ಕೂಡಿಗೆ, ಏ. ೧೪ : ದೇಸಿ ಹಾಗೂ ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಆಟಕ್ಕೆ ಹೆಚ್ಚಿನ ಪ್ರೋತ್ಸಾಹ ಅಗತ್ಯ ಎಂದು ಶಾಸಕ ಡಾ ಮಂತರ್ ಗೌಡ ಹೇಳಿದರು. ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದ ಶ್ರೀ ಬಸವೇಶ್ವರ ಯುವಕ ಸಂಘದ ವತಿಯಿಂದ ಕೂಡ್ಲೂರು ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಶನಿವಾರ ಸಂಜೆ ಆರಂಭಗೊAಡ ಮೂರನೇ ವರ್ಷದ ಹೊನಲು- ಬೆಳಕಿನ ಕಬಡ್ಡಿ ಟೂರ್ನಿಯನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಯುವಕ ಸಂಘಗಳು ಆಯೋಜಿಸುವ ಕ್ರೀಡಾಕೂಟಗಳು ಕ್ರೀಡಾ ಪ್ರತಿಭೆಗಳನ್ನು ಗುರುತಿಸುವುದಲ್ಲದೆ, ಗ್ರಾಮೀಣ ಜನರಿಗೆ ಉಲ್ಲಾಸದಾಯಕ ವಾತಾವರಣ ಕಲ್ಪಿಸಿಕೊಡುತ್ತವೆ ಎಂದರು.
ಮುಖ್ಯ ಅತಿಥಿಯಾಗಿದ್ದ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ ಗ್ರಾಮೀಣ ಕ್ರೀಡಾಕೂಟಗಳು ಅವಶ್ಯಕವಾಗಿದೆ. ಇದರಿಂದ ಗ್ರಾಮಗಳಲ್ಲಿ ಪರಸ್ಪರ ಪ್ರೀತಿ-ವಿಶ್ವಾಸ, ಒಗ್ಗಟ್ಟು, ಸೌಹಾರ್ದತೆ ಮೂಡುತ್ತದೆ. ಇಂತಹ ಕ್ರೀಡಾಕೂಟಗಳ ಮೂಲಕ ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬಹುದು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್, ಯುವಕರು ಗ್ರಾಮದಲ್ಲಿ ಕ್ರೀಡೆಯೊಂದಿಗೆ ಸಾಂಸ್ಕೃತಿಕ ಚಟುವಟಿಕೆಗಳಿಗೂ ಕೂಡ ಹೆಚ್ಚಿನ ಆದ್ಯತೆ ನೀಡುವ ಮೂಲಕ ಭಾವೈಕ್ಯತೆ ಬೆಳೆಸಲು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು. ಯುವಕ ಸಂಘದ ಅಧ್ಯಕ್ಷ ಕೆ.ವಿ.ನಿಶಾಂತ್ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ಕೆ.ಕೆ. ಚೇತನ್, ಯುವಕ ಸಂಘದ ಉಪಾಧ್ಯಕ್ಷ ಚರಣ್, ಕಾರ್ಯದರ್ಶಿ ಪ್ರಮೋದ್, ಪದಾಧಿಕಾರಿಗಳಾದ ಪುನೀತ್, ಸುಮಂತ್, ಗ್ರಾಮಸ್ಥರು ಇದ್ದರು.