ಇಂದಿನಿAದ ಅನಿರ್ದಿಷ್ಟಾವಧಿ ಲಾರಿ ಮುಷ್ಕರ

ಬೆಂಗಳೂರು, ಏ. ೧೪: ಡೀಸೆಲ್ ದರ ಏರಿಕೆ, ಟೋಲ್ ಶುಲ್ಕ ಹೆಚ್ಚಳ, ಆರ್‌ಟಿಒ ಅಧಿಕಾರಿಗಳಿಂದ ಕಿರುಕುಳ ಖಂಡಿಸಿ ಸೋಮವಾರ ಮಧ್ಯರಾತ್ರಿಯಿಂದಲೇ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ರಾಜ್ಯ ಲಾರಿ ಮಾಲೀಕರ ಸಂಘ ಕರೆ ಕೊಟ್ಟಿದೆ. ಡೀಸೆಲ್ ದರ ಇಳಿಕೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಕ್ಕೆ ಲಾರಿ ಮಾಲೀಕರು ತಾ. ೧೪ ರವರೆಗೆ ಗಡುವು ನೀಡಿದ್ದರು. ಆದರೆ, ಇದುವರೆಗೂ ರಾಜ್ಯ ಸರ್ಕಾರದಿಂದ ಯಾವುದೇ ಸ್ಪಂದನ ಸಿಗದ ಹಿನ್ನೆಲೆ ಇಂದು ಮಧ್ಯರಾತ್ರಿಯಿಂದಲೇ ಮುಷ್ಕರ ನಡೆಸುವುದಾಗಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್. ಷಣ್ಮುಖಪ್ಪ ತಿಳಿಸಿದ್ದಾರೆ. ಇಂದು ಮಧ್ಯ ರಾತ್ರಿಯಿಂದಲೇ ರಾಜ್ಯದಲ್ಲಿರುವ ಸುಮಾರು ೬ ಲಕ್ಷಕ್ಕೂ ಹೆಚ್ಚು ಲಾರಿಗಳು ಸೇವೆಯನ್ನು ಸ್ಥಗಿತಗೊಳಿಸಲಿದ್ದು, ಹಲವು ಸೇವೆಗಳಿಗೆ ಬಂದ್ ಬಿಸಿ ತಟ್ಟಲಿದೆ. ಪೆಟ್ರೋಲ್, ಡೀಸೆಲ್ ಹಾಗೂ ಟೋಲ್ ದರಗಳ ಪರಿಷ್ಕರಣೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರವನ್ನು ಕೈಗೊಳ್ಳಲಾಗಿದೆ. ರಾಜ್ಯ ಸೇರಿದಂತೆ ಹೊರ ರಾಜ್ಯಗಳ ಲಾರಿ ಮಾಲೀಕರು, ಪೆಟ್ರೋಲ್ ಬಂಕ್‌ಗಳ ಮಾಲೀಕರ ಸಂಘಟನೆಗಳಿAದ ಬೆಂಬಲ ವ್ಯಕ್ತವಾಗಿದೆ. ನಮ್ಮ ಬೇಡಿಕೆಗಳು ಈಡೇರುವವರೆಗೂ ಮುಷ್ಕರ ಹಿಂಪಡೆಯುವುದಿಲ್ಲ. ವಾಣಿಜ್ಯ ಸೇರಿದಂತೆ ಎಲ್ಲ ಸೇವೆಗಳು ಸ್ತಬ್ಧವಾಗಲಿವೆ ಎಂದು ಜಿ.ಆರ್.ಷಣ್ಮುಖಪ್ಪ ಅವರು ಹೇಳಿದ್ದಾರೆ. ನಮ್ಮ ಮುಷ್ಕರದಲ್ಲಿ ಯಾವುದೇ ಬದಲಾವಣೆ ಇಲ್ಲ. ಕರ್ನಾಟಕ ಸರ್ಕಾರ ಇನ್ನೂ ಯಾವುದೇ ಮಾತುಕತೆ ಅಥವಾ ಸಭೆಗೆ ನಮ್ಮನ್ನು ಆಹ್ವಾನಿಸಿಲ್ಲ. ಹೀಗಾಗಿ ನಾವು ನಮ್ಮ ಮುಷ್ಕರವನ್ನು ಮುಂದುವರಿಸುತ್ತೇವೆ ಎಂದು ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸೋಮಸುಂದರA ಬಾಲನ್ ಅವರು ತಿಳಿಸಿದ್ದಾರೆ. ಡೀಸೆಲ್ ಬೆಲೆ ಏರಿಕೆ ಮತ್ತು ಟೋಲ್ ಸಮಸ್ಯೆಗಳ ವಿರುದ್ಧ ನಮ್ಮ ಮುಷ್ಕರ ಎಂದು ಬಾಲನ್ ಹೇಳಿದ್ದಾರೆ.

