ವೀರಾಜಪೇಟೆ, ಏ. ೧೪: ಕೆಲವು ದಿನಗಳಿಂದ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡು ಕಾಫಿ ತೋಟದಲ್ಲಿರುವ ಕಾಫಿ ಗಿಡಗಳು, ತೆಂಗು, ಅಡಿಕೆ, ಬಾಳೆ ಗಿಡಗಳನ್ನು ಹಾನಿ ಮಾಡಿದ್ದು ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿರುವ ಘಟನೆ ಬಿಟ್ಟಂಗಾಲ ಸಮೀಪದ ಕಂಡAಗಾಲ ಗ್ರಾಮದಲ್ಲಿ ನಡೆದಿದೆ. ಕಂಡAಗಾಲ ೧ನೇ ರುದ್ರಗುಪ್ಪೆ ಗ್ರಾಮದ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ದಾಳಿಯಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಹಲವು ದಿನಗಳಿಂದ ಕಾಡಾನೆಗಳ ಹಾವಳಿ ಮಿತಿಮೀರಿದ್ದು. ಕಾಫಿ ತೋಟದಲ್ಲಿರುವ ಫಸಲು ನೀಡಲು ಸಿದ್ಧವಾಗಿದ್ದ ಬಾಳೆ ಗಿಡಗಳು, ತೆಂಗು, ಅಡಿಕೆ ಗಿಡಗಳು ನೆಲಕಚ್ಚಿವೆ. ಗ್ರಾಮದ ಹೆಚ್.ಎ. ಸರಸ್ವತಿ, ಬಲ್ಲಡಿಚಂಡ ರವಿ ಸೋಮಯ್ಯ, ಬಲ್ಲಡಿಚಂಡ ಲೋಕಾನಾಥ್ ಟೋಮಿ ರೋಜಾರಿಯೋ, ಮಂದಮಾಡ ಹಸನ್ ಮತ್ತು ಮಂದಮಾಡ ಮೊಹಮ್ಮದ್ ಅವರುಗಳ ಕಾಫಿ ತೋಟಗಳು ಕಾಡಾನೆಗಳ ದಾಳಿಗೆ ಸಿಲುಕಿ ಹಾನಿಗೆ ಒಳಗಾಗಿವೆ.

ಕಾಫಿ ತೋಟಗಳು ಇದೀಗ ಕಾಡಾನೆಗಳ ಆವಾಸಸ್ಥಾನವಾಗಿ ಪರಿವರ್ತನೆಗೊಂಡಿದೆ. ಆಹಾರ ಅರಸಿ ನಾಡಿಗೆ ಲಗ್ಗೆಯಿಡುತ್ತಿರುವ ಕಾಡಾನೆಗಳು ತೋಟಗಳನ್ನು ಧ್ವಂಸ ಮಾಡುತ್ತಿವೆ. ತೋಟದ ಕಾರ್ಮಿಕರು, ಮಾಲೀಕರು ತೋಟಕ್ಕೆ ತೆರಳಲು ಹಿಂದೇಟು ಹಾಕುತಿದ್ದಾರೆ.

ಕಾರ್ಯಾಚರಣೆಯ ಮೂಲಕ ಕಾಡಾನೆಗಳನ್ನು ಕಾಡಿಗೆ ಅಟ್ಟಿದರು. ಕಾಡಾನೆಗಳು ಹಿಂದಿರುಗಿ ಬರುತ್ತಿವೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.