ನಾಪೋಕ್ಲು, ಏ. ೧೪: ಕೊಡಗಿನ ಪ್ರಪ್ರಥಮ ಪೊನ್ನು ಮುತ್ತಪ್ಪ ದೇವಸ್ಥಾನ ಹಾಗೂ ಎರಡನೇ ಪರಶಿನಿ ಎಂದು ಪ್ರಖ್ಯಾತವಾಗಿರುವ ನಾಪೋಕ್ಲುವಿನ ಶ್ರೀ ಪೊನ್ನು ಮುತ್ತಪ್ಪ ದೇವರ ವಾರ್ಷಿಕ ಉತ್ಸವ ಸಾಂಪ್ರದಾಯಿಕವಾಗಿ ಸಂಪನ್ನಗೊAಡಿತು.

ಶುಕ್ರವಾರ ಮಧ್ಯಾಹ್ನ ಪೈಂಗುತ್ತಿ ಹಾಗೂ ಸಂಜೆ ಶ್ರೀ ಮುತ್ತಪ್ಪ ದೇವರ ಕಲಶ ನಡೆಯಿತು. ಪವಿತ್ರ ಕಾವೇರಿ ನದಿಯಲ್ಲಿ ಸ್ನಾನದ ನಂತರ ಪ್ರಖ್ಯಾತ ಕೇರಳ ಚಂಡೆಗಳೊAದಿಗೆ ನಾಪೋಕ್ಲು ಪೇಟೆಯ ಮುಖ್ಯಬೀದಿಯಲ್ಲಿ ಸನ್ನಿಧಾನಕ್ಕೆ ಮೆರವಣಿಗೆ ಮೂಲಕ ಆಗಮನವಾಯಿತು.

ಈ ಸಂದರ್ಭ ಸಿಡಿಮದ್ದು ಪ್ರದರ್ಶನ, ಕೇರಳದ ನೃತ್ಯ, ವಿದ್ಯುತ್ ದೀಪಗಳಿಂದ ಅಲಂಕರಿಸಿದ ಮಂಟಪ ಮತ್ತಿತರ ಮನರಂಜನಾ ಕಾರ್ಯಕ್ರಮಗಳು ನಡೆದು ಜನಮನ ಆಕರ್ಷಿಸಿದವು. ರಾತ್ರಿ ವೆಳ್ಳಾಟಂ ಬಳಿಕ ಕುಟ್ಟಿಚಾತ ಮತ್ತು ಗುಳಿಗ ದೇವರ ವೆಳ್ಳಾಟಂ ನಡೆದವು.

ಉತ್ಸವದ ಅಂಗವಾಗಿ ಗುರುವಾರ ಬೆಳಿಗ್ಗೆ ಗಣಪತಿ ಹೋಮ ಮತ್ತು ಶುದ್ಧ ಕಲಶವನ್ನು ಕೇರಳ ನೀಲೇಶ್ವರದ ಮುರಳಿ ಕೃಷ್ಣ ತಂತ್ರಿ ಅವರಿಂದ ನಡೆಸಲಾಯಿತು. ರಾತ್ರಿ ಗುರು ಪೂಜೆ ಹಾಗೂ ಶ್ರೀದೇವಿ ಪೂಜೆ ನಡೆಯಿತು. ಶನಿವಾರ ಗುಳಿಗ ಕೋಲ, ಬಳಿಕ ಕುಟ್ಟಿಚಾತ ಕೋಲ ಹಾಗೂ ತಿರುವಪ್ಪನ್ ಮತ್ತು ಮುತ್ತಪ್ಪ ತೆರೆ ಜರುಗಿದವು. ಉತ್ಸವದ ಅಂಗವಾಗಿ ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಭಕ್ತಾದಿಗಳು ತಮ್ಮ ಇಷ್ಟಾರ್ಥ ಸಿದ್ದಿಗೆ ವಿವಿಧ ಹರಕೆ ಕಾಣಿಕೆ ಒಪ್ಪಿಸಿ ಪ್ರಸಾದ ಪಡೆದುಕೊಂಡು ಧನ್ಯತಾಭಾವ ಹೊಂದಿದರು.

ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಎ.ಕೆ ಚಂದ್ರನ್, ಉಪಾಧ್ಯಕ್ಷರಾದ ಎಂ.ಕೆ ತಂಗ, ಚಿನ್ನ, ಕಾರ್ಯದರ್ಶಿ ರಾಜೀವನ್, ಉಪ ಕಾರ್ಯದರ್ಶಿ ಮನೋಹರ್, ಖಜಾಂಚಿ ಕಿಶೋರ್ ಪಿ.ಸಿ., ದೇವಾಲಯದ ಪೂಜಾರಿ ಹರಿದಾಸ್ ಮತ್ತು ಆಡಳಿತ ಮಂಡಳಿ ಸದಸ್ಯರು ಊರ ಹಾಗೂ ಪರ ಊರಿನ ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.