ಅರಣ್ಯಾಧಿಕಾರಿ ಭಾಸ್ಕರ್ ಮಾಹಿತಿ

ಕುಶಾಲನಗರ, ಏ. ೧: ಕುಶಾಲನಗರ ಅರಣ್ಯ ವಲಯದ ಮಾಲ್ದಾರೆ ಮೀಸಲು ಅರಣ್ಯದಲ್ಲಿ ಗುಂಡು ಹಾರಿಸಿ ದುಷ್ಕರ್ಮಿಗಳು ೨ ಕಾಡುಕೋಣಗಳನ್ನು ಹತ್ಯೆ ಮಾಡಿರುವ ಸ್ಥಳಕ್ಕೆ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅವರು ‘ಶಕ್ತಿ’ಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಎರಡು ಕಾಡುಕೋಣಗಳನ್ನು ರಾತ್ರಿ ವೇಳೆ ಗುಂಡು ಹಾರಿಸಿ ಹತ್ಯೆ ಮಾಡಿರುವ ತಂಡದ ಬಗ್ಗೆ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ವಿಶೇಷ ತಂಡಗಳನ್ನು ರಚಿಸಿದ್ದು ದುಷ್ಕರ್ಮಿಗಳನ್ನು ಸದ್ಯದಲ್ಲೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

ದುಷ್ಕರ್ಮಿಗಳು ಗುಂಡು ಹಾರಿಸಿ ನಂತರ ಅವುಗಳನ್ನು ಹಲಾಲ್ ಮಾಡಿ ಚರ್ಮ ಸುಲಿದು ಮಾಂಸ ಮಾಡುವ ಸಿದ್ಧತೆಯಲ್ಲಿ ತೊಡಗಿದ್ದರು.

ಗುಂಡಿನ ಸದ್ದು ಕೇಳಿ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ ಹಿನ್ನೆಲೆ ಕತ್ತಲಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಸ್ಥಳದಲ್ಲಿ ಎರಡು ಖಾಲಿ ಮದ್ದುಗುಂಡು ಪತ್ತೆಯಾಗಿವೆ.

ಪ್ರಕರಣಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುತ್ತಿದೆ ಎಂದು ತಿಳಿಸಿರುವ ಅವರು ಇದೇ ದುಷ್ಕರ್ಮಿಗಳ ತಂಡ ಜಿಲ್ಲೆಯ ವಿವಿಧೆಡೆ ವನ್ಯಜೀವಿಗಳನ್ನು ಬೇಟೆಯಾಡುತ್ತಿರುವುದು ಗಮನಕ್ಕೆ ಬಂದಿದ್ದು ಆರೋಪಿಗಳ ವಿರುದ್ಧ ಈಗಾಗಲೇ ಮೊಕದ್ದಮೆ ದಾಖಲಾಗಿದ್ದು ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭಾಸ್ಕರ್ ತಿಳಿಸಿದ್ದಾರೆ.