಿಸಿ ತಂಡದ ಮೊತ್ತ ಹೆಚ್ಚಿಸಲು ಕಾರಣಕರ್ತರಾದರು. ೨ನೇ ಅವಧಿಯಲ್ಲಿಯೂ ಮುದ್ದಂಡಕ್ಕೆ ಮತ್ತೇ ಮೂರು ಪೆನಾಲ್ಟಿ ಅವಕಾಶಗಳು ಸಿಕ್ಕರೂ ಅದು ಗೋಲುಗಳಾಗಿ ಪರಿವರ್ತನೆಯಾಗಲಿಲ್ಲ. ಕೊನೆಗೆ ೩-೦ ಗೋಲುಗಳ ಅಂತರದಲ್ಲಿ ಮುದ್ದಂಡ ಗೆಲುವಿನ ನಗೆ ಬೀರಿತು.
ಕೊಡಗು ಜಿಲ್ಲಾಡಳಿತ ಪರ ಪೊಲೀಸ್ ಅಧಿಕಾರಿಗಳಾದ ಐ.ಪಿ. ಮೇದಪ್ಪ, ಅನೂಪ್ ಮಾದಪ್ಪ ಸೇರಿದಂತೆ ಬಿ.ಕೆ. ಸುರೇಶ್, ಎ.ಕೆ. ಗಣಪತಿ, ಜೋಶಿ ಕುಟ್ಟಪ್ಪ, ಲೋಕೇಶ್. ಕೆ.ಟಿ. ನಾಣಯ್ಯ, ಡಿಂಪಲ್, ಜೋಸ್ ನಾಣಯ್ಯ, ಚರ್ಮಣ, ಬಿ.ಕೆ. ಪ್ರವೀಣ್, ಶಶಿ ಕುಮಾರ್, ಗಣಪತಿ, ಕೀರ್ತಿ ಪ್ರಸಾದ್, ಪಿ.ಪಿ. ಮಧು ಆಟವಾಡಿದರು.
ಮುದ್ದಂಡ ತಂಡವನ್ನು ರಶಿನ್ ಸುಬ್ಬಯ್ಯ, ರಂಜಿತ್ ಪೊನ್ನಪ್ಪ, ರಾಯ್ ತಿಮ್ಮಯ್ಯ, ಆದ್ಯ ಪೂವಣ್ಣ, ಅಯ್ಯಪ್ಪ, ರವಿ ನಂಜಪ್ಪ,
(ಮೊದಲ ಪುಟದಿಂದ) ಬನ್ಸಿ ಬೋಪಣ್ಣ, ಸೋನು ಬಿದ್ದಪ್ಪ, ಧಿರೇನ್, ಧಿರೇನ್ ದೇವಯ್ಯ, ಕವನ್, ವಿಘ್ನೇಶ್ ಬೋಪಣ್ಣ, ಅರುಣ್ ನಾಚಪ್ಪ, ಕಾರ್ತಿಕ್ ದೇವಯ್ಯ, ಚಂಗಪ್ಪ, ಜನನ್, ಕುಶಾಲ್ ಪ್ರತಿನಿಧಿಸಿದರು.
ಕರ್ನಾಟಕ-ಕೊಡಗಿನ ಆಟಗಾರರ ರೋಚಕ ಪ್ರದರ್ಶನ ನಿರೀಕ್ಷೆ ಹುಟ್ಟಿಸಿದ್ದ ಕರ್ನಾಟಕ ಇಲೆವೆನ್ ಹಾಗೂ ಕೊಡವ ಹಾಕಿ ಅಕಾಡೆಮಿ ಇಲೆವೆನ್ ಪಂದ್ಯಾಟದಲ್ಲಿ ಕೊಡವ ಹಾಕಿ ಅಕಾಡೆಮಿ ಗೆಲುವಿನ ರುಚಿ ಸವಿಯಿತು. ಹಾಕಿ ಕರ್ನಾಟಕದ ಬಲಿಷ್ಠ ಆಟಗಾರರು ಹಾಗೂ ಕೊಡವ ಹಾಕಿ ಅಕಾಡೆಮಿಯ ನುರಿತು ಹಾಕಿಪಟುಗಳ ನಡುವಿನ ರೋಚಕ ಪಂದ್ಯಾಟ ರೋಮಾಂಚನ ಅನುಭವ ನೀಡಿತು. ತಲಾ ೧೫ ನಿಮಿಷದ ೪ ಸುತ್ತುಗಳಲ್ಲಿ ನಡೆದ ಪಂದ್ಯಾಟ ನೋಡಗರ ಹೃದಯ ಬಡಿತವನ್ನು ಏರಿಳಿತಗೊಳಿಸಿತು. ನಿಗದಿತ ಅವಧಿಯಲ್ಲಿ ಹಾಕಿ ಅಕಾಡೆಮಿ ಪರ ಮಾತಂಡ ಆರ್ಯನ್ ಉತ್ತಪ್ಪ, ಕರ್ನಾಟಕ ಇಲೆವೆನ್ ಪರ ರಾಹುಲ್ ಏಕೈಕ ಗೋಲು ಬಾರಿಸಿದರು. ಪರಿಣಾಮ ಉಭಯ ತಂಡಗಳು ೧-೧ ಗೋಲುಗಳ ಸಮಬಲ ಸಾಧಿಸಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು.
ಪೆನಾಲ್ಟಿ ಶೂಟೌಟ್‌ನಲ್ಲಿ ದೊರೆತ ೫ ಅವಕಾಶಗಳ ಪೈಕಿ ಕೊಡವ ಹಾಕಿ ಅಕಾಡೆಮಿ ಪರ ದೇಶ್ ಪೂವಯ್ಯ, ಮಾತಂಡ ಆರ್ಯನ್, ವಚನ್ ಅಯ್ಯಪ್ಪ ತಲಾ ಒಂದು ಗೋಲು ಬಾರಿಸಿ ಒಟ್ಟು ೩-೨ ಗೋಲುಗಳ ಅಂತರದಿAದ ಗೆಲುವು ತನ್ನದಾಗಿಸಿಕೊಂಡಿತು. ಕರ್ನಾಟಕ ಇಲೆವೆನ್ ಪರ ಶೂಟೌಟ್‌ನಲ್ಲಿ ರಾಹುಲ್, ಬಿಪಿನ್ ತಲಾ ಒಂದು ಗೋಲು ಹೊಡೆದು ಸೋಲಿನ ಅಂತರ ತಗ್ಗಿಸಿದರು.