ವೀರಾಜಪೇಟೆ, ಮಾ. ೨೯: ವೀರಾಜಪೇಟೆ ಮೂಲಕ ಕೇರಳಕ್ಕೆ ಅಕ್ರಮವಾಗಿ ಮದ್ದುಗುಂಡು ಸಾಗಾಟ ಮಾಡುತ್ತಿದ್ದ ಆರೋಪದಡಿ ಕೇರಳ ರಾಜ್ಯದ ವ್ಯಕ್ತಿಯನ್ನು ಚೆಕ್‌ಪೋಸ್ಟ್ ಸಿಬ್ಬಂದಿಗಳು ವಶಕ್ಕೆ ಪಡೆದು ಕೇರಳ ಪೊಲೀಸರಿಗೆ ಒಪ್ಪಿಸಿದ್ದಾರೆ.

ಕೇರಳ ರಾಜ್ಯದ ಕಣ್ಣೂರಿಗೆ ತೆರಳುತಿದ್ದ ಖಾಸಗಿ ಬಸ್‌ನಲ್ಲಿಟ್ಟಿದ್ದ ಚೀಲದಲ್ಲಿ ಕೋವಿಗಳಿಗೆ ಬಳಸಲಾಗುವ ೧೫೦ ಮದ್ದುಗುಂಡುಗಳು ಪತ್ತೆಯಾಗಿವೆ. ತಾ. ೨೭ ರ ಸಂಜೆ ಕುಟ್ಟದಿಂದ ಗೋಣಿಕೊಪ್ಪ, ವೀರಾಜಪೇಟೆ, ಮಾಕುಟ್ಟ ಮಾರ್ಗವಾಗಿ ಕಣ್ಣೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸನ್ನು ಗಡಿಭಾಗವಾದ ಮಾಕುಟ್ಟ ಕೂಟುಪೊಳೆ ಎಂಬಲ್ಲಿ ಕೇರಳ ರಾಜ್ಯದ ಅಬಕಾರಿ ತಪಾಸಣೆ ಕೇಂದ್ರದ ಠಾಣಾಧಿಕಾರಿ ವಿ.ಅರ್. ರಾಜೀವ್ ತಂಡ ಬಸ್‌ನಲ್ಲಿ ತಪಾಸಣೆ ನಡೆಸುತ್ತಿದ್ದ ಸಂದರ್ಭ ಬಸ್‌ನಲ್ಲಿರುವ ಆಸನದ ಮೇಲ್ಭಾಗದಲ್ಲಿ ಲಗೇಜ್‌ಗಳಿಡಲು ಇರುವ ಸ್ಥಳದಲ್ಲಿ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಬಟ್ಟೆಯಿಂದ ಮುಚ್ಚಿದ ಕೈಚೀಲ ಒಂದರಲ್ಲಿ ೧೫೦ ಮದ್ದು ಗುಂಡುಗಳು ಪತ್ತೆಯಾಗಿವೆ. ತಕ್ಷಣ ಅಬಕಾರಿ ಸಿಬ್ಬಂದಿಗಳು ಇರಿಟ್ಟಿ ಪೊಲೀಸರಿಗೆ ಮಾಹಿತಿ ನೀಡುದ್ದಾರೆ. ಬಳಿಕ ಬಳಕೆಯಾಗದ ಮದ್ದುಗುಂಡು ಪತ್ತೆ ಮಾಹಿತಿ ಗಂಭೀರವಾಗಿ ಪರಿಗಣಿಸಿದ ಪೋಲಿಸರು ಸ್ಥಳಕ್ಕೆ ಶ್ವಾನ ದÀಳದೊಂದಿಗೆ ಆಗಮಿಸಿ ಪರಿಶೋಧನೆ ನಡೆಸಿದ್ದಾರೆ.

ಸುಮಾರು ಎರಡು ಗಂಟೆಗಳು ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಬಳಿಕ ಶ್ವಾನವು ಮೂವರನ್ನು ಮೊದಲಿಗೆ ಪರಿಗಣಿಸಿದೆ. ಬಳಿಕ ಓರ್ವ ವ್ಯಕ್ತಿಯನ್ನು ಮಾತ್ರ ಗುರಿಯಾಗಿಸಿದೆ. ಗುರಿಯಾಗಿಸಿದ ಕೇರಳದ ಉಳಿಕಲ್ ಕಾಳಂಗಿ ಮೊಟ್ಟೆಯ ವ್ಯಕ್ತಿಯನ್ನು ಸ್ಥಳದಲ್ಲೇ ಬಂಧಿಸಿ ಹೆಚ್ಚಿನ ತನಿಖೆಗಾಗಿ ಇರಿಟ್ಟಿ ಠಾಣೆಗೆ ಕರೆದೊಯ್ಯಲಾಯಿತು. ಬಂಧಿಯಾದ ವ್ಯಕ್ತಿಯ ಕುರಿತು ಪರಿಶೀಲಿಸಲು ಇರಿಟ್ಟಿ ಪೊಲೀಸರು ವೀರಾಜಪೇಟೆಗೆ ಆಗಮಿಸಿದ್ದರು. ನಗರದಲ್ಲಿ ಅಳವಡಿಸಲಾಗಿರುವ ಎಲ್ಲಾ ಸಿ.ಸಿ. ಕ್ಯಾಮರಾಗಳನ್ನು ಪರಿಶೀಲಿಸಿ ವೀರಾಜಪೇಟೆ ನಗರ ಮತ್ತು ಸುತ್ತಮುತ್ತಲಿನ ಎಲ್ಲಾ ಬಂದೂಕು ಮತ್ತು ಮದ್ದುಗುಂಡು ಮಾರಾಟ ಮಳಿಗೆಗಳಿಗೆ ಇರಿಟ್ಟಿ ವಲಯದ ಡಿವೈಎಸ್ಪಿ ಧನುಂಜಯ ಬಾಬು ನೇತೃತ್ವದ ತಂಡ ತೆರಳಿ ತನಿಖೆ ನಡೆದಿದೆ. ಇರಿಟ್ಟಿ ಪೊಲೀಸ್ ಠಾಣೆ ಹೆಚ್ಚುವರಿ ಠಾಣಾಧಿಕಾರಿ ಕುಟ್ಟಿ ಕೃಷ್ಣನ್ ಅವರುಗಳ ತಂಡ ಹೆಚ್ಚಿನ ಮಾಹಿತಿಗಳನ್ನು ಕಲೆಹಾಕಲು ಮುಂದಾಗಿದೆ.

-ಕಿಶೋರ್ ಕುಮಾರ್ ಶೆಟ್ಟಿ