ಸೋಮವಾರಪೇಟೆ, ಏ. ೧: ಗೌಡಳ್ಳಿ ಮತ್ತು ದೊಡ್ಡಮಳ್ತೆ ಹಿಂದೂ ಗೆಳೆಯರ ಬಳಗದ ವತಿಯಿಂದ ಗೌಡಳ್ಳಿ ಬಿ.ಜಿ.ಎಸ್. ಶಾಲಾ ಮೈದಾನದಲ್ಲಿ ಆಯೋಜಿಸಿರುವ ೬ನೇ ವರ್ಷದ ಹಿಂದೂ ಕಪ್ ಮುಕ್ತ ಫುಟ್ಬಾಲ್ ಪಂದ್ಯಾವಳಿಯಲ್ಲಿ ಗೌಡಳ್ಳಿ ಎಫ್.ಸಿ., ಕೋಟೆಯೂರು ಎಫ್.ಸಿ., ಫ್ರೆಂಡ್ಸ್ ಎಫ್.ಸಿ. ಬೀಟಿಕಟ್ಟೆ, ನೀಲ್‌ಶಾಂತ್ ಬಾಯ್ಸ್ ತಂಡಗಳು ಸೆಮಿಫೈನಲ್ ಹಂತಕ್ಕೆ ಅರ್ಹತೆ ಪಡೆದವು.
ಕ್ವಾಟರ್ ಫೈನಲ್‌ನಲ್ಲಿ ಬೀಟಿಕಟ್ಟೆ ಎಫ್.ಸಿ. ತಂಡ ನವದುರ್ಗಾ ಪರಮೇಶ್ವರಿ ಎಫ್.ಸಿ. ತಂಡವನ್ನು ೫-೪ ಗೋಲುಗಳಿಂದ ಸೋಲಿಸಿ ಸೇಮಿಫೈನಲ್‌ಗೇರಿತು. ಕೋಟೆಯೂರು ಎಫ್.ಸಿ. ತಂಡ, ನಿಶಾಂತ್ ಕಾಫಿ ಶನಿವಾರಸಂತೆ ತಂಡವನ್ನು ೨-೧ ಗೋಲುಗಳಿಂದ ಮಣಿಸಿತು. ನೀಲ್‌ಶಾಂತ್ ಎಫ್.ಸಿ. ತಂಡ, ಟೀಮ್ ಶುಂಠಿ ಎ ತಂಡವನ್ನು ೪-೧ ಗೋಲುಗಳಿಂದ ಸೋಲಿಸಿತು. ಗೌಡಳ್ಳಿ ಎಫ್.ಸಿ. ತಂಡ, ಫಾಮರ‍್ಸ್ ಕ್ಲಬ್ ದೊಡ್ಡಮಳ್ತೆ ತಂಡವನ್ನು ೨-೧ ಗೋಲುಗಳಿಂದ ಮಣಿಸಿತು.
ನಿನ್ನೆ ಬೆಳಿಗ್ಗೆ ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಹೆಚ್. ಮಂಜುನಾಥ್, ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಾಲಕೃಷ್ಣ, ಉದ್ಯಮಿ ಚಾಮೇರ ಪವನ್ ದೇವಯ್ಯ, ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಬಿ. ಭರತ್ ಕುಮಾರ್ ಅವರುಗಳು ಪಂದ್ಯಾಟಕ್ಕೆ ಚಾಲನೆ ನೀಡಿದರು.
ಸಭಾ ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಕೆ.ಪಿ. ಆದರ್ಶ್, ಉಪಾಧ್ಯಕ್ಷ ಎಸ್.ಎನ್. ಆಕಾಶ್, ಖಜಾಂಚಿ ಎಸ್.ಆರ್. ವಿನಯ್, ಕಾರ್ಯದರ್ಶಿ ಪ್ರಜ್ವಲ್ ಮತ್ತು ನಿರ್ದೇಶಕರುಗಳು ಇದ್ದರು. ತೀರ್ಪುಗಾರರಾಗಿ ಗೌಡಳ್ಳಿ ಪ್ರವೀಣ್, ಮೆಲ್ವಿನ್, ಕರಣ್, ಅಜೇಶ್, ಅಭಿಲಾಷ್, ಶೇಷಪ್ಪ, ಸಂಕೇತ್ ಕಾರ್ಯನಿರ್ವಹಿಸಿದರು. ೧೨ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ನೈಜೀರಿಯಾದ ಆಟಗಾರರು, ಗೋವಾ, ಕೇರಳ, ತಮಿಳುನಾಡು ರಾಜ್ಯಗಳ ಅಟಗಾರರು ವಿವಿಧ ತಂಡಗಳನ್ನು ಪ್ರತಿನಿಧಿಸಿದ್ದಾರೆ.