ಅನಿಲ್ ಹೆಚ್.ಟಿ.

ಮಡಿಕೇರಿ, ಏ. ೧೩: ರಾಜಾಸೀಟ್ ನಿಂದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿಗೆ ತೆರಳುವ ರಸ್ತೆಯಲ್ಲಿ ಎಸ್‌ಪಿ ಬಂಗಲೆ ಬಳಿಯಲ್ಲಿರುವ ಬೃಹತ್ ತಡೆಗೋಡೆ ಈಗ ಕೇವಲ ಗೋಡೆಯಾಗಿ ಮಾತ್ರ ಉಳಿದಿಲ್ಲ. ಅದೀಗ ವೈವಿಧ್ಯಮಯ ಕಲೆಗಳ ಆಕರ್ಷಣೆಯ ತಾಣವಾಗಿಯೂ ಕಂಗೊಳಿಸುತ್ತಿದೆ.

ಮಡಿಕೇರಿ ಮೂಲದ ಮಚ್ಚಾರಂಡ ದೀಪಿಕಾ ಅಪ್ಪಯ್ಯ ಅವರ ಮೈಂಡ್ ಆ್ಯಂಡ್ ಮ್ಯಾಟರ್ ಸಂಸ್ಥೆಯು ಇದೀಗ ಈ ತಡೆಗೋಡೆಯಲ್ಲಿ ಕೊಡಗಿನ ನಿಸರ್ಗ, ಕ್ರೀಡೆಯ ಮಹತ್ವ ಸಾರುವ ಚಿತ್ರಕಲೆಯನ್ನು ಸುಂದರವಾಗಿ ಚಿತ್ರಿಸಿದ್ದು, ಇದರ ಜತೆಗೇ ಆರೋಗ್ಯ, ಸಂಚಾರದ ಮಹತ್ವ ಸಾರುವ ಸಂದೇಶದ ಕಲಾಚಿತ್ರಗಳು ಇಲ್ಲೀಗ ಜನಮನ ಸೆಳೆಯುತ್ತಿದೆ.

ಕಳೆದ ವರ್ಷ ಇದೇ ತಡೆಗೋಡೆಯಲ್ಲಿ ದೀಪಿಕಾ ಪ್ರಯತ್ನದಿಂದಾಗಿ ಕೊಡಗಿನ ಕಾಫಿ ಕುಯ್ಲಿನ ಬಗ್ಗೆ ಆಕರ್ಷಕ ಚಿತ್ರಕಲೆ ರೂಪುಗೊಂಡಿತ್ತು. ಈ ವರ್ಷ ಒಟ್ಟು ೫ ಚಿತ್ರಗಳನ್ನು ಇಲ್ಲಿ ಮೈಂಡ್ ಅಂಡ್ ಮ್ಯಾಟರ್ ಸಂಸ್ಥೆಯು ಬೆಂಗಳೂರು ಮತ್ತು ಕೊಡಗಿನ ಕಲಾವಿದರಿಂದ ರೂಪಿಸಿಸಲಾಗಿದೆ.

ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಮುದ್ದಂಡ ಕಪ್ ಮೂಲಕ ೨೫ ನೇ ವರ್ಷಕ್ಕೆ ಕಾಲಿಟ್ಟ ಈ ಸಂದರ್ಭ ಕೊಡವ ಹಾಕಿಯ ಮಹತ್ವ ಸಾರುವ ಚಿತ್ರಕಲೆ ಈಗ ತಡೆಗೋಡೆಯಲ್ಲಿ ಕಲಾ ಚಿತ್ರವಾಗಿ ರೂಪುಗೊಂಡಿದೆ.ರಸ್ತೆ ಅಪಘಾತಗಳನ್ನು ನಿಯಂತ್ರಿಸುವ ಉದ್ದೇಶದಿಂದ ರಸ್ತೆ ಸುರಕ್ಷತೆ ಬಗೆಗೆ ತಿಳಿಹೇಳುವ ಪ್ರಯತ್ನವಾಗಿ ರಸ್ತೆ ಸುರಕ್ಷತಾ ಸಂದೇಶದ ಕಲಾಚಿತ್ರ ಕೂಡ ಇಲ್ಲಿ ರೂಪುಗೊಂಡಿದೆ.

ಮಾನಸಿಕ ಸಮಸ್ಯೆಗಳಿಂದ ಅನೇಕ ಜನ ಬಳಲುತ್ತಿರುವುದನ್ನು ಮನಗಂಡು ಈ ಬಗ್ಗೆ ಜಾಗೃತಿ ಮೂಡಿಸಲು ಮಾನಸಿಕ ಆರೋಗ್ಯದ ಪ್ರಾಮುಖ್ಯತೆ ಬಗ್ಗೆಗೂ ಕಲೆಯಲ್ಲಿ ಗಮನ ಸೆಳೆಯಲಾಗಿದೆ. ಜೀವವೈವಿಧ್ಯತೆಗಳ ಬೀಡಾಗಿರುವ ಕೊಡಗಿನಲ್ಲಿ ಕಾಡು, ವನ್ಯಜೀವಿಗಳ ಮಹತ್ವ ಸಾರುವಂಥ ಚಿತ್ರಕೂಡ ಇಲ್ಲಿದೆ.

