ಶನಿವಾರಸಂತೆ, ಏ. ೧೩: ವಿಶ್ವ ಮಹಿಳಾ ದಿನಾಚರಣೆ ಮಹಿಳೆಯರಿಗೆ ಸ್ಫೂರ್ತಿದಾಯಕ ದಿನವಾಗಿದೆ ಎಂದು ಸಂಜೀವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ವೇದಾವತಿ ವಿಷ್ಣುವರ್ಧನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸಮೀಪದ ಕೊಡ್ಲಿಪೇಟೆ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಸಂಜೀವಿನಿ ಮಹಿಳಾ ಒಕ್ಕೂಟ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಸಮಾರಂಭವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಪ್ಸರಿ ಬೇಗಂ ಜತೆಗೂಡಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿ, ಮಾತನಾಡಿದರು.
ಪುರುಷರಂತೆ ಮಹಿಳೆಯರು ಎಲ್ಲಾ ಹಕ್ಕುಗಳನ್ನು ಪಡೆದುಕೊಂಡ, ಸಮಾನ ಕೆಲಸಕ್ಕೆ ಸಮಾನ ವೇತನ, ಮತದಾನದ ಹಕ್ಕು, ಶೈಕ್ಷಣಿಕ, ಸಾಂಸ್ಕೃತಿಕ, ಕಾನೂನಾತ್ಮಕ ಇತರೆ ಹಕ್ಕುಗಳನ್ನು ಪಡೆದುಕೊಂಡ ಯಶಸ್ವಿಯಾದ ಸ್ಮರಣೀಯ ದಿನ ಎಂದರು. ಮುಖ್ಯ ಅತಿಥಿ ಕರವೇ ಅಧ್ಯಕ್ಷ ರಾಜೇಶ್ ಮಾತನಾಡಿ, ಮಹಿಳಾ ದಿನಾಚರಣೆಯ ಮಹತ್ವದ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಸಾವಿತ್ರಿಬಾಯಿ ಫುಲೆ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕಿ ರಿಜ್ವಾನಾಬಾನು, ಕೆನರಾ ಬ್ಯಾಂಕ್ ವ್ಯವಸ್ಥಾಪಕಿ ಪ್ರಗತಿ, ರಾಜ್ಯ ಸರ್ಕಾರಿ ನೌಕರರ ಸಂಘದ ಸೋಮವಾರಪೇಟೆ ತಾಲೂಕು ಸಂಘದ ನಿರ್ದೇಶಕ ಜೆ.ಡಿ. ಸುರೇಶ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಗ್ರಾಮ ಪಂಚಾಯಿತಿ ಸದಸ್ಯ ಕೆ.ಆರ್. ಚಂದ್ರಶೇಖರ್, ಆಗಳಿ ಸರ್ಕಾರಿ ಶಾಲೆ ಮುಖ್ಯಶಿಕ್ಷಕ ವಿಷ್ಣುವರ್ಧನ್, ಕರವೇ ಕಾರ್ಯಕರ್ತರಾದ ಕೆಂಚೇಶ್ವರ್, ನಾಗರಾಜ್, ಗ್ರಾಮ ಪಂಚಾಯಿತಿ ಸದಸ್ಯರು, ಆಶಾ ಕಾರ್ಯಕರ್ತೆಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಒಕ್ಕೂಟದ ಸದಸ್ಯೆ ಹೂವಮ್ಮ ಸ್ವಾಗತಿಸಿ, ನಿರೂಪಿಸಿದರು. ಸದಸ್ಯೆ ನಳಿನಾಕ್ಷಿ ವಂದಿಸಿದರು.
ಸಮಾರAಭಕ್ಕೆ ಮೊದಲು ಮಹಿಳೆಯರಿಗೆ ಆಟೋಟ ಸ್ಪರ್ಧೆಗಳನ್ನು, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.