ಸೋಮವಾರಪೇಟೆ, ಏ. ೧: ಸಾಮಾಜಿಕ ಪಿಡುಗುಗಳು, ಮೂಢನಂಬಿಕೆಗಳ ವಿರುದ್ಧ ಹಾಗೂ ಭ್ರಷ್ಟಾಚಾರಿಗಳನ್ನು ಸಾಮಾಜಿಕವಾಗಿ ಅವಮಾನ ಮಾಡುವಲ್ಲಿ ಬೀದಿ ನಾಟಕಗಳು ಪರಿಣಾಮಕಾರಿ ಯಾಗಿವೆ ಎಂದು ಹಿರಿಯ ರಂಗಕರ್ಮಿ, ಕರ್ನಾಟಕ ಜಾನಪದ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಹಾಸನದ ಗ್ಯಾರಂಟಿ ರಾಮಣ್ಣ ಅಭಿಪ್ರಾಯಿಸಿದರು.

ಕರ್ನಾಟಕ ನಾಟಕ ಅಕಾಡೆಮಿ, ನಾವು ಪ್ರತಿಷ್ಠಾನ ಮತ್ತು ಯಡೂರು ಗ್ರಾಮದ ಬಿಟಿಸಿಜಿ ಸರ್ಕಾರಿ ಪದವಿ ಕಾಲೇಜಿನ ಆಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ ನಡೆದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬೀದಿ ನಾಟಕ ಮತ್ತು ರಂಗಮAದಿರ ನಾಟಕಗಳಲ್ಲಿ ಎಲ್ಲಾ ರೀತಿಯ ಮೌಲ್ಯಗಳನ್ನು ಕಾಣಬಹುದು. ರಂಗಭೂಮಿಯ ಮೂಲಕ ಶಿಕ್ಷಣ ನೀಡುವುದು ಕಲಿಕೆಯ ದೃಷ್ಟಿಯಿಂದ ಸೂಕ್ತ ಎನ್ನುವುದು ಅನೇಕ ರಂಗತಜ್ಞರ ಅಭಿಪ್ರಾಯವಾಗಿದೆ ಎಂದರು. ನಮ್ಮ ವೃತ್ತಿ, ಪ್ರವೃತ್ತಿ ಮೇಲೆ ಜೀವನ ನಿಂತಿದೆ. ರಂಗಭೂಮಿ ಎಂಬುದು ಜೀವನದಲ್ಲಿ ಹೊಸಚೈತನ್ಯ ನೀಡುತ್ತದೆ. ನಮ್ಮಲ್ಲಿರುವ ಎಲ್ಲಾ ಕಲಾವಿದರ ಪ್ರತಿಭಾ ಪ್ರದರ್ಶನಕ್ಕೆ ರಂಗಭೂಮಿ ವೇದಿಕೆಯಾಗಿರುತ್ತದೆ. ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಜ್ಞಾನ ಹೆಚ್ಚುತ್ತದೆ. ಎಲ್ಲಾದರೂ ರಂಗ ಶಿಬಿರಗಳು ನಡೆದರೂ ಅದರಲ್ಲಿ ಪಾಲ್ಗೊಳ್ಳುವ ಮೂಲಕ, ರಂಗಭೂಮಿಗೆ ತಮ್ಮ ಕೊಡುಗೆ ನೀಡಬೇಕು ಎಂದು ಆಶಿಸಿದರು.

ಕರ್ನಾಟಕ ನಾಟಕ ಅಕಾಡೆಮಿ ಸದಸ್ಯೆ ಡಾ. ಜಾಹಿದ ಮಾತನಾಡಿ, ರಂಗ ಚಟುವಟಿಕೆಗಳ ಮೂಲಕ ರಂಗ ಭೂಮಿ ಜೀವಂತವಾಗಬೇಕು. ಕೊಡಗಿನಲ್ಲಿ ರಂಗ ಚಟುವಟಿಕೆಗಳು ನಡೆಯಬೇಕು. ರಂಗ ಶಿಬಿರಗಳನ್ನು ನಡೆಸಬೇಕು. ಕೊಡಗಿನ ಕಲಾವಿದರನ್ನು ಗೌರವಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು. ಕುಶಾಲನಗರದಲ್ಲಿರುವ ರಂಗಮAದಿರ ಇನ್ನು ಮುಂದೆ ಚಟುವಟಿಕೆ ಕೇಂದ್ರವಾಗಬೇಕು. ಈ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು. ಬಿಟಿಸಿಜಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಹರ್ಷ, ಹಾನಗಲ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಯಶಾಂತ್ ಕುಮಾರ್, ಮಹಿಳಾ ಸಮಾಜ ಅಧ್ಯಕ್ಷೆ ವಿಜಯಲಕ್ಷಿö್ಮÃ ಸುರೇಶ್ ಅವರುಗಳು ರಂಗಭೂಮಿಯ ಕೊಡುಗೆಗಳ ಬಗ್ಗೆ ಮಾತನಾಡಿದರು.

ದಿನಾಚರಣೆ ಅಂಗವಾಗಿ ಕಲಾವಿದ ಗ್ಯಾರಂಟಿ ರಾಮಣ್ಣ, ಹವ್ಯಾಸಿ ರಂಗಭೂಮಿ ಕಲಾವಿದೆ ಅನ್ನಪೂರ್ಣ ಮಹೇಶ್, ಡಾ. ಜಾಹಿದ ಅವರುಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ನಾವು ಪ್ರತಿಷ್ಠಾನ ಸಂಸ್ಥಾಪಕ ಗೌತಮ್ ಕಿರಗಂದೂರು, ಕಾರ್ಯಕಾರಿ ನಿರ್ದೇಶಕಿ ಸುಮನ ಮ್ಯಾಥ್ಯು, ಬಿಟಿಸಿಜಿ ಕಾಲೇಜು ಸಾಂಸ್ಕೃತಿಕ ಸಮಿತಿ ಸಂಚಾಲಕ ಹೆಚ್. ಹುಚ್ಚೇಗೌಡ, ನಾವು ಪ್ರತಿಷ್ಠಾನದ ಡಿ.ಆರ್. ಸವಿತ ಇದ್ದರು. ‘ಜನಜಾಗೃತಿಯಲ್ಲಿ ಬೀದಿ ನಾಟಕಗಳ ಪಾತ್ರ’ ಈ ಬಗ್ಗೆ ವಿಚಾರ ಸಂಕಿರಣ ನಡೆಯಿತು. ಚಾಮರಾಜನಗರ ಸಪ್ತಸ್ವರ ಸಾಂಸ್ಕೃತಿಕ ಕಲಾ ಸಂಘದ ಸದಸ್ಯರು ರಂಗ ಗೀತೆಗಳನ್ನು ಹಾಡಿದರು.