ವಕ್ಫ್ ಕಾಯ್ದೆ ವಿರೋಧಿಸಿ ಪ್ರತಿಭಟನೆ-ಘರ್ಷಣೆ

ಕೊಲ್ಕತಾ, ಏ. ೧೪: ವಿವಾದಾತ್ಮಕ ವಕ್ಫ್ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಪಶ್ಚಿಮ ಬಂಗಾಳದ ದಕ್ಷಿಣ ೨೪ ಪರಗಣ ಜಿಲ್ಲೆಯ ಬಾಂಗೋರ್‌ನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇಳೆಯಲ್ಲಿ ಇಂಡಿಯನ್ ಸೆಕ್ಯೂಲರ್ ಫ್ರಾಂಟ್ ಬೆಂಬಲಿಗರು ಮತ್ತು ಪೊಲೀಸರೊಂದಿಗೆ ಸೋಮವಾರ ಘರ್ಷಣೆ ನಡೆದಿದೆ. ಪಕ್ಷದ ನಾಯಕ ಮತ್ತು ಭಂಗಾರ್ ಶಾಸಕ ನೌಶಾದ್ ಸಿದ್ದಿಕ್ ಮಾತನಾಡುತ್ತಿದ್ದ ಪ್ರತಿಭಟನಾ ರ‍್ಯಾಲಿಯಲ್ಲಿ ಭಾಗವಹಿಸಲು ಮಧ್ಯ ಕೋಲ್ಕತ್ತಾದ ರಾಮ್‌ಲೀಲಾ ಮೈದಾನಕ್ಕೆ ತೆರಳುತ್ತಿದ್ದ ಐಎಸ್‌ಎಫ್ ಬೆಂಬಲಿಗರನ್ನು ಪೊಲೀಸರು ತಡೆದಿದ್ದರಿಂದ ಘರ್ಷಣೆ ಭುಗಿಲೆದ್ದಿತು. ಬಸಂತಿ ಹೆದ್ದಾರಿಯ ಭೋಜೆರ್‌ಹತ್ ಬಳಿ ಪ್ರತಿಭಟನಾಕಾರರನ್ನು ತಡೆದು ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು. ಗುಂಪು ಪೊಲೀಸ್ ಬ್ಯಾರಿಕೇಡ್‌ಗಳನ್ನು ಭೇದಿಸಲು ಯತ್ನಿಸಿದಾಗ ಉದ್ವಿಗ್ನತೆ ಉಂಟಾಯಿತು, ಇದು ಎರಡು ಕಡೆಯ ನಡುವೆ ಘರ್ಷಣೆಗೆ ಕಾರಣವಾಗಿದೆ. ಪ್ರತಿಭಟನಾಕಾರರು ಕೆಲವು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಘಟನೆಯಲ್ಲಿ ಕೆಲವು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಾಮ್‌ಲೀಲಾ ಮೈದಾನದಲ್ಲಿ ನಡೆದ ಪ್ರತಿಭಟನಾ ರ‍್ಯಾಲಿಗೆ ಸರಿಯಾದ ಪೊಲೀಸ್ ಅನುಮತಿ ಇಲ್ಲದ ಕಾರಣ ಪೊಲೀಸರು ಲಾಠಿ ಚಾರ್ಜ್ ನಡೆಸಿ ಪ್ರತಿಭಟನಾಕಾರರನ್ನು ಚದುರಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದಂತೆಯೇ ಐಎಸ್‌ಎಫ್ ಕಾರ್ಯಕರ್ತರು ಹೆದ್ದಾರಿಯಲ್ಲಿ ಧರಣಿ ಕುಳಿತರಿಂದ ಸಂಚಾರ ದಟ್ಟಣೆಗೆ ಕಾರಣವಾಯಿತು. ಪರಿಸ್ಥಿತಿ ಹತೋಟಿಗೆ ತರಲು ಹಿರಿಯ ಅಧಿಕಾರಿಗಳು ಸೇರಿದಂತೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸಮೀಪದ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು. ಬಳಿಕ ಪ್ರತಿಭಟನಾಕಾರರನ್ನು ಚದುರಿಸಿದರು. ಕೋಲ್ಕತ್ತಾದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿದ್ದಿಕ್, ವಕ್ಫ್ (ತಿದ್ದುಪಡಿ) ಕಾಯ್ದೆಯನ್ನು ಟೀಕಿಸಿದರು ಮತ್ತು ಅದನ್ನು ಹಿಂಪಡೆಯಲು ಒತ್ತಾಯಿಸಿದರು. ಈ ಕಾನೂನು ಕೇವಲ ಮುಸ್ಲಿಮರ ಮೇಲಿನ ದಾಳಿಯಲ್ಲ, ಸಂವಿಧಾನದ ಮೇಲಿನ ದಾಳಿಯಾಗಿದೆ. ಈ ಕಾಯ್ದೆಯನ್ನು ನಾವು ಒಪ್ಪುವುದಿಲ್ಲ. ಇಂತಹ ಕಾನೂನುಗಳನ್ನು ಬೆಂಬಲಿಸುವ ಸರಕಾರ ತೊಲಗಬೇಕು ಎಂದರು. ಬಿಜೆಪಿಯು ಕೋಮು ಉದ್ವಿಗ್ನತೆಯನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದೆ. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪ್ರತಿಪಕ್ಷಗಳ ಪ್ರತಿಭಟನೆಯನ್ನು ಹತ್ತಿಕ್ಕುತ್ತಿದೆ ಎಂದು ಐಎಸ್‌ಎಫ್ ಆರೋಪಿಸಿದೆ.

ಅಂಬೇಡ್ಕರ್ ಹಿಂದೂಗಳನ್ನು ಒಗ್ಗೂಡಿಸಲು ತಮ್ಮ ಜೀವನ ಮುಡಿಪಾಗಿಟ್ಟರು

