ಮಡಿಕೇರಿ, ಏ. ೧: ಕರ್ನಾಟಕ ರಾಜ್ಯ ಲಲಿತಕಲಾ ಅಕಾಡೆಮಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಗೋಣಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಒಂದು ದಿನದ ಕಲಾಶಿಬಿರ ನಡೆಯಿತು.
ಅಪರೂಪದ ಸಾಂಜಿ ಕಲೆ ಹಾಗೂ ಡಿಜಿಟಲ್ ಪೈಂಟಿAಗ್ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಯಿತು. ಇತ್ತೀಚೆಗೆ ನಡೆದ ಸುಂದರ ಸಮಾರಂಭದಲ್ಲಿ ಚಿತ್ರಕಲಾವಿದ ಸತೀಶ್ ಅವರು ವಿನೂತನವಾಗಿ ಏರ್ಪಡಿಸಿದ್ದ ಚಿತ್ರದ ಮೂಲಕ, ಶಕ್ತಿಯ ಸಲಹಾ ಸಂಪಾದಕ ಬಿ.ಜಿ. ಅನಂತ ಶಯನ, ಕೊಡಗು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೇಶವ ಕಾಮತ್ ಮತ್ತು ಅತಿಥಿಗಳು ಶಿಬಿರ ಉದ್ಘಾಟಿಸಿದರು.
ಲಲಿತಕಲಾ ಅಕಾಡೆಮಿಯ ಸದಸ್ಯ ಸಂಚಾಲಕ ಕೆ.ಸಿ. ಮಹದೇವಸ್ವಾಮಿ ಅವರು ಶಿಬಿರದ ಕುರಿತು ಮಾತನಾಡಿ, ವಿದ್ಯಾರ್ಥಿಗಳಿಗೆ ಸುಲಭವೂ, ಅಪರೂಪವು ಆದ, ಪೇಪರ್ ಕಟ್ಟಿಂಗ್ ಮೂಲಕ ಸಾಂಜಿ ಕಲೆ ತರಬೇತಿ ನೀಡಲಾಗುತ್ತಿದೆ ಎಂದರು. ಸಾಂಜಿ ಕಲಾವಿದ ಎಸ್.ಎಫ್. ಹುಸೇನಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಚಿತ್ರಕಲಾವಿದ, ಅಧ್ಯಾಪಕ ಕಾರ್ಯಕ್ರಮ ನಿರೂಪಿಸಿ, ವಿದ್ಯಾರ್ಥಿಗಳಿಗೆ ಡಿಜಿಟಲ್ ಕಲೆಯ ಕುರಿತು ಅರಿವು ಮೂಡಿಸಿದರು.
ಈ ಸಂದರ್ಭ ಬಿ.ಜಿ. ಅನಂತಶಯನ ಅವರು ಮಾತನಾಡಿ, ಕಲಾವಿದನಲ್ಲಿ ಒಂದು ಚಿತ್ರದ ಮೊದಲು ಮನಸ್ಸಿನಲ್ಲಿ ಮೂಡಿ ಬಂದು ಬಳಿಕ ಹಾಳೆಗೆ ಇಳಿಯುತ್ತದೆ ಎಂದರು. ಕಲಾವಿದ ಮಕ್ಕಳು ಸುತ್ತಣ ಪರಿಸರ, ಬೆಳಕು- ನೆರಳಿನ ಸೌಂದರ್ಯ ಇತ್ಯಾದಿ ಕೂಲಂಕಷವಾಗಿ ಸದಾ ಗಮನಿಸುತ್ತಿದ್ದರೆ ಬಿಡಿಸುವ ಚಿತ್ರಗಳಲ್ಲಿ ಸಹಜತೆ ಎದ್ದು ಕಾಣುತ್ತದೆ ಎಂದರು.
ಚಿತ್ರಕಲಾ ಶಿಕ್ಷಕರಾಗಿದ್ದ ಉ.ರಾ ನಾಗೇಶ್ ಮಾತನಾಡಿ, ತುಟಿಯ ಮಾತಿಗಿಂತ ಬಣ್ಣಗಳು ಮಾತನಾಡುವ ಸಮಯವಿದು ಎಂದು ಶಿಬಿರಾರ್ಥಿಗಳನ್ನು ಹುರಿ ದುಂಬಿಸಿದರು. ಕೇಶವ ಕಾಮತ್ ಅವರು ಮಾತನಾಡಿ, ಮಕ್ಕಳ ಪ್ರತಿಭೆಯನ್ನು ಪೋಷಕರು ಮತ್ತು ಅಧ್ಯಾಪಕರುಗಳು ಮೊದಲು ಗುರುತಿಸಿ ತಕ್ಕ ತರಬೇತಿ ನೀಡಬೇಕೆಂದರು.
ಕಲಾವಿದರಾದ ಸತೀಶ್ ಮತ್ತು ಹುಸೇನಿ ಅವರನ್ನು ಸನ್ಮಾನಿಸ ಲಾಯಿತು. ಮುಖ್ಯ ಶಿಕ್ಷಕ ಹೆಚ್.ಕೆ. ಕುಮಾರ್ ಸ್ವಾಗತಿಸಿದರು. ವೀರಾಜಪೇಟೆ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ರಾಜೇಶ್ ಪದ್ಮನಾಭ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಕೆ.ಆರ್. ಶಾಂತಿ, ಉದಾಹರಣೆ ಯೊಂದಿಗೆ ವಿದ್ಯಾರ್ಥಿಗಳ ಗಮನ ಸೆಳೆದ ಚಿತ್ರಕಲಾವಿದ ಕ್ಲಿಫರ್ಡ್ ಡಿಮೆಲ್ಲೋ, ಶಿಕ್ಷಕರಾದ ಬಿ.ಎಂ. ನಿರ್ಮಲ ಮತ್ತು ಕೆ.ಎಂ. ತ್ರಿವೇಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.