ಸೋಮವಾರಪೇಟೆ, ಮಾ.೩೧ : ತೋಟದಲ್ಲಿ ಕರಿಮೆಣಸು ಕೊಯ್ಲು ಮಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಗೊಂಡು ಅಸ್ಸಾಂ ಮೂಲದ ಕಾರ್ಮಿಕರೋರ್ವರು ಮೃತಪಟ್ಟಿರುವ ಘಟನೆ ಪಟ್ಟಣ ಸಮೀಪದ ಕಿಬ್ಬೆಟ್ಟ ಗ್ರಾಮದಲ್ಲಿ ನಡೆದಿದೆ.

ಕಿಬ್ಬೆಟ್ಟ ಗ್ರಾಮದ ಅಜಯ್ ಬಾಬು ಎಂಬವರ ಕಾಫಿ ತೋಟದಲ್ಲಿ ಕರಿಮೆಣಸು ಕೊಯ್ಲು ಮಾಡುತ್ತಿದ್ದ ಅಸ್ಸಾಂ ಮೂಲದ ಖೂದ್ದೂಸ್ ಆಲಿ (೫೦) ಎಂಬವರು ಆಕಸ್ಮಿಕ ಅವಘಡಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾರೆ.

ತೋಟದಲ್ಲಿ ಏಣಿಯ ಮೂಲಕ ಕರಿಮೆಣಸು ಕೊಯ್ಲು ಮಾಡುತ್ತಿದ್ದ ಸಂದರ್ಭ, ಕಾಫಿ ತೋಟದೊಳಗೆ ಹಾದು ಹೋಗಿದ್ದ ವಿದ್ಯುತ್ ತಂತಿಗೆ ಏಣಿ ಸ್ಪರ್ಶಗೊಂಡಿದ್ದು, ಒಮ್ಮೆಲೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

ಖುದ್ದೂಸ್ ಆಲಿ ಅವರು ಪತ್ನಿ ಶಹಿದಾ ಬೇಗಂ ಸೇರಿದಂತೆ ಮಕ್ಕಳೊಂದಿಗೆ ಕಳೆದ ಕೆಲ ತಿಂಗಳ ಹಿಂದೆ ಸೋಮವಾರಪೇಟೆಗೆ ಆಗಮಿಸಿದ್ದು, ಬೀರೇಬೆಟ್ಟ ಸಮೀಪದ ಸುರೇಶ್ ಎಂಬವರ ಲೈನ್‌ಮನೆಯಲ್ಲಿ ನೆಲೆಸಿದ್ದರು.

ಕಳೆದ ಒಂದು ವಾರದಿಂದ ಕಿಬ್ಬೆಟ್ಟ ಗ್ರಾಮದಲ್ಲಿರುವ ಅಜಯ್ ಬಾಬು ಎಂಬವರ ಕಾಫಿತೋಟದಲ್ಲಿ ಕರಿಮೆಣಸು ಕೊಯ್ಲು ಮಾಡುವ ಕೆಲಸ ನಿರ್ವಹಿಸುತ್ತಿದ್ದರು. ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.