ಕಾನ್ಪುರ, ಏ. ೧೪: ಭಾರತದ ಸಂವಿಧಾನ ಶಿಲ್ಪಿ ಡಾ. ಭೀಮರಾವ್ ಅಂಬೇಡ್ಕರ್ ಅವರು ‘ಹಿಂದೂಗಳನ್ನು ಒಗ್ಗೂಡಿಸಲು ಅವರ ಜೀವನ ಮುಡಿಪಾಗಿಟ್ಟರು ಎಂದು ರಾಷ್ಟಿçÃಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಶ್ಲಾಘಿಸಿದ್ದಾರೆ. ಕಾನ್ಪುರದ ಕರವಾಲೋ ನಗರದಲ್ಲಿ ‘ಕೇಶವ ಭವನ' ಉದ್ಘಾಟಿಸಿ ಮಾತನಾಡಿದ ಭಾಗವತ್, "ಬಾಬಾಸಾಹೇಬ್ ಅವರು ತಮ್ಮ ಜೀವನದಲ್ಲಿ ತೀವ್ರ ಕಷ್ಟಗಳನ್ನು ಎದುರಿಸಿದ್ದಾರೆ. ಬಾಲ್ಯದಿಂದಲೂ ಅವರು ತಾರತಮ್ಯ ಮತ್ತು ಅಸಮಾನತೆಯ ವಿರುದ್ಧ ಹೋರಾಡಿದರು ಎಂದರು. "ಆದರೂ, ಅವರ ಜೀವನದುದ್ದಕ್ಕೂ, ಅವರು ಹಿಂದೂ ಸಮಾಜವನ್ನು ಒಟ್ಟುಗೂಡಿಸಲು ಪ್ರಯತ್ನಿಸಿದರು. ಬಾಲ್ಯದಿಂದಲೂ ಕಷ್ಟಗಳನ್ನು ಎದುರಿಸಿದ್ದರೂ ಅವರು ಸಾಮಾಜಿಕ ಸಾಮರಸ್ಯ ಮತ್ತು ರಾಷ್ಟಿçÃಯ ಅಭಿವೃದ್ಧಿಗೆ ಬದ್ಧರಾಗಿದ್ದರು ಎಂದು ಹೇಳಿದರು. ಸಾಮಾಜಿಕ ಏಕತೆ ಮತ್ತು ಪ್ರಗತಿಗೆ ಅವರ ಬದ್ಧತೆ ಎಲ್ಲರಿಗೂ ಸ್ಫೂರ್ತಿಯಾಗಿದೆ. ಆರ್‌ಎಸ್‌ಎಸ್ ಸಂಸ್ಥಾಪಕ ಡಾ. ಕೇಶವ ಬಲಿರಾಮ್ ಹೆಡ್ಗೆವಾರ್ ಮತ್ತು ಅಂಬೇಡ್ಕರ್ ಇಬ್ಬರೂ ಸಮಾಜದ ಉನ್ನತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು ಮತ್ತು ರಾಷ್ಟ್ರೀಯ ಅಭಿವೃದ್ಧಿಯ ದೃಷ್ಟಿಕೋನವನ್ನು ಹಂಚಿಕೊAಡರು ಎಂದು ಹೇಳಿದರು. "ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಹೆಡ್ಗೆವಾರ್ ಇಬ್ಬರೂ ತಮ್ಮ ಜೀವನದುದ್ದಕ್ಕೂ ಹಿಂದೂ ಸಮಾಜಕ್ಕಾಗಿ ಕೆಲಸ ಮಾಡಿದರು. "ಅವರು ಬಲಿಷ್ಠ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಕನಸು ಕಂಡಿದ್ದರು" ಎಂದು ಭಾಗವತ್ ಹೇಳಿದರು.

ಪಿಎನ್‌ಬಿ ಬ್ಯಾಂಕ್ ವಂಚನೆ ಪ್ರಕರಣ: ಮೆಹುಲ್ ಚೋಕ್ಸಿ ಮೇಲ್ಮನವಿ!

