ಸೋಮವಾರಪೇಟೆ, ಏ.೧೩: ತಾಲೂಕು ವ್ಯಾಪ್ತಿಯಲ್ಲಿ ಈ ಹಿಂದಿನಿAದಲೂ ದಲಿತಪರ ಹೋರಾಟಗಳನ್ನು ರೂಪಿಸುತ್ತಾ ನಿಷ್ಠೆಯಿಂದ ಕೆಲಸ ಮಾಡಿದ ಹೋರಾಟಗಾರರು, ಮುಖಂಡರು, ಕಾರ್ಯಕರ್ತರನ್ನು ಕಡೆಗಣಿಸಿ, ಬೆರಳೆಣಿಕೆಯ ಮಂದಿ ಸೇರಿಕೊಂಡು ಅಂಬೇಡ್ಕರ್ ಜಯಂತಿ ಆಚರಣೆಗೆ ಮುಂದಾಗಿದ್ದಾರೆ ಎಂದು ದಲಿತಪರ ಸಂಘಟನೆಗಳ ಪ್ರಮುಖರು ಆಕ್ಷೇಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಡಾ. ಬಿ.ಆರ್. ಅಂಬೇಡ್ಕರ್ ಹೋರಾಟ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎ. ಪ್ರತಾಪ್ ಅವರು, ದಲಿತಪರ ಹೋರಾಟಗಾರರೆಂದು ಹೇಳಿಕೊಳ್ಳುವ ಬೆರಳೆಣಿಕೆಯ ಮಂದಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಹೈಜಾಕ್ ಮಾಡಿದ್ದಾರೆ. ಇದು ಖಂಡನೀಯ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಬಾಬು ಜಗಜೀವನ್‌ರಾಂ ಹಾಗೂ ಅಂಬೇಡ್ಕರ್ ಜಯಂತಿಯನ್ನು ಅದ್ದೂರಿಯಾಗಿ ನಡೆಸುವ ಉದ್ದೇಶದಿಂದ ಅಂಬೇಡ್ಕರ್ ಭವನದಲ್ಲಿ ತಹಶೀಲ್ದಾರ್ ಸೇರಿದಂತೆ ಇತರ ಇಲಾಖೆಗಳ ಅಧಿಕಾರಿಗಳು, ದಲಿತ ಪರ ಸಂಘಟನೆಗಳ ಮುಖಂಡರನ್ನು ಒಳಗೊಂಡAತೆ ಪೂರ್ವಭಾವಿ ಸಭೆ ನಡೆಸಲಾಗಿತ್ತು. ಅದರಂತೆ ಬಾಬು ಜಗಜೀವನ್‌ರಾಂ ಅವರ ಜಯಂತಿಯನ್ನು ನಡೆಸಿದ್ದು, ಅಂಬೇಡ್ಕರ್ ಜಯಂತಿಯನ್ನು ನಡೆಸುವ ಸಂಬAಧ ಸಮಿತಿ ರಚನೆ ಮಾಡಿ ಅದ್ದೂರಿ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿತ್ತು ಎಂದರು.
ಆದರೆ ಕೆಲ ಬೆರಳೆಣಿಕೆಯ ಮಂದಿ ತಾಲೂಕು ತಹಶೀಲ್ದಾರನ್ನು ಭೇಟಿ ಮಾಡಿ, ಅವರನ್ನೂ ಶಾಮೀಲಾಗಿಸಿಕೊಂಡು ಇಡೀ ಕಾರ್ಯಕ್ರಮವನ್ನು ಹೈಜಾಕ್ ಮಾಡಿದ್ದಾರೆ. ನಿಷ್ಠಾವಂತ ದಲಿತಪರ ಹೋರಾಟಗಾರರನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು.
ಸರ್ಕಾರಿ ಕಾರ್ಯಕ್ರಮಕ್ಕೆ ಸಾರ್ವಜನಿಕ ದಾನಿಗಳಿಂದ ದೇಣಿಗೆ ಸಂಗ್ರಹಿಸುವುದು ಎಷ್ಟು ಸರಿ? ಇದು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಮಾಡಿದ ಅಗೌರವ ಎಂದು ಅಸಮಾಧಾನ ವ್ಯಕ್ತಪಡಿಸಿದ ಪ್ರತಾಪ್ ಅವರು, ಸಂವಿಧಾನ ಶಿಲ್ಪಿಯ ಜಯಂತಿಗೆ ಯಾವುದೇ ಆಕ್ಷೇಪವಿಲ್ಲ. ನಾವುಗಳೂ ಭಾಗಿಯಾಗುತ್ತೇವೆ. ಆದರೆ ಸಮಿತಿಯಲ್ಲಿರುವ ಕೆಲವರು ಅಂಬೇಡ್ಕರ್ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಿಷ್ಠಾವಂತರನ್ನು ಕಡೆಗಣಿಸುತ್ತಿರುವುದಕ್ಕೆ ಆಕ್ಷೇಪವಿದೆ ಎಂದರು.
ಗೋಷ್ಠಿಯಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಎಸ್.ಹೆಚ್. ಗಿರೀಶ್, ಕೆ.ಎನ್. ಹೂವಯ್ಯ, ದಸಂಸ ನಾಗವಾರ ಬಣದ ಜಿಲ್ಲಾ ಕಾರ್ಯದರ್ಶಿ ಬಿ.ಕೆ. ಯತೀಶ್, ದಲಿತ ಯುವ ವೇದಿಕೆ ಜಿಲ್ಲಾಧ್ಯಕ್ಷ ಹೆಚ್.ಜಿ. ಯೋಗೇಶ್ ಅವರುಗಳು ಉಪಸ್ಥಿತರಿದ್ದರು.