g ಹೆಚ್.ಜೆ. ರಾಕೇಶ್

ಮಡಿಕೇರಿ, ಏ. ೧ : ಜಿಲ್ಲೆಯ ರೈತರು, ಬೆಳೆಗಾರರ ಆಕ್ರೋಶಕ್ಕೆ ಕಾರಣವಾಗಿರುವ ಸಿ ಮತ್ತು ಡಿ ಲ್ಯಾಂಡ್ ಹಾಗೂ ಸೆಕ್ಷನ್ ೪ ಅಧಿಸೂಚಿತ ಜಾಗಗಳನ್ನು ಅರಣ್ಯ ಇಲಾಖೆ ಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾಪದ ಕುರಿತು ಅಧ್ಯಯನ ಸಮಿತಿ ರಚಿಸಿ ವಿವಾದ ಪರಿಹಾರ ಮಾಡುವ ಸಂಬAಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿದ್ದ ಘೋಷಣೆ ಮುಂದಿನ ಹಂತ ತೆಗೆದುಕೊಳ್ಳದೆ ಕೇವಲ ನಾಮಕಾವಸ್ಥೆಗೆ ಎಂಬ ಸ್ಥಿತಿಯಲ್ಲಿದೆ. ಪರಿಣಾಮ ರೈತರು ಅತಂತ್ರ ಪರಿಸ್ಥಿತಿಯಲ್ಲಿ ಸಿಲುಕಿ ಮರುಗುತ್ತಿದ್ದಾರೆ.

ಭಾರಿ ಪ್ರತಿಭಟನೆ, ವ್ಯಾಪಕ ವಿರೋಧ, ಸ್ಥಳೀಯರ ಶಾಸಕರ ಒತ್ತಡದಿಂದ ‘ಹಿಡುವಳಿದಾರರ ಸುಪರ್ದಿಯಲ್ಲಿರುವ ಸಿ ಮತ್ತು ಡಿ ಭೂಮಿ ಹಾಗೂ ಸೆಕ್ಷನ್ ೪ ಅಧಿಸೂಚಿತ ಜಾಗಗಳನ್ನು ಅರಣ್ಯ ಇಲಾಖೆ ಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾಪದ ಸಾಧಕ-ಬಾಧಕ ತಿಳಿದುಕೊಳ್ಳುವ ನಿಟ್ಟಿನಲ್ಲಿ ಅಧ್ಯಯನ ಸಮಿತಿಯನ್ನು ರಚಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ. ೩೧ ರಂದು ಭಾಗಮಂಡಲ ಮೇಲ್ಸೇತುವೆ ಉದ್ಘಾಟನೆ ಆಗಮಿಸಿದ್ದ ಸಂದರ್ಭ ಶಾಸಕದ್ವಯರ ಸಮ್ಮುಖದಲ್ಲಿ ಬಹಿರಂಗವಾಗಿ ಘೋಷಣೆ ಮಾಡಿದ್ದರು.

ಸಿ ಮತ್ತು ಡಿ ಲ್ಯಾಂಡ್ ವಿಚಾರದಲ್ಲಿ ಜಿಲ್ಲೆಯಲ್ಲಿ ಏರ್ಪಟ್ಟಿರುವ ಗೊಂದಲ ಪರಿಹಾರಕ್ಕೆ ಸಮಿತಿ ರಚನೆಯ ವಾಗ್ದಾನ ನೀಡಿದ್ದ ಮುಖ್ಯಮಂತ್ರಿಗಳು, ರೈತರು ಭಯಪಡುವ ಅಗತ್ಯವಿಲ್ಲ ಅಧ್ಯಯನ ಸಮಿತಿ ವರದಿ ನೀಡಿದ ಬಳಿಕ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂಬ ವಿಶ್ವಾಸದ ಮಾತಿನ ಮೂಲಕ ಅಭಯ ನೀಡಿದ್ದರು. ಭರವಸೆ ನೀಡಿ ಎರಡು ತಿಂಗಳು ಕಳೆದರೂ ಯಾವುದೇ ಕ್ರಮಗಳು ಸರಕಾರದ ಮಟ್ಟದಲ್ಲಿ ನಡೆದಿಲ್ಲ.

ತಲತಲಾಂತರಗಳಿAದ ಸರಕಾರಿ ಜಾಗಗಳಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡು, ಮನೆ ನಿರ್ಮಿಸಿಕೊಂಡು ಜಿಲ್ಲೆಯ ಹಲವು ರೈತರು ಜೀವನ ಕಂಡುಕೊAಡಿದ್ದಾರೆ. ಹಲವು ವರ್ಷಗಳಿಂದ ಎದುರಾಗದ ತೊಡಕು ಇದೀಗ ನಿರ್ಮಾಣವಾಗಿರುವುದು ಸಾವಿರಾರು ರೈತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ರೈತರ ಶಕ್ತಿ ಪ್ರದರ್ಶನ

ಸಿ ಮತ್ತು ಡಿ ಲ್ಯಾಂಡ್ ಹಾಗೂ ಸೆಕ್ಷನ್ ೪ ಅಧಿಸೂಚಿತ ಜಾಗಗಳು ಅರಣ್ಯ ಇಲಾಖೆ ಸುಪರ್ದಿಗೆ ನೀಡುವ ವಿಚಾರ ವಿರೋಧಿಸಿ ಮಡಿಕೇರಿಯಲ್ಲಿ ೫ ಸಾವಿರಕ್ಕೂ ಹೆಚ್ಚು ರೈತರು ಬೃಹತ್ ಪ್ರತಿಭಟನೆ ನಡೆಸಿ ಸರಕಾರದ ಕ್ರಮವನ್ನು ವಿರೋಧಿಸಿ ರೈತರು ತಮ್ಮ ಶಕ್ತಿ ಪ್ರದರ್ಶನ ತೋರಿದ್ದರು.