ನವದೆಹಲಿ, ಏ. ೧೪: ಪಂಜಾಬ್ ನ್ಯಾಷನಲ್ ಬ್ಯಾಂಕ್ ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣದಲ್ಲಿ ಭಾರತದಿಂದ ಪರಾರಿಯಾಗಿದ್ದ ವಜ್ರೋದ್ಯಮಿ ಮೆಹುಲ್ ಚೋಕ್ಸಿ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆ ಮತ್ತು ಜಾರಿ ನಿರ್ದೇಶನಾಲಯ ಮಾಡಿದ ಕೋರಿಕೆಯ ಮೇರೆಗೆ ಬೆಲ್ಜಿಯಂನ ಅಧಿಕಾರಿಗಳು ಬಂಧಿಸಿದ್ದಾರೆ. ಅದರ ಬಗ್ಗೆ ಭಾರತಕ್ಕೆ ಮಾಹಿತಿ ನೀಡಿದ್ದಾರೆ ಎಂದು ಸೋಮವಾರ ಮೂಲಗಳು ತಿಳಿಸಿವೆ. ಪ್ರಸ್ತುತ ಜೈಲಿನಲ್ಲಿರುವ ಚೋಕ್ಸಿ ಆರೋಗ್ಯದ ಕಾರಣ ಉಲ್ಲೇಖಿಸಿ ಜಾಮೀನು ಮತ್ತು ತಕ್ಷಣದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಅವರ ಪರ ವಕೀಲರು ಇದೇ ರೀತಿಯ ಯೋಜನೆಯಲ್ಲಿದ್ದು, ಭಾರತಕ್ಕೆ ಅವರ ಹಸ್ತಾಂತರವನ್ನು ವಿರೋಧಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ. ಬೆಲ್ಜಿಯಂನಲ್ಲಿ ಇರುವುದಾಗಿ ಸ್ಥಳೀಯ ಆಡಳಿತಕ್ಕೆ ಗೊತ್ತಾದ ಬಳಿಕ ಚೋಕ್ಸಿಯನ್ನು ಶನಿವಾರ ಬಂಧಿಸಲಾಗಿತ್ತು. ಈಗ ಆತನನ್ನು ವಶಕ್ಕೆ ಪಡೆಯಲಾಗಿದ್ದು, ಭಾರತಕ್ಕೆ ಹಸ್ತಾಂತರಿಸಲು ಸಿದ್ಧತೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ೬೫ ವರ್ಷದ ವಜ್ರದ ವ್ಯಾಪಾರಿ ಚೋಕ್ಸಿ ಜನವರಿ ೨, ೨೦೧೮ ರಂದು ಭಾರತದಿಂದ ಪರಾರಿಯಾಗಿದ್ದರು. ಸಾರ್ವಜನಿಕ ವಲಯದ ಪಿಎನ್‌ಬಿಗೆ ರೂ. ೧೩,೮೫೦ ಕೋಟಿ ವಂಚಿಸಿದ ಆರೋಪದಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ ಅವರು ಬೇಕಾಗಿದ್ದಾರೆ. ಈ ವಂಚನೆಯಲ್ಲಿ ಆತನ ಸೋದರಳಿಯ ನೀರವ್ ಮೋದಿ ಕೂಡ ಪಾಲುದಾರನಾಗಿದ್ದ. ಆರಂಭದಲ್ಲಿ ಅಮೆರಿಕಕ್ಕೆ ತೆರಳುವ ಮೂಲಕ ಭಾರತದಿಂದ ಪರಾರಿಯಾಗಿದ್ದ ಚೋಕ್ಸಿ, ತದನಂತರ ಆಂಟಿಗುವಾದಲ್ಲಿ ನೆಲೆಸಿದ್ದರು. ೨೦೧೭ ರಲ್ಲಿ ಆಂಟಿಗುವಾದ ಪೌರತ್ವವನ್ನು ಪಡೆದಿದ್ದರು. ನಂತರ ಕ್ಯೂಬಾಕ್ಕೆ ತೆರಳಲು ಪ್ರಯತ್ನಿಸುತ್ತಿದ್ದಾಗ ಡೊಮಿನಿಕಾದಲ್ಲಿ ಬಂಧಿಸಲಾಗಿತ್ತು. ಆದರೂ ಅವರ ಪರ ವಕೀಲರು ಆಂಟಿಗುವಾದಿAದ ಅಪಹರಿಸಿದ್ದಾರೆ ಎಂದು ಹೇಳಿದ್ದರು. ಭಾರತವು ಹಸ್ತಾಂತರಕ್ಕೆ ಮನವಿ ಮಾಡಿದ್ದರೂ ಡೊಮಿನಿಕಾ ಮತ್ತೆ ಆತನನ್ನು ಆಂಟಿಗುವಾಕ್ಕೆ ಗಡೀಪಾರು ಮಾಡಿತ್ತು. ನಂತರ ಆತನ ಬೆಲ್ಜಿಯಂನಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯಲು ಡೊಮಿನಿಕಾವನ್ನು ತೊರೆದಿದ್ದರು ಎನ್ನಲಾಗಿದೆ.