ಪೂಜಾ ಆಚಾರ್ಯ, ಚೇತನ್ ಎಸ್ ಮೂರ್ತಿ, ದಿಯಾ ಹನೀಸ, ರೂಪಶ್ರೀ ವಿಪಿನ್ ಈ ಸುಂದರ ಚಿತ್ರಗಳನ್ನು ಬಿಡಿಸಿದ್ದಾರೆ.

ಮಚ್ಚಾರಂಡ ದೀಪಿಕಾ ೫ ವರ್ಷಗಳ ಹಿಂದೆ ಮಾನಸಿಕ ಆರೋಗ್ಯ ಸಂರಕ್ಷಣೆ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸಲು ಸ್ಥಾಪಿಸಿದ ಸರ್ಕಾರೇತರ ಸಂಸ್ಥೆಯಾದ ಮೈಂಡ್ ಆ್ಯಂಡ್ ಮ್ಯಾಟರ್ ಈಗಾಗಲೇ ಅನೇಕ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದಿದೆ. ಮುದ್ದಂಡ ಹಾಕಿ ಪಂದ್ಯಾವಳಿ ಆಯೋಜಕರೊಂದಿಗೆ ಇದೇ ತಿಂಗಳ ೨೪ ರಂದು ಮಡಿಕೇರಿಯಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಮ್ಯಾರಥಾನ್‌ನನ್ನು ಜಿಲ್ಲಾಡಳಿತ, ಪೊಲೀಸ್ ಇಲಾಖೆ, ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದ ಸಹಯೋಗದಲ್ಲಿ ಆಯೋಜಿಸಲು ದೀಪಿಕಾ ಮುಂದಾಗಿದ್ದಾರೆ.

ಮಡಿಕೇರಿಯ ಈ ಮುಖ್ಯ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ಜನ ಸಂಚರಿಸುತ್ತಾರೆ. ಈ ರಸ್ತೆ ಬದಿಯಲ್ಲಿ ತಡೆಗೋಡೆ ಬಿಕೋ ಎನ್ನುತ್ತಾ ಬೇಸರ ತರಿಸುವಂತಿತ್ತು. ಈ ಗೋಡೆ ಮೇಲೆ ಮಹತ್ವದ ಸಂದೇಶವಿರುವ ಕಲಾ ಚಿತ್ರ ರೂಪಿಸಿ ಜನರ ಗಮನ ಸೆಳೆದು ಅವರಲ್ಲಿ ಯಾಕೆ ಆರೋಗ್ಯ, ಶಿಕ್ಷಣ, ಪ್ರಕೃತಿ, ರಸ್ತೆ ಸುರಕ್ಷತೆ, ಕ್ರೀಡೆಯ ಬಗ್ಗೆ ಜಾಗೃತಿ ಮೂಡಿಸಬಾರದು ಎಂದೆನಿಸಿತ್ತು. ಹೀಗಾಗಿಯೇ ಈ ಕಲಾಚಿತ್ರ ರೂಪಿಸಲು ಮುಂದಾಗಿದ್ದೇನೆ ಎಂದು ದೀಪಿಕಾ ತಿಳಿಸಿದರು. ಇಂಥ ಚಿತ್ರದ ಮೂಲಕ ಜನರ ಗಮನ ಸೆಳೆದು ಅವರ ಮನಸ್ಸಿನಲ್ಲಿಯೂ ಆಯಾ ವಿಚಾರದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ನನ್ನದು ಎಂದು ದೀಪಿಕಾ ಹೇಳಿದರು.

ಮಡಿಕೇರಿಯ ತಡೆಗೋಡೆಯೊಂದು ಈಗ ಕೇವಲ ಕಾಂಕ್ರೀಟ್ ಗೋಡೆಯಾಗಿ ಮಾತ್ರ ಉಳಿದಿಲ್ಲ. ಈ ತಡೆಗೋಡೆಯೇ ಈಗ ಹಲವಾರು ಸಂದೇಶದ ಮೂಲಕ ಚಿತ್ರಕಥೆ ಹೇಳುವಂತಿದೆ. ಈ ಮೂಲಕ ಸಂದರ್ಶಕರಿಗೆ ಸೂಕ್ತ ಫೋಟೋ ಪಾಯಿಂಟ್ ಕೂಡ ಈ ತಡೆಗೋಡೆ ಪರಿವರ್ತಿತವಾಗಿದೆ.