ಕುಶಾಲನಗರ, ಏ. ೧೩: ಭಾರತ್ ಸ್ಕೌಟ್ಸ್, ಗೈಡ್ಸ್ನ ಕೊಡಗು ಜಿಲ್ಲಾ ಸಂಸ್ಥೆ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಸ್ಕೌಟ್ಸ್, ಗೈಡ್ಸ್ ನ ಕುಶಾಲನಗರ ಸ್ಥಳೀಯ ಸಂಸ್ಥೆಯ ವತಿಯಿಂದ ಕುಶಾಲನಗರ ತಾಲ್ಲೂಕಿನ ಮುಳ್ಳುಸೋಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಲ್ ಬುಲ್, ಸ್ಕೌಟ್ಸ್, ಗೈಡ್ಸ್ ಹಾಗೂ ರೇಂಜರ್ಸ್ ಮತ್ತು ರೋವರ್ಸ್ ವಿದ್ಯಾರ್ಥಿಗಳಿಗೆ ಎರಡು ದಿನಗಳ ಕಾಲ ಏರ್ಪಡಿಸಿದ್ದ ತಾಲ್ಲೂಕುಮಟ್ಟದ ಶಾಲಾ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.

ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಜಿಲ್ಲಾ ಗೈಡ್ಸ್ ಸಂಸ್ಥೆಯ ಸಹಾಯಕ ಆಯುಕ್ತರೂ ಆದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಐಮುಡಿಯಂಡ ರಾಣಿ ಮಾಚಯ್ಯ, ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು- ಸಂಯಮ ಬೆಳೆಸಿಕೊಂಡು ರಾಷ್ಟಾçಭಿಮಾನ ಬೆಳೆಸಿಕೊಂಡು ದೇಶದ ಸಮಗ್ರತೆ ಮತ್ತು ಭಾವೈಕ್ಯತೆಗೆ ಪಣ ತೊಡಬೇಕು ಎಂದರು.

ಈ ದಿಸೆಯಲ್ಲಿ ಇಂತಹ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಉತ್ತಮ ನಾಯಕತ್ವ, ವ್ಯಕ್ತಿತ್ವ ಬೆಳವಣಿಗೆ ಹಾಗೂ ತಮ್ಮನ್ನು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಿವೆ ಎಂದರು.

ಬೇಸಿಗೆ ಶಿಬಿರದ ಮಹತ್ವ ತಿಳಿಸಿ ಮಾತನಾಡಿದ ಜಿಲ್ಲಾ ಸ್ಕೌಟ್ಸ್ ಸಂಸ್ಥೆಯ ತರಬೇತಿ ಆಯುಕ್ತ ಕೆ.ಯು. ರಂಜಿತ್, ನಾಲ್ಕು ಗೋಡೆಗಳ ನಡುವೆ ಓದು, ಬರಹ ಕಲಿಯುವ ಜತೆಗೆ ನಿಸರ್ಗದ ಮಡಿಲಲ್ಲಿ ಒಂದಾಗಿ ಬೆರೆತು, ಸಮನ್ವಯದಿಂದ ಬಾಳಲು ಕಲಿಯುವಂತೆ ಇಂತಹ ಶಿಬಿರ ಪ್ರೇರೇಪಿಸುತ್ತವೆ ಎಂದರು.

ಜಿಲ್ಲಾ ಗೈಡ್ಸ್ ಸಂಸ್ಥೆಯ ಸಹಾಯಕ ಆಯುಕ್ತರೂ ಆದ ಶಿಬಿರದ ಸಂಯೋಜಕಿ ಸಿ.ಎಂ. ಸುಲೋಚನ ಮಾತನಾಡಿ, ವಿದ್ಯಾರ್ಥಿಗಳು ತರಬೇತಿಯ ಅವಧಿಯಲ್ಲಿ ಕಲಿತ ಉತ್ತಮ ಕಲಿಕಾಭ್ಯಾಸ ಹಾಗೂ ಹವ್ಯಾಸಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು. ಸ್ಕೌಟ್ಸ್ ಮತ್ತು ಗೈಡ್ಸ್ ನ ಕುಶಾಲನಗರ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷ ಕೆ.ವಿ. ಅರುಣ್, ಕಾರ್ಯದರ್ಶಿ ಎಂ.ಎಸ್. ಗಣೇಶ್, ಸಹ ಕಾರ್ಯದರ್ಶಿ ಎಸ್.ಆರ್. ಶಿವಲಿಂಗ, ಸ್ವಯಂಸೇವಕ ಜಯರಾಜ್, ಶಾಲಾ ಮುಖ್ಯ ಶಿಕ್ಷಕಿ ವಿಜಯ, ಗೈಡ್ಸ್ನ ಶಿಕ್ಷಕಿಯರಾದ ಕೆ.ಟಿ. ಸೌಮ್ಯ, ಶಿಫಾನತ್, ಸ್ಕೌಟ್ಸ್ ಮಾಸ್ಟರ್ ಗಳಾದ ಜಾನ್‌ಸನ್, ಡಿ.ವಿ. ಗಣೇಶ್, ಕೆ.ಬಿ. ಗಣೇಶ್ ಹಾಗೂ ಇತರರು ಇದ್ದರು.