ಕೊಡ್ಲಿಪೇಟೆ, ಏ. ೧೪: ಸಮೀಪದ ಶ್ರೀ ಬಂಡೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿ ಅಂಗವಾಗಿ ವಿವಿಧ ಪೂಜಾ ಕೈಂಕರ್ಯಗಳು ನಡೆಯಿತು. ದೇವಾಲಯದಲ್ಲಿ ವಿಶೇಷ ಪೂಜೆ, ಶನಿಶಾಂತಿ ಹೋಮ, ಪೂರ್ಣಾಹುತಿ ನಂತರ ಮಹಾಮಂಗಳಾರತಿ ನೆರವೇರಿತು.
ದೇವಾಲಯ ಆವರಣದಲ್ಲಿ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನೆರವೇರಿತು. ಅರ್ಚಕ ಮೃತ್ಯುಂಜಯ ಶಾಸ್ತಿçಗಳು ಪೂಜಾ ವಿಧಿವಿಧಾನಗಳ ನೇತೃತ್ವ ವಹಿಸಿದ್ದರು. ಶ್ರೀ ವೀರಾಂಜನೇಯ ಉತ್ಸವ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿರಿಸಿ ನಾಸಿಕ್ ವಾದ್ಯಗೋಷ್ಠಿ ಹಾಗೂ ಹನುಮ ವೇಷಧಾರಿಗಳೊಂದಿಗೆ ದೇವಸ್ಥಾನದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.
ಮಳೆಯನ್ನೂ ಲೆಕ್ಕಿಸದೇ ಮಕ್ಕಳು, ಮಹಿಳೆಯರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಶ್ರೀ ಬಂಡೆ ಆಂಜನೇಯ ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್.ಎಸ್. ವರಪ್ರಸಾದ್, ಪದಾಧಿಕಾರಿಗಳಾದ ಹೆಚ್.ಎನ್. ಪಾಲಾಕ್ಷ, ರವೀಂದ್ರ, ವನರಾಜ್, ನಟರಾಜ್, ಸಂಜು, ಯು.ಪಿ. ನಾಗೇಶ್, ಚಂದ್ರಣ್ಣ, ವೀರಶೈವ ಸಮಿತಿ ಅಧ್ಯಕ್ಷ ಸಿದ್ದೇಶ್, ಪ್ರಮುಖರಾದ ಬಿ.ಕೆ. ಯತೀಶ್, ಪ್ರವೀಣ್, ಗಿರೀಶ್ ಶುಂಠಿ ಸೇರಿದಂತೆ ಇತರರು ಇದ್ದರು. ಶನಿವಾರಸಂತೆ ಉಪ ಠಾಣೆಯ ಆರಕ್ಷಕ ನಿರೀಕ್ಷಕ ಚಂದ್ರು ಅವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.