ಚೆಟ್ಟಳ್ಳಿ, ಏ. ೨: ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೈಸಾರಿ ಜಾಗದಲ್ಲಿ ಪೊನ್ನತ್‌ಮೊಟ್ಟೆ ಹಾಗೂ ಚೆಟ್ಟಳ್ಳಿಯ ೩೪ ನಿವೇಶನ ರಹಿತರು ಮಂಗಳವಾರ ಬೆಳಿಗ್ಗೆ ಏಕಾಏಕಿ ಶೆಡ್ ನಿರ್ಮಿಸಿ ನಿವೇಶನ ಜಾಗ ಹಂಚಿಕೆ ಮಾಡುವಂತೆ ಆಗ್ರಹಿಸಿದ ಘಟನೆ ನಡೆದಿದೆ.

ಚೆಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಕಾರಿ ಪೈಸಾರಿ ಜಾಗವಿದ್ದು, ನಿವೇಶನ ರಹಿತರು ಕಳೆದ ಹತ್ತು ವರ್ಷಗಳಿಂದ ಜಾಗ ಮಂಜೂರು ಮಾಡಿ ಶಾಶ್ವತ ಸೂರು ಕಲ್ಪಿಸಬೇಕೆಂದು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಹಾಗೂ ಶಾಸಕರಿಗೆ ಮನವಿ ಸಲ್ಲಿಸಿದರೂ ಇದುವರೆಗೂ ಸ್ಪಂದಿಸಿಲ್ಲ. ಆದರಿಂದ ಸೂರು ಬೇಕೆಂದು ಜಾಗ ಹಂಚಿಕೆ ತನಕ ಶೆಡ್ ನಿರ್ಮಿಸಿಕೊಂಡು ವಾಸಿಸುವುದಾಗಿ ತಿಳಿಸಿದರು.

ಮಾಹಿತಿ ತಿಳಿದ ತಕ್ಷಣ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಕಲ್ಪ, ಪಂಚಾಯಿತಿ ಅಧ್ಯಕ್ಷೆ ಸಿಂಧು ಸ್ಥಳಕ್ಕೆ ಬೇಟಿ ನೀಡಿ ಈ ಜಾಗ ಕಾರ್ಯ ನಿರ್ವಹಣಾಧಾರಿ ಹೆಸರಿನಲ್ಲಿದ್ದು ನಿಯಮಾನುಸಾರ ನಿವೇಶನ ರಹಿತರಿಗೆ ಜಾಗ ಹಂಚಿಕೆ ಮಾಡುವುದಾಗಿ ಮನವೊಲಿಸುವ ಪ್ರಯತ್ನ ನಡೆಸಿದರು.

ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪರಮೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಸ್ಥಳಕ್ಕೆಭೇಟಿ ನೀಡಿ ನಿವೇಶನ ರಹಿತರ ಆಹವಾಲು ಸ್ವೀಕರಿಸಿ ಮಾತನಾಡಿ, ನಿವೇಶನ ಜಾಗದ ದಾಖಲೀಕರಣ ನಡೆಯುತ್ತಿದ್ದು, ಜಾಗ ಗುರುತಿಸಿದ ನಂತರ ಗ್ರಾಮಸಭೆ ನಡೆಸಿ ನಿವೇಶನ ಹಂಚಿಕೆ ತನಕ ಶೆಡ್ ನಿರ್ಮಿಸದಂತೆ ಸೂಚಿಸಿದರು.

ಇದರಿಂದ ಕೆಲವರು ಸ್ಥಳದಿಂದ ತೆರಳಿದರೆ ಹೆಚ್ಚಿನವರು ಶೆಡ್ ನಿರ್ಮಾಣ ಮಾಡಿ ಇಲ್ಲೇ ವಾಸಿಸುವುದಾಗಿ ಎಚ್ಚರಿಸಿದರು. ಈ ಸಂದರ್ಭದಲ್ಲಿ ಪಂಚಾಯಿತಿ ಸದಸ್ಯರಿಗೂ ನಿವೇಶನ ರಹಿತ ಹೋರಾಟಗಾರ ನಡುವೇ ಮಾತಿನ ಚಕಮಕಿ ನಡೆಯಿತು. ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ಮಾತಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕೆಲವರು ನಮ್ಮ ಮೇಲೆ ಕೇಸು ಹಾಕಿದರೂ ಜೈಲಿಗೆ ಹಾಕಿದರೂ ಶಾಶ್ವತ ಸೂರು ನೀಡುವವರೆಗೂ ಈ ಜಾಗವನ್ನು ಬಿಡುವುದಿಲ್ಲ ಎಂದರು.