ಮಡಿಕೇರಿ, ಏ. ೧೩: ಜನಸಾಮಾನ್ಯರ ಬದುಕನ್ನು ಹಸನಾಗಿಸುವ ಕಾರ್ಯಕ್ರಮಗಳನ್ನು ಕೇಂದ್ರ ಸರಕಾರ ಕೈಗೊಂಡಿದ್ದು, ಇಂತಹ ಯೋಜನೆಗಳನ್ನು ಪ್ರತಿಯೊಬ್ಬರು ಸದ್ಭಳಕೆ ಮಾಡಿಕೊಳ್ಳಬೇಕೆಂದು ಸಂಸದ ಯದುವೀರ್ ಒಡೆಯರ್ ಕರೆ ನೀಡಿದರು.
ಭಾರತೀಯ ಜನತಾ ಪಾರ್ಟಿ ಎಸ್.ಸಿ ಮೋರ್ಚಾದ ವತಿಯಿಂದ ನಗರದ ಜ. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಕೇಂದ್ರ ಸರಕಾರದ ವಿವಿಧ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಕಾರ್ಯಾಗಾರ, ಉಚಿತ ಆರೋಗ್ಯ ತಪಾಸಣೆ ಶಿಬಿರ, ಬೃಹತ್ ರಕ್ತದಾನ ಶಿಬಿರ ಮತ್ತು ಜಿಲ್ಲೆಯ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದ ಯದುವೀರ್, ಕೇಂದ್ರ ಸರ್ಕಾರದ ಯೋಜನೆಗಳು ಜನರ ಬದುಕನ್ನು ಕಟ್ಟಿಸಿಕೊಳ್ಳುವಂತ ಯೋಜನೆಯಾಗಿದ್ದು, ಈ ಬಗ್ಗೆ ಪ್ರತಿಯೊಬ್ಬರಿಗೂ ಸಾರ್ವಜನಿಕರಿಗೆ ಮಾಹಿತಿ ನೀಡುವ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ಎಸ್.ಸಿ. ಮೋರ್ಚಾದ ಕೈಗೊಂಡ ಕಾರ್ಯಕ್ರಮ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪರಿಶಿಷ್ಟ ವರ್ಗಗಳಿಗೆ ಕೇಂದ್ರ ಸರ್ಕಾರದ ಅನೇಕ ಯೋಜನೆಗಳನ್ನು ಜಾರಿ ಮಾಡಿದೆ. ಅದನ್ನು ಸದ್ಬಳಕ್ಕೆ ಮಾಡಿಕೊಳ್ಳಲು ಮತ್ತು ಮಾಹಿತಿ ನೀಡಲು ವೇದಿಕೆಯನ್ನು ಕಲ್ಪಿಸಿ ಕೊಡಬೇಕಾಗಿದೆ ಎಂದರು.
ಎಸ್.ಸಿ. ಮೋರ್ಚದ ರಾಜ್ಯಾಧ್ಯಕ್ಷ ಹಾಗೂ ಸಕಲೇಶಪುರ ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಮಾತನಾಡಿ, ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿಗಾಗಿ ನಿಗಮ ಮಂಡಳಿಗಳು ಸೇರಿದಂತೆ ಅನೇಕ ಯೋಜನೆಗಳಿವೆ. ಯೋಜನೆಗಳ ಬಗ್ಗೆ ಮಾಹಿತಿ ಕಾರ್ಯಾಗಾರ ಆಯೋಜಿಸಿರುವುದು ಶ್ಲಾಘನೀಯ. ಪರಿಶಿಷ್ಟ ಜಾತಿ ಸಮುದಾಯದವರು ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಸರಕಾರದ ಎಲ್ಲಾ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
ಮಾಜಿ ಶಾಸಕ ಕೆ.ಜಿ. ಬೊಪಯ್ಯ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಎಲ್ಲಾ ರೀತಿಯ ಸೌಲಭ್ಯಗಳು ಸರಕಾರದಿಂದ ಇದ್ದು, ಅದನ್ನು ಪಡೆದುಕೊಳ್ಳಲು ಮುಂದೆ ಬರಬೇಕು. ಮೋದಿ ಸರಕಾರದಲ್ಲಿ ಹೆಚ್ಚಿನ ಯೋಜನೆಗಳು ಪರಿಶಿಷ್ಟ ವರ್ಗಕ್ಕೆ ಮೀಸಲಿದೆ ಎಂದರು.
ಆರೋಗ್ಯ ತಪಾಸಣಾ ಮತ್ತು ರಕ್ತದಾನ ಶಿಬಿರವನ್ನು ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಉದ್ಘಾಟಿಸಿದರು.
ಎಸ್.ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಪಿ.ಎಂ.ರವಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೃಷಿ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಬಿ.ಸಿ. ನವೀನ್ ಕುಮಾರ್, ಕೊಳ್ಳೇಗಾಲ ಕ್ಷೇತ್ರದ ಮಾಜಿ ಶಾಸಕ ಬಾಲರಾಜು, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಅಫ್ರು ರವೀಂದ್ರ, ಮಡಿಕೇರಿ ನಗರ ಮಂಡಲ ಅಧ್ಯಕ್ಷ ಉಮೇಶ್ ಸುಬ್ರಮಣಿ, ಮಡಿಕೇರಿ ಗ್ರಾಮಾಂತರ ಮಂಡಲ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಸೇರಿದಂತೆ ಇನ್ನಿತರರು ಹಾಜರಿದ್ದರು.