ವೀರಾಜಪೇಟೆ, ಏ. ೧೪: ವೀರಾಜಪೇಟೆ ನಗರದ ಚಿಕ್ಕಪೇಟೆ ಛತ್ರಕೆರೆಯ ಬಳಿಯ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಹನುಮ ಜಯಂತಿ ಮಹೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು.

ಮುಂಜಾನೆ ಶ್ರೀ ಸ್ವಾಮಿಗೆ ಅಭಿಷೇಕ ಪೂಜೆಗಳು ನಡೆಯಿತು. ಸ್ಥಳೀಯ ಭಕ್ತರಿಂದ ಹನುಮ ಜಯಂತಿ ಅಂಗವಾಗಿ ಭಕ್ತಿ ಸಂಕೀರ್ತನಾ ನಾಮ ಜಪಗಳು, ಭಜನೆ ನಡೆದವು. ಮಧ್ಯಾಹ್ನ ೧೨.೨೦ಕ್ಕೆ ಶ್ರೀ ಸ್ವಾಮಿಗೆ ವಿಶೇಷ ಅಲಂಕಾರ ಪೂಜೆಗಳು, ಮಾಹಾಪೂಜೆ ಮಂಗಳಾರತಿ ಸಲ್ಲಿಕೆಯಾದವು, ಭಕ್ತರಿಂದ ತೀರ್ಥ ಪ್ರಸಾದ ವಿನಿಯೋಗ ನಡೆಯಿತು.

ಈ ವೇಳೆಯಲ್ಲಿ ಮಾತನಾಡಿದ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಮಾಳೇಟಿರ ಸನ್ನಿ ಕಾರ್ಯಪ್ಪ ಅವರು ದೇವಾಲಯವು ಸ್ಥಾಪನೆಯಾಗಿ ಸುಮಾರು ೨೫ ವರ್ಷಗಳು ಸಂದಿವೆ. ದೇವಾಲಯದಲ್ಲಿ ಹಬ್ಬ ಹರಿದಿನಗಳೊಂದಿಗೆ, ವಿಶೇಷ ಪೂಜೆಗಳು, ಸಾಮೂಹಿಕ ಸತ್ಯನಾರಾಯಣ ಪೂಜೆ, ಮದುವೆ ಹೀಗೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಿಸಿಕೊಂಡು ಬಂದಿದ್ದೇವೆ. ಪ್ರತಿ ವರ್ಷವು ದೇವಾಲಯದ ಸಮಿತಿ ವತಿಯಿಂದ ಚರ್ತುರ್ಥಿ ಹಬ್ಬದಂದು ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ನಿತ್ಯಪೊಜೆಯೊಂದಿಗೆ ನವದಿನಗಳ ಕಾಲದ ಪೂಜೆ ಸಲ್ಲಿಸಲಾಗುತ್ತದೆ. ಅನಂತಪದ್ಮನಾಭ ವೃತದಂದು ಶೋಭಾಯತ್ರೆಯಲ್ಲಿ ಭಾಗವಹಿಸಿ ವಿಸರ್ಜನೆ ಮಾಡಲಾಗುತ್ತಿದೆ. ದೇವಾಲಯಕ್ಕೆ ೨೫ ವರ್ಷಗಳು ಸಲ್ಲಿಕೆಯಾಗಿರುವುದರಿಂದ ಮುಂದಿನ ಮೇ ತಿಂಗಳಿನಲ್ಲಿ ದೇವಾಲಯದ ಬೆಳ್ಳಿ ಮಹೋತ್ಸವ ಆಚರಣೆ ಮಾಡಲಾಗುತ್ತದೆ ಎಂದರು. ದೇವಾಲಯದ ಆಡಳಿತ ಮಂಡಳಿಯ ವತಿಯಿಂದ ಆಗಮಿಸಿದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು.

ದೇವಾಲಯದ ಪ್ರಮುಖ ಆರ್ಚಕರಾದ ಸುಬ್ರಮಣ್ಯ ಭಟ್ ಮತ್ತು ಸಹ ಪುರೋಹಿತರು, ದೇವಾಲಯದ ಆಡಳಿತ ಮಂಡಳಿಯ ಸದಸ್ಯರು, ನಗರದ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಪಾಲ್ಗೊಂಡಿದ್ದರು.