ಸಿದ್ದಾಪುರ, ಏ. ೧೪: ಸಿದ್ದಾಪುರ ಗ್ರಾಮ ಪಂಚಾಯಿತಿಯಲ್ಲಿ ಕಸ ತ್ಯಾಜ್ಯಗಳನ್ನು ವಿಲೇವಾರಿ ಮಾಡದೆ ಗ್ರಾಮ ಪಂಚಾಯಿತಿಯು ನಿರ್ಲಕ್ಷö್ಯ ವಹಿಸುತ್ತಿದೆ. ಇದರ ವಿರುದ್ಧ ಸಿದ್ದಾಪುರ ಬಿಜೆಪಿ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಗುವುದೆಂದು ಸಿದ್ದಾಪುರ ಬಿಜೆಪಿ ಶಕ್ತಿ ಕೇಂದ್ರದ ಉಪಾಧ್ಯಕ್ಷ ಡಿಜಿತ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಟ್ಟಣ ಹಾಗೂ ಮುಖ್ಯ ರಸ್ತೆಗಳಲ್ಲಿ ಶಾಲೆಗಳ ಸಮೀಪ ಕಸ ತ್ಯಾಜ್ಯಗಳು ತುಂಬಿ ತುಳುಕುತ್ತಿದೆ. ಇದರಿಂದಾಗಿ ದುರ್ನಾತ ಬೀರುತ್ತಿದ್ದು ಮೂಗು ಮುಚ್ಚಿಕೊಂಡೆ ಓಡಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ತಿಳಿಸಿದರು. ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯು ಕಸವಿಲೇವಾರಿ ಮಾಡುವುದನ್ನು ಬಿಟ್ಟು ರಾಜಕೀಯದಲ್ಲಿ ಕಾಲಹತಣ ಮಾಡುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಕೂಡಲೇ ಪಟ್ಟಣ ವ್ಯಾಪ್ತಿಯಲ್ಲಿ ಇರುವ ಕಸ ತ್ಯಾಜ್ಯಗಳನ್ನು ವಿಲೇವಾರಿ ಮಾಡದಿದ್ದಲ್ಲಿ ಗ್ರಾಮ ಪಂಚಾಯಿತಿಯ ಕಚೇರಿ ಎದುರು ಬಿಜೆಪಿ ಪಕ್ಷದಿಂದ ಪ್ರತಿಭಟನೆ ನಡೆಸಲಾಗುವುದೆಂದು ಡಿಜಿತ್ ಹೇಳಿದರು. ಪಟ್ಟಣ ವ್ಯಾಪ್ತಿಯಲ್ಲಿ ಲೋಡ್ ಗಟ್ಟಲೆ ಕಸಗಳಿದ್ದರೂ ಕೂಡ ಗ್ರಾಮ ಪಂಚಾಯಿತಿ ನಿರ್ಲಕ್ಷö್ಯ ವಹಿಸುತ್ತಿದ್ದು ರೋಗ ರುಜಿನಗಳು ಹರಡುವ ಭೀತಿ ಎದುರಾಗಿದೆ ಎಂದು ಆರೋಪಿಸಿದರು.

ಸಿದ್ದಾಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ರೀನಾ ತುಳಸಿ ಮಾತನಾಡಿ, ಮಾಜಿ ಶಾಸಕ ಕೆ.ಜಿ. ಬೋಪಯ್ಯ ಅವರು ಸಿದ್ದಾಪುರ ಹಾಗೂ ಮಾಲ್ದಾರೆ ಗ್ರಾಮ ಪಂಚಾಯಿತಿಗಳಿಗೆ ಕಸವಿಲೇವಾರಿ ಘಟಕ ಪ್ರಾರಂಭಿಸಲು ಈ ಹಿಂದೆ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಗವೊಂದನ್ನು ಗುರುತಿಸಿದ್ದರು ಹಾಗೂ ಆ ಜಾಗದಲ್ಲಿ ಕಸವಿಲೇವಾರಿ ಘಟಕ ಪ್ರಾರಂಭಿಸಲು ಕಾಮಗಾರಿಗಳನ್ನು ಕೂಡ ಮಾಡಲಾಗಿತ್ತು. ಆದರೆ ಇತ್ತೀಚೆಗೆ ಮಾಲ್ದಾರೆ ಗ್ರಾಮ ಪಂಚಾಯಿತಿ ಕಚೇರಿಯ ಸಮೀಪ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ಸಿದ್ದಾಪುರದ ವಲಯ ಕಾಂಗ್ರೆಸ್ ಅಧ್ಯಕ್ಷ ಶಾಸಕ ಕೆ.ಜಿ. ಬೋಪಯ್ಯ ಅವರು ಕಸವಿಲೇವಾರಿ ಮಾಡಲು ೨೦ ವರ್ಷಗಳಿಂದ ಪ್ರಯತ್ನಪಟ್ಟಿರುವುದಿಲ್ಲ ಎಂದು ಆರೋಪಿಸಿರುವುದು ಖಂಡನೀಯ ಎಂದರು. ರಾಜಕೀಯ ದುರುದ್ದೇಶದಿಂದ ಮಾಜಿ ಶಾಸಕರ ವಿರುದ್ಧ ಆರೋಪ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಎಂ.ಎ. ಆನಂದ, ಬಿಜೆಪಿ ಶಕ್ತಿ ಕೇಂದ್ರದ ಸಿದ್ದಾಪುರ ಘಟಕದ ಅಧ್ಯಕ್ಷ ರೂಪೇಶ್, ಕೃಷಿ ಮೋರ್ಚಾದ ಅಧ್ಯಕ್ಷ ಚಿಮ್ಮಿ ಪೂವಯ್ಯ ಹಾಜರಿದ್ದರು.