ಮಡಿಕೇರಿ, ಮಾ. ೨೯: ಯುಗಾದಿ ಹಬ್ಬದ ಅಂಗವಾಗಿ ನೆಹರು ಯುವ ಕೇಂದ್ರ ಮಡಿಕೇರಿ, ಕೊಡಗು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಮತ್ತು ತಾಲೂಕು ಯುವಒಕ್ಕೂಟ ಹಾಗೂ ಸ್ನೇಹಿತರ ಯುವಕ ಸಂಘದ ವತಿಯಿಂದ ಸ್ನೇಹಿತರ ಯುವಕ ಸಂಘದ ೪೨ನೇ ವರ್ಷದ ವಾರ್ಷಿಕೋತ್ಸವ ಹಾಗೂ ಗ್ರಾಮೀಣ ಕ್ರೀಡಾಕೂಟ ಅಡ್ಕದಬಾಣೆಯಲ್ಲಿ ತಾ. ೩೦ ರಂದು (ಇಂದು) ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕೋಳುಮುಡಿಯನ ಎ. ಮೋಹನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬೆಳಿಗ್ಗೆ ೯ ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ತನ್ನ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ನಿವೃತ್ತ ಡಿವೈಎಸ್‌ಪಿ ಯಾಲದಾಳು ಕೇಶವಾನಂದ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಗಾಳಿಬೀಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾವತಿ, ಮಡಿಕೇರಿ ಶಿರಸ್ತೇದಾರ್ ಕರಕರನ ಮಧುಕರ್, ಗ್ರಾಮದ ಹಿರಿಯರಾದ ಕೆ.ಕೆ. ಧರ್ಮಾವತಿ, ಮಾಜಿ ಸೈನಿಕರಾದ ಕೋಚನ ಮನುಕುಮಾರ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.