ಮಡಿಕೇರಿ, ಏ. ೧೩: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಕಾರು ಸಂಪೂರ್ಣ ಅಗ್ನಿಗಾಹುತಿ ಯಾಗಿ ಕಾರಿನಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.
ಪುತ್ತೂರಿನಿಂದ ಬೆಂಗಳೂರು ಏರ್‌ಪೋರ್ಟ್ಗೆ ಸಪೀಖ್ ಅಹ್ಮದ್ ಅವರ ತಮ್ಮ ಸಮ್ಮಾಸ್ ಇಬ್ರಾಹಿಂ ಹಾಗೂ ತೌಸಿಫ್ ಅಬ್ಬಾಸ್, ಶೇಕ್ ಅಲ್ತಾಫ್ ಎಂಬವರುಗಳು ರೆನಾಲ್ಟ್ ಡಸ್ಟರ್ (ಕೆ.ಎ. ೨೧. ೬೫೧೫) ಕಾರಿನಲ್ಲಿ ತೆರಳುತ್ತಿದ್ದರು. ಸಫೀಕ್ ಅಹ್ಮದ್ ಕಾರು ಚಾಲನೆ ಮಾಡುತ್ತಿದ್ದರು. ಮಧ್ಯಾಹ್ನ ೨ ಗಂಟೆ ವೇಳೆಗೆ ಮಡಿಕೇರಿ- ಕುಶಾಲನಗರ ಹೆದ್ದಾರಿಯ ಸ್ಯಾಂಡುಲ್‌ಕಾಡ್ ಬಳಿ ತಲುಪುತ್ತಿ ದ್ದಂತೆ ಕಾರಿನ ಮುಂಬದಿಯ ಬಲಭಾಗದ ಟಯರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಇದನ್ನು ಕಂಡ ಕಾರಿನ ಹಿಂಬದಿ ವಾಹನ ಸವಾರರು ಡಸ್ಟರ್ ಕಾರಿನವರ ಗಮನಕ್ಕೆ ತಂದಿದ್ದಾರೆ. ಕೂಡಲೇ ಸಫೀಕ್ ಅಹ್ಮದ್ ಬ್ರೇಕ್ ಹಾಕಿ ಕಾರನ್ನು ನಿಲ್ಲಿಸಲು ಮುಂದಾದಾಗ ಬ್ರೇಕ್ ಸಿಗಲಿಲ್ಲ ಎನ್ನಲಾಗಿದೆ. ಬಳಿಕ ಹ್ಯಾಂಡ್ ಬ್ರೇಕ್ ಮೂಲಕ ಕಾರನ್ನು ನಿಲ್ಲಿಸಿ ನಾಲ್ವರೂ ಕಾರಿನಿಂದ ಕೆಳಗಿಳಿದು ಕಾರಿನಲ್ಲಿದ್ದ ಬೆಂಕಿ ನಂದಿಸುವ ಪರಿಕರದ ಮೂಲಕ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಪ್ರಯೋಜನವಾಗದೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈ ಅವಘಡ ಸಂಭವಿಸಿದ ಸಂದರ್ಭ ಕೆಲಕಾಲ ಈ ಮಾರ್ಗದಲ್ಲಿ ಟ್ರಾಫಿಕ್ ಜಾಂ ಉಂಟಾಗಿತ್ತು. ಬೆಂಕಿ ನಂದಿಸಿದ ಬಳಿಕ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲಾಯಿತು.