ಮಡಿಕೇರಿ, ಮಾ. ೨೯: ರಾಜ್ಯವನ್ನು ಬೆಚ್ಚಿ ಬೀಳಿಸಿರುವ ಬೇಗೂರು ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಪತ್ನಿ ಮೇಲಿನ ಅನುಮಾನವೇ ಕಾರಣ ಎಂಬ ನೈಜಾಂಶ ಪೊಲೀಸ್ ತನಿಖೆಯಿಂದ ಬಯಲಾಗಿದೆ.

ಪತ್ನಿ, ೬ ವರ್ಷದ ಮಗು ಸೇರಿದಂತೆ ನಾಲ್ವರನ್ನು ಬರ್ಬರವಾಗಿ ಕೊಲೆಗೈದ ಆರೋಪಿ ಗಿರೀಶ್‌ನನ್ನು ಪೊಲೀಸರು ಮಿಂಚಿನ ಕಾರ್ಯಾ ಚರಣೆ ನಡೆಸಿ ಕೇರಳ ರಾಜ್ಯದಲ್ಲಿ ಶುಕ್ರವಾರ ರಾತ್ರಿ ಬಂಧಿಸಿದ್ದರು.

ಬೇಗೂರು ಗ್ರಾಮದ ಬಾಳಂಗಾಡು ಎಂಬಲ್ಲಿ ವಾಸಿಸುತ್ತಿದ್ದ ನಾಗಿ (೩೦), ಅಂದಾಜು ೭೦ ವರ್ಷ ಮೇಲ್ಪಟ್ಟ ಕರಿಯ, ಗೌರಿ ಹಾಗೂ ೬ ವರ್ಷ ಪ್ರಾಯದ ಕಾವೇರಿ ಅವರುಗಳು ಗಿರೀಶ್‌ನ ಅನುಮಾನ ಎಂಬ ರೋಗಕ್ಕೆ ಜೀವ ಕಳೆದುಕೊಂಡಿದ್ದಾರೆ. ನಾಗಿಗೆ ಈ ಹಿಂದೆ ೨ ವಿವಾಹವಾಗಿದ್ದು, ಅವರುಗಳಿಂದ ಬೇರ್ಪಟ್ಟು ಒಂದು ವರ್ಷದ ಹಿಂದೆ ಕೇರಳದ ಗಿರೀಶ್‌ನೊಂದಿಗೆ ಮದುವೆ ಯಾಗಿ ಕೆಲವು ತಿಂಗಳು ಗಳಿಂದ ಒಟ್ಟಿಗೆ ವಾಸಿಸುತ್ತಿದ್ದರು. ಇವರೊಂದಿಗೆ ಅಜ್ಜ ಕರಿಯ, ಅಜ್ಜಿ ಗೌರಿ ಕೂಡ ವಾಸವಿದ್ದರು. ನಾಗಿಯ ೨ನೇ ಗಂಡ ಸುಬ್ರಮಣಿಯೊಂದಿಗೆ ಮತ್ತೇ ಸಂಬAಧ ಹೊಂದಿದ ಅನುಮಾನ ೩ನೇ ಪತಿ ಗಿರೀಶ್‌ಗೆ ಮೂಡಿದ್ದು, ಇದೇ ವಿಚಾರದಲ್ಲಿ ಗಲಾಟೆ ಏರ್ಪಟ್ಟಿದೆ. ಇದು ವಿಕೋಪಕ್ಕೆ ತಿರುಗಿ ಜಗಳ ಬಿಡಿಸಲು ಬಂದ ಅಜ್ಜ, ಅಜ್ಜಿಯ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ ಪರಿಣಾಮ ಇಬ್ಬರು ಕೊನೆಯುಸಿರೆಳೆದಿದ್ದಾರೆ. ಇದಲ್ಲದೆ ಕತ್ತಿಯಿಂದ ಹಲ್ಲೆ ಮಾಡುವ ಸಂದರ್ಭ ನಾಗಿ ತನ್ನ ಮಗಳನ್ನು ಎತ್ತಿಕೊಂಡಿದ್ದಳು. ದಾಳಿ ವೇಳೆ ಮಗು ಕಾವೇರಿಗೂ ತಗುಲಿ ಸಾವನ್ನಪ್ಪಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಇಡೀ ಕುಟುಂಬವನ್ನು ಕೊಲೆಗೈದು ಪರಾರಿಯಾಗಲು ಯತ್ನಿಸಿದ ಗಿರೀಶ್‌ನನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾರ್ಗದರ್ಶನದಲ್ಲಿ ವೀರಾಜಪೇಟೆ ಡಿವೈಎಸ್‌ಪಿ ಮಹೇಶ್ ಕುಮಾರ್ ನೇತೃತ್ವದ ತನಿಖಾ ತಂಡ ಘಟನೆ ಬೆಳಕಿಗೆ ಬಂದ ೬ ಗಂಟೆಯ ಅವಧಿಯೊಳಗೆ ಕೇರಳದ ತಲಂಪುಳ ಎಂಬಲ್ಲಿ ಬಂಧಿಸಿತ್ತು. ಆರೋಪಿ ಯನ್ನು ಘಟನಾ ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಲಾಗಿದೆ.