ಇಂದು ಜನ್ಮ ದಿನಾಚರಣೆ

ಇಂದು ಅಂಬೇಡ್ಕರ್ ಜಯಂತಿ - ಸಂವಿಧಾನ ಶಿಲ್ಪಿ ಡಾ. ಭೀಮರಾವ್ ರಾಮ್‌ಜಿ ಅಂಬೇಡ್ಕರ್‌ರನ್ನು ಸ್ಮರಿಸುವ ಪವಿತ್ರ ದಿನ. ಈ ದಿನವು ಅವರ ಜನ್ಮದಿನದ ಆಚರಣೆ ಮಾತ್ರವಲ್ಲದೆ ನ್ಯಾಯ, ಸಮಾನತೆ ಮತ್ತು ಮಾನವೀಯ ಘನತೆಗಾಗಿ ಅವರು ನಡೆಸಿದ ಅವಿರತ ಹೋರಾಟದ ಸಂಸ್ಮರಣೆಯ ಸಂಕೇತವಾಗಿ, ಎಂದೆAದಿಗೂ ಅವರ ಆದರ್ಶಗಳು ಚಿರಸ್ಮರಣೀಯವಾಗಿವೆ.

೧೮೯೧ ಏಪ್ರಿಲ್ ೧೪ ರಂದು ದಲಿತ ಕುಟುಂಬದಲ್ಲಿ ಜನಿಸಿದ ಡಾ. ಅಂಬೇಡ್ಕರ್, ಚಿಕ್ಕ ವಯಸ್ಸಿನಿಂದಲೇ ಜಾತಿ ತಾರತಮ್ಯದ ಕಾಠಿಣ್ಯತೆಗಳನ್ನು ಎದುರಿಸಿದರು. ಆದರೆ, ಅವರ ಅಚಲ ಮನೋಭಾವವು ಆ ತೊಡಕನ್ನು ಶಕ್ತಿಯಾಗಿ ಪರಿವರ್ತಿಸಿತು. ಕೊಲಂಬಿಯಾ ವಿಶ್ವವಿದ್ಯಾಲಯ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಿಂದ ಡಾಕ್ಟರೇಟ್ ಪಡೆದ ಅವರು, ಕಾನೂನು, ಅರ್ಥಶಾಸ್ತç ಮತ್ತು ರಾಜಕೀಯ ಶಾಸ್ತçದಲ್ಲಿ ಪರಿಣತರಾದರು. ಅವರ ಬುದ್ಧಿವಂತಿಕೆ ಸಮಾಜದಲ್ಲಿನ ಶೋಷಣೆಯ ವಿರುದ್ಧ ಆಯುಧವಾಯಿತು; ಲಕ್ಷಾಂತರ ಜನರನ್ನು ಕಟ್ಟಿಹಾಕಿದ್ದ ಅಸಮಾನತೆಯ ಸರಪಳಿಗಳನ್ನು ಒಡೆದು ಹಾಕಿ ಸಮಾನತೆಯ ಜ್ಯೋತಿ ಬೆಳಗುವುದೇ ಅವರ ಜೀವನದ ಧ್ಯೇಯವಾಯಿತು. ಭಾರತೀಯ ಸಂವಿಧಾನದ ಪ್ರಮುಖ ರೂವಾರಿಯಾಗಿ ಡಾ. ಅಂಬೇಡ್ಕರ್ ರವರು ನೀಡಿದ ಕೊಡುಗೆ ಅಪಾರ. ಸ್ವಾತಂತ್ರ‍್ಯ, ಸಮಾನತೆ ಮತ್ತು ಸೌಭ್ರಾತೃತ್ವದ ಭರವಸೆಯೊಂದಿಗೆ ರಚಿತವಾದ ಸಂವಿಧಾನವು ಕೇವಲ ಒಂದು ಕಾನೂನು ದಾಖಲೆಯಲ್ಲ, ಶೋಷಿತ ವರ್ಗದವರ ಆಶಾಕಿರಣವಾಗಿದೆ. ಜಾತಿ, ಧರ್ಮ, ಲಿಂಗದ ಆಧಾರದ ಮೇಲೆ ಯಾರ ಘನತೆಯನ್ನೂ ನಿರಾಕರಿಸದಂತೆ ಇದು ಖಾತರಿ ಪಡಿಸುತ್ತದೆ.

ಡಾ. ಅಂಬೇಡ್ಕರ್‌ರವರ ಜೀವನವು ಕೇವಲ ಶೈಕ್ಷಣಿಕ ಸಾಧನೆಯಿಂದ ಮಾತ್ರವಲ್ಲ, ಸಾಮಾಜಿಕ ನ್ಯಾಯಕ್ಕಾಗಿ ಅವರು ತೋರಿದ ಧೀರತೆಯಿಂದಲೂ ಮಹತ್ವ ಪಡೆದಿದೆ. ಅವರು ತಮ್ಮ ಆರಂಭಿಕ ಜೀವನದಲ್ಲಿ ತರಗತಿಯ ಹೊರಗೆ ಕುಳಿತು ಪಾಠ ಕೇಳಬೇಕಾದ ಸಂದರ್ಭಗಳನ್ನು ಎದುರಿಸಿದರು. ಆದರೆ ಈ ಎಲ್ಲಾ ಸವಾಲುಗಳ ಮಧ್ಯೆಯೂ ಶಿಕ್ಷಣದ ಮೇಲಿನ ಅವರ ದೃಢ ನಂಬಿಕೆಯು ಅವರನ್ನು ಮುನ್ನಡೆಸಿತು. ಅವರು ಎಲ್‌ಫಿನ್‌ಸ್ಟೋನ್ ಕಾಲೇಜ್‌ನಲ್ಲಿ ಪದವಿ ಪಡೆದ ಮೊದಲ ದಲಿತ ವಿದ್ಯಾರ್ಥಿಯಾಗಿ ಇತಿಹಾಸ ಸೃಷ್ಟಿಸಿದರು. ತಮ್ಮ ವಿದೇಶಿ ಶಿಕ್ಷಣದ ಸಮಯದಲ್ಲಿ, ಅವರು ಕೇವಲ ಪುಸ್ತಕ ಜ್ಞಾನವನ್ನು ಮಾತ್ರ ಸಂಗ್ರಹಿಸಲಿಲ್ಲ, ಸಮಾಜದ ರಚನೆಯನ್ನು ಆಳವಾಗಿ ಅರ್ಥಮಾಡಿಕೊಂಡರು ಹಾಗೂ ಹಲವಾರು ದೇಶಗಳ ಸಂವಿಧಾನಗಳನ್ನೂ ಕೂಡ ಅಧ್ಯಯನ ಮಾಡಿದರು. ಅವರು ತಮ್ಮ ಗ್ರಂಥಗಳಾದ ‘ಆನಿಹಿಲೇಶನ್ ಆಫ್ ಕಾಸ್ಟ್’ ಮತ್ತು ‘ದಿ ಬುದ್ಧ ಆಂಡ್ ಹಿಸ್ ಧಮ್ಮ’ ಮೂಲಕ ಜಾತಿ ವ್ಯವಸ್ಥೆಯ ದುಷ್ಪರಿಣಾಮಗಳನ್ನು ಜಗತ್ತಿಗೆ ಮನವರಿಕೆ ಮಾಡಿದರು. ಅವರ ಜೀವನದ ಪ್ರತಿಯೊಂದು ಹೆಜ್ಜೆಯೂ ಶೋಷಿತರ ಉದ್ಧಾರಕ್ಕಾಗಿ ಮೀಸಲಾಗಿತ್ತು.

ಅಂಬೇಡ್ಕರ್‌ರವರ ಮೌಲ್ಯಗಳು ಸಮಾನತೆ, ಸ್ವಾತಂತ್ರö್ಯ ಮತ್ತು ಸಾಮಾಜಿಕ ಸಾಮರಸ್ಯದ ಮೇಲೆ ಆಧಾರಿತವಾಗಿದ್ದವು. ಅವರು ಭಾರತದಲ್ಲಿ ಸಾಮಾಜಿಕ ಕ್ರಾಂತಿಯ ದಾರಿದೀಪವಾದರು. ೧೯೩೦ರಲ್ಲಿ ನಡೆದ ಕಲ್ಲಾ ರಾಮ್ ದೇವಸ್ಥಾನ ಪ್ರವೇಶ ಸತ್ಯಾಗ್ರಹ ಮತ್ತು ೧೯೩೨ರ ಪೂನಾ ಒಡಂಬಡಿಕೆಯAತಹ ಘಟನೆಗಳಲ್ಲಿ ಅವರು ದಲಿತರಿಗೆ ಸ್ವಾಭಿಮಾನದ ಜೀವನಕ್ಕಾಗಿ ಹೋರಾಡಿದರು. ಶಿಕ್ಷಣವನ್ನು ಅವರು ಸಮಾಜದ ಉನ್ನತಿಗೆ ಪ್ರಮುಖ ಸಾಧನವೆಂದು ಪರಿಗಣಿಸಿದರು ಮತ್ತು ಶಿಕ್ಷಣದ ಮೂಲಕ ದಲಿತರ ಸಬಲೀಕರಣಕ್ಕಾಗಿ ಒತ್ತಾಯಿಸಿದರು. ಅವರ ಪ್ರಕಾರ, ಜಾತಿ ವ್ಯವಸ್ಥೆಯು ಭಾರತದ ಸಾಮಾಜಿಕ ಬೆಳವಣಿಗೆಗೆ ದೊಡ್ಡ ಅಡ್ಡಿಯಾಗಿತ್ತು. ಅದನ್ನು ಸಂಪೂರ್ಣವಾಗಿ ತೊಡೆದುಹಾಕದೆ ಸಮಾನ ಸಮಾಜದ ಕನಸು ಸಾಕಾರವಾಗಲಾರದು ಎಂದು ಅವರು ದೃಢವಾಗಿ ನಂಬಿದ್ದರು. ತಮ್ಮ ರಾಜಕೀಯ ಪ್ರವೇಶದ ಮೂಲಕ ಅವರು ಶೋಷಿತರಿಗೆ ಧ್ವನಿಯಾದರು. ಸಂವಿಧಾನ ಸಮಿತಿಯ ಅಧ್ಯಕ್ಷರಾಗಿ ಎಲ್ಲರಿಗೂ ಸಮಾನ ಹಕ್ಕುಗಳನ್ನು ಖಾತರಿಪಡಿಸುವ ಸಂವಿಧಾನವೆAಬ ದಾಖಲೆಯನ್ನು ರಚಿಸಿದರು. ಅವರ ಈ ಕೊಡುಗೆಯು ಭಾರತವನ್ನು ಆಧುನಿಕ ಪ್ರಜಾಪ್ರಭುತ್ವ ರಾಷ್ಟçವಾಗಿ ರೂಪಿಸಿತು.

ಅಂಬೇಡ್ಕರ್ ರವರು “ಶಿಕ್ಷಣವೇ ಸಬಲೀಕರಣದ ಶ್ರೇಷ್ಠ ಸಾಧನ” ಎಂದು ನಂಬಿದ್ದವರು. ದಲಿತ ಹಕ್ಕುಗಳು ಮತ್ತು ಮಹಿಳಾ ಸಬಲೀಕರಣಕ್ಕಾಗಿ ಅವರ ನಿಲುವು ಇಂದಿಗೂ ಮಹತ್ವದ್ದಾಗಿದೆ. “ಮಹಿಳೆಯರು ಎಷ್ಟು ಪ್ರಗತಿ ಸಾಧಿಸಿದ್ದಾರೆ ಎಂಬುದರ ಮೂಲಕ ಸಮುದಾಯದ ಪ್ರಗತಿಯನ್ನು ಅಳೆಯಬಹುದು” ಎಂಬ ಅವರ ಮಾತುಗಳು ಸದಾ ನಿಜಸತ್ಯ. ಮಹಿಳೆಯರು ರಾಜಕೀಯ, ಉದ್ಯಮ ಮತ್ತು ಶಿಕ್ಷಣದಲ್ಲಿ ಮುಂದುವರಿಯುತ್ತಿದ್ದರೂ, ಲಿಂಗ ಮತ್ತು ಜಾತಿ ತಾರತಮ್ಯದಂತಹ ಸಮಸ್ಯೆಗಳು ಇನ್ನೂ ಉಳಿದಿವೆ. ಇವುಗಳ ವಿರುದ್ಧ ಹೋರಾಡಿ ಸಮಾಜದಲ್ಲಿ ಸಮಾನತೆಯ ಬೀಜ ಬಿತ್ತುವುದೇ ಅವರಿಗೆ ಹಾಗೂ ಸುಂದರವಾದ ನಾಳೆಗಳಿಗೆ ನಾವು ನೀಡಬಹುದಾದ ನಿಜವಾದ ಗೌರವ.

