ಮಡಿಕೇರಿ, ಏ. ೭ : ಕೊಡಗು ಜಿಲ್ಲಾ ಬಂಟರ ಸಂಘ ಹಾಗೂ ಯುವ ಬಂಟ್ಸ್ ಅಸೋಸಿಯೇಷನ್ ವತಿಯಿಂದ ಮೇ ೧೦ ಮತ್ತು ೧೧ ರಂದು ಮಡಿಕೇರಿಯಲ್ಲಿ ಬಂಟೆರೆನ ವಾರ್ಷಿಕ ಸಮ್ಮಿಲನ-೨೦೨೫ ನಡೆಯಲಿದ್ದು, ಸಮಾಜಬಾಂಧವರಿಗೆ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದೆ ಎಂದು ಯುವ ಬಂಟ್ಸ್ ಅಸೋಸಿಯೇಷನ್ ನಿರ್ದೇಶಕ ಕೆ. ಶರತ್‌ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ (ಮ್ಯಾನ್ ಕಾಂಪೌAಡ್)ದಲ್ಲಿ ಬೆಳಿಗ್ಗೆ ೯ ಗಂಟೆಗೆ ಸಭಾ ಕಾರ್ಯಕ್ರಮದ ಹಾಗೂ ವಿವಿಧ ಕ್ರೀಡಾಕೂಟಗಳಿಗೆ ಚಾಲನೆ ದೊರೆಯಲಿದೆ ಎಂದರು.
ಕಾರ್ಯಕ್ರಮದ ಅಂಗವಾಗಿ ಪುರುಷರಿಗೆ ಕ್ರಿಕೆಟ್, ವಾಲಿಬಾಲ್, ಹಗ್ಗಜಗ್ಗಾಟ ಸ್ಪರ್ಧೆ ನಡೆಯಲಿದ್ದು, ಕ್ರಿಕೆಟ್ ಮತ್ತು ವಾಲಿಬಾಲ್ ತಂಡಗಳು ಏ.೨೦ರ ಒಳಗಾಗಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಹೇಳಿದರು.
ಮಹಿಳೆಯರಿಗೆ ಥ್ರೋಬಾಲ್, ಹಗ್ಗಜಗ್ಗಾಟ, ನಿಂಬೆ ಚಮಚ ಹಾಗೂ ಇತರೆ ಆಕರ್ಷಕ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಮಕ್ಕಳಿಗೆ ೧೦೦ ಮೀ ಓಟ ಹಾಗೂ ಮನೋರಂಜನಾ ಸ್ಪರ್ಧೆ ನಡೆಯಲಿದೆ ಎಂದು ಹೇಳಿದರು.
ಇದೇ ಸಂದರ್ಭ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಲಿದ್ದು, ಕೊಡಗಿನ ಎಲ್ಲಾ ಸ್ವಜಾತಿ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಾವಣೆಗಾಗಿ ನಿಖಿಲ್ ಆಳ್ವ ೯೯೭೨೪೭೭೯೮೨, ಸುಜಿತ್ ಶೆಟ್ಟಿ ೯೬೬೩೭೨೧೭೦೭ ಸಂಪರ್ಕಿಸಬಹುದಾಗಿದೆ ಎಂದು ಶರತ್ ಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಯುವ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಬಿ.ಕೆ. ಸದಾನಂದ ರೈ, ನಿರ್ದೇಶಕರಾದ ಬಿ.ಬಿ.ಬಾಲಕೃಷ್ಣ ರೈ, ಬಿ.ಎಸ್. ಕಿಶೋರ್ ರೈ, ಎನ್. ರವಿಕಿರಣ್ ಶೆಟ್ಟಿ ಉಪಸ್ಥಿತರಿದ್ದರು.