ಹಾಲಿ ಶಾಸಕ ಮಂತರ್ ಗೌಡ, ಮಾಜಿ ಶಾಸಕರುಗಳು ಸೇರಿದಂತೆ ಪಕ್ಷಾತೀತವಾಗಿ ಈ ಹೋರಾಟಕ್ಕೆ ಬೆಂಬಲ ವ್ಯಕ್ತವಾಗಿ ಸರಕಾರವನ್ನು ಎಚ್ಚರಿಸುವ ಕೆಲಸ ನಡೆದಿತ್ತು.

(ಮೊದಲ ಪುಟದಿಂದ) ಸಿ ಮತ್ತು ಡಿ, ಸೆಕ್ಷನ್ ೪ ಸರಕಾರಿ ಜಾಗಗಳಾದರೂ ಹಲವು ವರ್ಷಗಳಿಂದ ಇಲ್ಲಿ ಕೃಷಿ ನಡೆಸುತ್ತ ರೈತರು ಬದುಕು ಕಟ್ಟಿಕೊಂಡಿದ್ದು, ಪಟ್ಟೆ ಸೇರಿದಂತೆ ಕೆಲ ದಾಖಲಾತಿಯನ್ನು ಹೊಂದಿದ್ದಾರೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಈ ಜಾಗಗಳನ್ನು ಅರಣ್ಯ ಇಲಾಖೆ ವಶಕ್ಕೆ ಪಡೆಯುವ ನಿರ್ಧಾರ ಕೈಗೊಂಡು ಕ್ರಮಕ್ಕೆ ಮುಂದಾಗಿದ್ದರು. ಸೆಕ್ಷನ್ ೪ ವಿಷಯದಲ್ಲೂ ರೈತರ ಅರಿವಿಗೆ ಬಾರದೆ ಭೂಮಿ ವಶಕ್ಕೆ ಪಡೆಯುವ ಹುನ್ನಾರ ನಡೆಯುತ್ತಿದೆ ಎಂದು ರೈತರು ಆರೋಪಿಸುತ್ತಿದ್ದಾರೆ.

ಈ ಅಂಶದಡಿ ಜಾಗ ಸ್ವಾಧೀನಪಡಿಸಿಕೊಂಡರೆ ಕೇವಲ ಕೃಷಿ ಭೂಮಿ ಮಾತ್ರವಲ್ಲದೆ ಶಾಲೆ, ಅಂಗನವಾಡಿ, ಕಟ್ಟಡಗಳು ಕೈತಪ್ಪಿ ಹೋಗುತ್ತವೆ. ಸೆಕ್ಷನ್ ೪ ಹಾಗೂ ಸಿ-ಡಿ ಲ್ಯಾಂಡ್ ಅನ್ನು ಅರಣ್ಯವಾಗಿ ಪರಿವರ್ತಿಸಿದರೆ ಜನಜೀವನದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿ ಬದುಕು ಬುಡಮೇಲಾಗುತ್ತದೆ ಎಂಬುದು ಹೋರಾಟಗಾರರ ವಾದವಾಗಿದೆ.

ಸೆಕ್ಷನ್ ೪ ಅಡಿ ಕ್ರಮಕ್ಕೆ ವ್ಯವಸ್ಥಾಪನಾಧಿಕಾರಿಯನ್ನೂ ನೇಮಿಸಿ ಸರ್ವೆ ನಂಬರ್‌ಗಳನ್ನು ಗುರುತಿಸಿ ಸ್ವಾಧೀನ ಸಂಬAಧ ಪ್ರಕ್ರಿಯೆ ಮುಂದಾಗಿರುವುದು ರೈತ ವಲಯದಲ್ಲಿ ಆಕ್ಷೇಪಕ್ಕೆ ಕಾರಣವಾಗಿದ್ದು, ಸರಕಾರ ರೈತಪರ ನಿಲುವು ತಾಳಬೇಕೆಂಬುದು ಒತ್ತಾಯವಾಗಿದೆ.

ಇದಲ್ಲದೆ ಇತ್ತೀಚಿಗೆ ಮಡಿಕೇರಿ, ಸೋಮವಾರಪೇಟೆ ಸೇರಿದಂತೆ ವಿವಿಧೆಡೆ ಜಿಲ್ಲಾ ಬಿಜೆಪಿ ವತಿಯಿಂದ ಸಿ ಮತ್ತು ಡಿ ಲ್ಯಾಂಡ್ ವಿಚಾರದಲ್ಲಿ ಸರಕಾರದ ಕೈಗೊಳ್ಳುತ್ತಿರುವ ನಿರ್ಧಾರವನ್ನು ಖಂಡಿಸಿ ಪ್ರತಿಭಟನೆಯನ್ನು ನಡೆಸಲಾಗಿತ್ತು.