ಭಾಗಮಂಡಲ, ಮಾ. ೩೧: ಯಾರ ಮನೆಯಲ್ಲಿ ಹಿರಿಯರಿಗೆ ಅಕ್ಕತಂಗಿಯರಿಗೆ ಗೌರವಿರುತ್ತದೆಯೋ ಆ ಮನೆಯಲ್ಲಿ ರಾಮ ಇರುತ್ತಾನೆ. ದೇವಾನುದೇವತೆಗಳು ವಾಸವಾಗಿರುತ್ತಾರೆ ಎಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಹೇಳಿದರು.

ಭಾಗಮಂಡಲದ ಶ್ರೀರಾಮ ಮಂದಿರದ ಪುನರ್ ಪ್ರತಿಷ್ಠೆ ಲೋಕಾರ್ಪಣೆ ಹಾಗೂ ಸಾನಿಧ್ಯ ಕಲಶಾಭಿಷೇಕ ಕಾರ್ಯಕ್ರಮಗಳ ಅಂಗವಾಗಿ ರಾಮ ಮಂದಿರ ಜೀರ್ಣೋದ್ಧಾರ ಸಮಿತಿ ಮತ್ತು ವಿಶ್ವಸ್ತ ಮಂಡಳಿ ವತಿಯಿಂದ ಆಯೋಜಿಸಲಾಗಿದ್ದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಆಶೀರ್ವಚನ ನೀಡಿದರು.

ನಾವು ನಮ್ಮ ಮನೆಯನ್ನು ಸ್ವರ್ಗ ಮಾಡಿಕೊಳ್ಳಬೇಕು. ಬೃಂದಾವನ ಮಾಡಿಕೊಳ್ಳಬೇಕು. ಮನುಷ್ಯನಿಗೆ ಎಲ್ಲಾ ತಿಳುವಳಿಕೆಯನ್ನು ದೇವರು ಕೊಟ್ಟಿದ್ದಾನೆ. ಒಳ್ಳೆಯದು ಕೆಟ್ಟದು ಎಂಬುದನ್ನು ತಿಳಿಯುವ ಶಕ್ತಿ ಮನುಷ್ಯನಿಗೆ ಇದೆ. ವಿಶೇಷವಾದ ಈ ಶಕ್ತಿಯನ್ನು ನಾವು ವಿವೇಚನೆಯಿಂದ ಬಳಸಿ ಶ್ರೀ ರಾಮನ ಆದರ್ಶವನ್ನು ಪಾಲಿಸಿ, ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದರು. ಶ್ರೀರಾಮ ಮಂದಿರದಲ್ಲಿ ಭಜನೆ ಮಾಡಿ ಅಜ್ಞಾನವನ್ನು ದೂರವಿಡಬೇಕು.

(ಮೊದಲ ಪುಟದಿಂದ) ಅಂತಃಕರಣದಲ್ಲಿ ರಾಮನನ್ನು ಸ್ಥಾಪಿಸಿ ಭಗವಂತನಿಗೋಸ್ಕರ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ವೀರಾಜಪೇಟೆಯ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿ ಕಳೆದ ಒಂದು ತಿಂಗಳು ಈ ಜಗತ್ತಿನಲ್ಲಿ ಹಲವು ವಿಸ್ಮಯಕಾರಿ ಘಟನೆಗಳು ಜರುಗಿವೆ. ಒಂದೆಡೆ ವಿಜ್ಞಾನದ ವಿಸ್ಮಯ ಜರುಗಿದರೆ ಮತ್ತೊಂದೆಡೆ ಆಧ್ಯಾತ್ಮಿಕ ವಿಸ್ಮಯ ಜರುಗಿದೆ. ವಿಜ್ಞಾನ ಎಷ್ಟೇ ಪ್ರಗತಿ ಹೊಂದಿದರೂ ಮನುಷ್ಯನ ಆಲೋಚನೆಗಳಿಗೆ ಮೀರಿದ ಒಂದು ಶಕ್ತಿ , ಸಂಘರ್ಷ ಈ ಜಗತ್ತಿನೊಳಗೆ ನಡೆಯುತ್ತಿರುತ್ತದೆ. ಮಂದಿರ ನಿರ್ಮಾಣದಿಂದ ಜನರಲ್ಲಿ ಅಧ್ಯಾತ್ಮಿಕ ಚಿಂತನೆ ಹೆಚ್ಚಲಿದೆ. ಜನರಲ್ಲಿ ಪ್ರೀತಿ ವಿಶ್ವಾಸ ವೃದ್ಧಿಸಬೇಕು. ನಮ್ಮೊಳಗಿನ ಕ್ಲೇಶ ಹೊರ ಬರಬೇಕು, ಜನರಲ್ಲಿ ಅಧ್ಯಾತ್ಮಿಕ ಜಾಗೃತಿ ಉಂಟಾಗಬೇಕು ಎಂದರು.