೧೯೫೬ರಲ್ಲಿ ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ಧರ್ಮಕ್ಕೆ ಮತಾಂತರಗೊAಡ ಅಂಬೇಡ್ಕರ್, ಜಾತಿ ಶ್ರೇಣಿಗಳನ್ನು ತಿರಸ್ಕರಿಸಿದರು. ಅಂಬೇಡ್ಕರ್ ರವರು ತಮ್ಮ ಸಂದೇಶಗಳ ಮೂಲಕ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಪ್ರೇರೇಪಿಸಿದರು. ಸಮಾಜಕ್ಕೆ ಜಾಗರೂಕ ನಾಗರಿಕರ ಅಗತ್ಯತೆಯನ್ನು ಒತ್ತಿ ಹೇಳಿದರು. ಪ್ರಜಾಪ್ರಭುತ್ವದ ಶಕ್ತಿಯು ಶಕ್ತಿಹೀನರಿಗೆ ಸೇವೆ ಸಲ್ಲಿಸಿದಾಗ ಮಾತ್ರ ಜೀವಂತವಾಗಿರುತ್ತದೆ ಎಂಬ ಅವರ ಮಾತು ಇಂದಿಗೂ ಸತ್ಯ. ಅಂಬೇಡ್ಕರ್ ಜಯಂತಿಯನ್ನು ನಾಮಕಾವಸ್ತೆಗೆ, ಯಾರದ್ದೋ ಒತ್ತಾಯಕ್ಕೆ, ಕೇವಲ ಸೀಮಿತವರ್ಗದವರಿಗೆ ಮಾತ್ರ ಎಂದು ತಿಳಿಯದೇ, ಹೂವಿನ ಹಾರಗಳು ಮತ್ತು ಭಾಷಣಗಳಿಗೆ ಸೀಮಿತಗೊಳಿಸದೇ, ಅವರ ಜೀವನದ ಕರೆಯನ್ನು ಕಾರ್ಯರೂಪಕ್ಕೆ ತರೋಣ. ಒಬ್ಬ ಮಗುವನ್ನು ಶಿಕ್ಷಣಕ್ಕೆ ಪ್ರೇರೇಪಿಸುವುದು, ಶೋಷಿತರಿಗೆ ಬೆಂಬಲ ನೀಡುವುದು, ಮನಸ್ಸಿನ ಪೂರ್ವಾಗ್ರಹವನ್ನು ಪ್ರಶ್ನಿಸುವುದು ಇವುಗಳು ಅವರಿಗೆ ಸಲ್ಲುವ ನಿಜವಾದ ಗೌರವಗಳಾಗಿವೆ. “ಸಮಾನತೆ ಒಂದು ಘೋಷಣೆಯಲ್ಲ, ಜೀವಂತ ಸತ್ಯವಾಗಿರಬೇಕು” ಎಂಬ ಅವರ ಮಾತಿನಂತೆ, ೨೦೨೫ರಲ್ಲಿ ಆ ದಿಶೆಯಲ್ಲಿ ಸಾಗೋಣ. ಜೈ ಭೀಮ್!

- ತೇಜಸ್ ಮೂರ್ತಿ, ಕುಶಾಲನಗರ.