ಮಡಿಕೇರಿ, ಏ. ೧೨: ಅರೆಭಾಷೆ ಗೌಡ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಪ್ರಪ್ರಥಮ ವರ್ಷದ ಗೌಡ ಕ್ರೀಡಾ ಹಬ್ಬವನ್ನು ಮಡಿಕೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ತಾ. ೧೮, ೧೯ ಮತ್ತು ೨೦ ರಂದು ನಗರದ ಗಾಂಧಿ ಮೈದಾನದಲ್ಲಿ ಫುಟ್ಬಾಲ್ ಚಾಂಪಿಯನ್‌ಶಿಪ್ ಲೀಗ್, ಪುರುಷರ ವಾಲಿಬಾಲ್ ಮತ್ತು ಮಹಿಳೆಯರ ಥ್ರೋಬಾಲ್ ಪಂದ್ಯಾವಳಿ ನಡೆಯಲಿದೆ ಎಂದು ಅಕಾಡೆಮಿ ನಿರ್ದೇಶಕ ಪೊನ್ನಚ್ಚನ ಶ್ರೀನಿವಾಸ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅರೆಭಾಷಿಕ ಜನಾಂಗದ ಪ್ರತಿಭಾವಂತ ಆಟಗಾರರಿಗೆ ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕ್ರೀಡಾಕೂಟ ಏರ್ಪಡಿಸಲಾಗಿದೆ. ತಾ.೧೮ರಂದು ೧೬ ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಫುಟ್ಬಾಲ್ ಪಂದ್ಯಾಟ (೫+೨) ನಡೆಯಲಿದೆ. ಬಾಲಕಿಯರ ವಿಭಾಗದಲ್ಲಿ ೪ ತಂಡ, ಬಾಲಕರ ವಿಭಾಗದಲ್ಲಿ ೮ ತಂಡಗಳು ನೋಂದಾಯಿಸಲ್ಪಟ್ಟಿವೆ. ಅದೇ ದಿನ ಮಡಿಕೇರಿ ನಗರ ವ್ಯಾಪ್ತಿಯ ಮುಕ್ತ ಫುಟ್ಬಾಲ್ ಪಂದ್ಯಾಟ(೫+೨) ನಡೆಯಲಿದ್ದು, ೮ ಫ್ರಾಂಚೈಸಿಗಳಿವೆ. ಗೌಡ ಫುಟ್ಬಾಲ್ ಚಾಂಪಿಯನ್ ಲೀಗ್‌ನಲ್ಲಿ ೧೦ ಫ್ರಾಂಚೈಸಿ ತಂಡಗಳಿವೆ. ಈಗಾಗಲೇ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆದಿದೆ. ಹಗಲು ಮತ್ತು ಹೊನಲು ಬೆಳಕಿನಲ್ಲಿ ಪಂದ್ಯಾಟ ನಡೆಯಲಿದೆ ಎಂದು ತಿಳಿಸಿದರು.
ತಾ.೧೯ ರಂದು ಗೌಡ ಜನಾಂಗದ ಮಹಿಳೆಯರ ಗ್ರಾಮವಾರು ಥ್ರೋಬಾಲ್ ಪಂದ್ಯಾವಳಿ, ೧೦ ಕುಟುಂಬ ೧೮ ಗೋತ್ರದ ಗೌಡ ಕುಟುಂಬಗಳ ನಡುವಿನ ಪುರುಷರ ವಾಲಿಬಾಲ್ ಪಂದ್ಯಾಟ ನಡೆಯಲಿದ್ದು, ಓರ್ವ ಅತಿಥಿ ಆಟಗಾರನಿಗೆ ಅವಕಾಶ ನೀಡಲಾಗಿದೆ. ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಪುರುಷರ ಮುಕ್ತ ವಾಲಿಬಾಲ್ ಪಂದ್ಯಾವಳಿಯೂ ನಡೆಯಲಿದೆ ಎಂದು ಮಾಹಿತಿ ನೀಡಿದರು. ತಾ.೨೦ರಂದು ನಡೆಯಲಿರುವ ಫೈನಲ್ ಪಂದ್ಯಾಟದ ವಿಜೇತರಿಗೆ ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಗುವುದು. ಗೌಡ ಫುಟ್ಬಾಲ್ ಚಾಂಪಿಯನ್ ಲೀಗ್‌ನ ವಿಜೇತ ತಂಡಕ್ಕೆ ರೋಲಿಂಗ್ ಟ್ರೋಫಿ ಸಿಗಲಿದೆ ಎಂದು ಪೊನ್ನಚ್ಚನ ಶ್ರೀನಿವಾಸ್ ತಿಳಿಸಿದರು.
ಗೋಷ್ಠಿಯಲ್ಲಿ ಅಕಾಡೆಮಿ ನಿರ್ದೇಶಕರಾದ ಮಞ್ಞಂಡ್ರ ಲೋಹಿತ್, ನಂಗಾರು ಅಭಿಷೇಕ್, ಕುಕ್ಕೇರ ನಯನ ಹಾಗೂ ಲಿಖಿತ್ ಹಾಜರಿದ್ದರು.