ಉಡುಪಿಯ ಜಗದ್ಗುರು ಮಧ್ವಾಚಾರ್ಯ ಮೂಲ ಸಂಸ್ಥಾನ ಕಾಣಿಯೂರು ಮಠದ ವಿದ್ಯಾ ವಲ್ಲಭ ತೀರ್ಥ ಶ್ರೀಪಾದ ಸ್ವಾಮೀಜಿ ಮಾತನಾಡಿ ಜನರು ದೇವಾಲಯಗಳಿಗೆ ಹೋಗುತ್ತಿರಬೇಕು.ಆಗಷ್ಟೇ ದೇವಾಲಯಗಳಿಗೆ ಶಕ್ತಿ ಬರುತ್ತದೆ ಎಂದರು..

ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಜಿ ಬೋಪಯ್ಯ ಮಾತನಾಡಿ ಅಯೋಧ್ಯೆಯಲ್ಲಿ ತಲತಲಾಂತರಗಳ ಭಾರತೀಯರ ಕನಸು ನನಸಾಗಿದೆ. ಭವ್ಯ ರಾಮಮಂದಿರ ನಿರ್ಮಾಣದಿಂದಾಗಿ ನಿರೀಕ್ಷೆಗೂ ಮೀರಿ ಆದಾಯ ಬರುತ್ತಿದೆ. ಅದು ಸಮಾಜಕ್ಕೆ ಅರ್ಪಣೆಯಾಗುತ್ತಿದೆ. ಮಂದಿರ ನಿರ್ಮಾಣದಿಂದಾಗಿ ಧಾರ್ಮಿಕ ಜಾಗೃತಿ ಆಗುವುದಲ್ಲದೇ ಜನರಲ್ಲಿ ಸದ್ಭಾವನೆ ಇರುತ್ತದೆ ಎಂದರು. ಉತ್ತರ ಪ್ರದೇಶದಲ್ಲಿ ಜರುಗಿದ ಕುಂಭಮೇಳಕ್ಕಾಗಿ ಸರ್ಕಾರ ೭.೫ ಸಾವಿರ ಕೋಟಿ ರೂ. ಖರ್ಚು ಮಾಡಿತು. .ಕುಂಭಮೇಳದಿAದಾಗಿ ೩೦-೪೦ ಲಕ್ಷ ಕೋಟಿ ರೂ.ಲಾಭ ಬಂದಿದೆ. ದೇವರ ಆಶೀರ್ವಾದದಿಂದ ಭವ್ಯ ಮಂದಿರ ನಿರ್ಮಾಣದಿಂದ, ಧಾರ್ಮಿಕ ಕಾರ್ಯಕ್ರಮಗಳಿಂದ ಜನರು ಸ್ವಾಭಿಮಾನದಿಂದ ಬಾಳುವಂತಾಗಿದೆ ಎಂದರು. ಅದೇ ರೀತಿ ಭಾಗಮಂಡಲದಲ್ಲಿ ತಲಕಾವೇರಿ-ಭಗಂಡೇಶ್ವರ ಸನ್ನಿಧಿ ಲಕ್ಷಾಂತರ ಭಕ್ತರನ್ನು ಸೆಳೆಯುತ್ತಿದೆ. ಭವ್ಯ ರಾಮಮಂದಿರ ನಾಡಿಗೆ ಸಂದೇಶ ನೀಡುವ ಸ್ಥಳವಾಗಿ ರೂಪುಗೊಂಡಿದೆ. ಇಲ್ಲಿನ ರಾಮ ಮಂದಿರವು ತಲಕಾವೇರಿ- ಭಾಗಮಂಡಲ ಕ್ಷೇತ್ರದಂತೆ ಹೆಚ್ಚು ಪ್ರಸಿದ್ಧಿ ಹೊಂದಿ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿ ರೂಪುಗೊಳ್ಳಲಿ ಎಂದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹೊಸೂರು ಸತೀಶ್‌ಕುಮಾರ್ ಜೋಯಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ ಈ ಪವಿತ್ರ ಸ್ಥಳದಲ್ಲಿ ಮಂದಿರ ನಿರ್ಮಾಣದ ಅಗತ್ಯತೆ ಇದೆ ಎಂಬುದನ್ನು ಮನಗಂಡು . ಭಾಗಮಂಡಲದಲ್ಲಿ ೨೦೨೧ ರಲ್ಲಿ ಶಂಕುಸ್ಥಾಪನೆ ಆಯಿತು. ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ಇದೀಗ ಉತ್ತಮ ರಾಮಮಂದಿರ ಮರು ನಿರ್ಮಾಣಗೊಂಡು ಪವಿತ್ರ ಕ್ಷೇತ್ರವಾಗಲಿದೆ ಎಂದು ಆಶಿಸಿದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಗಣಪತಿ ಹೋಮ, ಪವಮಾನ ಹೋಮ, ಜರುಗಿತು. ನೆರೆದಿದ್ದ ಭಕ್ತರ ಸಮ್ಮುಖದಲ್ಲಿ ಬೆಳಿಗ್ಗೆ ೯.೦೪ ಕ್ಕೆ ಸಲ್ಲುವ ವೃಷಭ ಲಗ್ನದಲ್ಲಿ ಶ್ರೀ ಸೀತಾರಾಮ ಚಂದ್ರ ದೇವರಪುನರ್ ಪ್ರತಿಷ್ಠೆ, ನೂತನ ರಾಮಮಂದಿರ ಲೋಕಾರ್ಪಣೆ, ಸಾನಿಧ್ಯ ಕಲಶಾಭಿಶೇಕ, ರಾಮ ತಾರಕ ಮಂತ್ರ ಯಜ್ಞ ಜರುಗಿತು. ಜಾನ್ ಡಾನ್ಸ್ ಗ್ಯಾಲರಿ ಮಕ್ಕಳು ಆಕರ್ಷಕ ನೃತ್ಯದ ಮೂಲಕ ಶ್ರೀರಾಮ ಮಂದಿರದಿAದ ಮಾರುಕಟ್ಟೆಯವರೆಗೆ ಸಾಗಿ ಅತಿಥಿಗಳನ್ನು ವೇದಿಕೆಗೆ ಕರೆತಂದರು. ಭಾಗಮಂಡಲದ ಕಾಶಿ ಮಠದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಗನ್ನಾಥ ಶಣೈ, ಭಾಗಮಂಡಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಳನ ರವಿ, ಭಾಗಮಂಡಲ ಶ್ರೀರಾಮ ಸೇವಾ ಟ್ರಸ್ಟ್ ಅಧ್ಯಕ್ಷ ಸಿ.ಆರ್ ಜಯನ್, ಜೀರ್ಣೋದ್ಧಾರ ಸಮಿತಿ ಸದಸ್ಯ ನಂಜುAಡಪ್ಪ, ಜೀರ್ಣೋದ್ಧಾರ ಸಮಿತಿ ಮತ್ತು ವಿಶ್ವಸ್ತ ಮಂಡಳಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮಹಾಪೂಜೆಯ ನಂತರ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.ಇಂದಿನಿAದ ಏಪ್ರಿಲ್ ಏಳರವರೆಗೆ ದೇವಾಲಯದಲ್ಲಿ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಎ.ಎಸ್.ಶ್ರೀಧರ್ ಕಾರ್ಯಕ್ರಮ ನಿರೂಪಿಸಿದರು. ಜೀರ್ಣೋದ್ಧಾರ ಸಮಿತಿ ಸದಸ್ಯ ನಂಜುAಡಪ್ಪ ಸ್ವಾಗತಿಸಿ ವಂದಿಸಿದರು.

-ಸುನಿಲ್ ಕುಯ್ಯಮುಡಿ