ಕೊಯನಾಡು, ಏ. ೧೪: ಸುನ್ನಿ ಮುಸ್ಲಿಂ ಜುಮಾ ಮಸೀದಿ ಕೊಯನಾಡು ಹಾಗೂ ನುಸ್ರತುಲ್ ಇಸ್ಲಾಂ ಅಸೋಸಿಯೇಶನ್ ಕೊಯನಾಡು ವತಿಯಿಂದ ೨೮ ನೇ ಸ್ವಲಾತ್ ಹಾಗೂ ಏಕ ದಿನ ಧಾರ್ಮಿಕ ಮತ ಪ್ರಭಾಷಣ ಕಾರ್ಯಕ್ರಮವು ತಾ ೧೨ ರÀಂದು ಮಸೀದಿ ವಠಾರದಲ್ಲಿ ಜಮಾಅತ್ ಅಧ್ಯಕ್ಷರಾದ ಹಾಜಿ ಎಸ್ ಮೊಯಿದಿನ್ ಕುಂಞೆ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಬದ್ರಿಯಾ ಮಸೀದಿ ದೇವರಕೊಲ್ಲಿ ಇಮಾಂ ಅಬ್ದುಲ್ ಜಲೀಲ್ ಸಖಾಫಿ ಉಸ್ತಾದ್ ಸ್ವಾಗತಿಸಿದರು.

ಸುನ್ನಿ ಮುಸ್ಲಿಂ ಜುಮಾ ಮಸೀದಿ ಖತೀಬರಾದ ಮಹಮ್ಮದ್ ಸಖಾಫಿ ಅಲ್ ಹಿಕಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಎಲ್ಲಾ ರೀತಿಯ ಅಡಚಣೆಗಳಿಗೆ, ಮಾನಸಿಕ ಸಮಸ್ಯೆಗಳಿಗೆ ಆಧ್ಯಾತ್ಮಿಕ ಒಂದೇ ಪರಿಹಾರವಾಗಿದೆ, ನಿರಂತರವಾಗಿ ಸಕಲ ಸಂಕಷ್ಟಗಳಿಗೆ ಸ್ವಲಾತ್ ಹೆಚ್ಚಿಸುವುದೊಂದೇ ಪರಿಹಾರ ಎಂದರು. ಮಾದಕ ವ್ಯಸನಗಳು ಸಮಾಜದ ಒಳಗೆ ನುಸುಳಿಕೊಂಡು ಅನೇಕ ಅಕ್ರಮ, ಅನೈತಿಕತೆಗಳು ನಡೆಯುತ್ತಿವೆ. ಮಾದಕ ವ್ಯಸನಗಳು ಮದ್ಯ ಚಟಗಳಿಂದಾಗಿ ಯುವ ಸಮೂಹ ಅಕ್ರಮಗಳಿಗೆ ಮುಂದಾಗುತ್ತಿದ್ದಾರೆ. ಸಿನಿಮಾಗಳು ಮತ್ತು ಜಾಲತಾಣಗಳು ಯುವ ಸಮೂಹಕ್ಕೆ ತಪ್ಪಾದ ಸಂದೇಶ ನೀಡುತ್ತಿವೆ. ಮಾದಕತೆಯ ಪ್ರಭಾವದಿಂದ ಸ್ವಂತ ತಾಯಿ ಮತ್ತು ಸಹೋದರಿ ಎಂದು ಅರಿಯದೇ ಸ್ವಂತ ರಕ್ತದ ಕುಡಿಗಳೇ ಅವರ ಮೇಲೆ ಅಕ್ರಮ ಎಸಗುವಂತ ಕಾಲ ಇದಾಗಿದೆ. ಆದ್ದರಿಂದ ಸಮುದಾಯವು ಈ ಬಗ್ಗೆ ಜಾಗೃತರಾಗಬೇಕಿದೆ", ಎಂದು ಉಸ್ತಾದರು ಕರೆ ಕೊಟ್ಟರು,

ಮುಖ್ಯ ಪ್ರಭಾಷಣ ಮಾಡಿದ ಅಬ್ದುಲ್ ರಝಾಕ್ ಅಬ್ರಾರಿ ಉಸ್ತಾದ್ ಮಾತನಾಡಿ ದೇವರು ನಿಮಗೆ ಸ್ವರ್ಗದ ಬಾಗಿಲನ್ನು ತೆರೆದಿಡಬೇಕಾದರೆ ತಂದೆ ತಾಯಿಯನ್ನು ನೋಡಿಕೊಳ್ಳಬೇಕು, ತಂದೆ ತಾಯಿಯ ಆಶಿರ್ವಾದವಿಲ್ಲದೆ ಸ್ವರ್ಗ ಪ್ರವೇಶ ಸಾದ್ಯವಿಲ್ಲ, ತಾಯಿಯಂದಿರು ತಮ್ಮ ೯ ತಿಂಗಳು ಹೊತ್ತು ಹೆತ್ತು ಬೆಳಸಿದ ರೋಚಕ ಕಥೆಯಲ್ಲಿ ಮಗುವಿನ ತಂದೆಯ ಜವಾಬ್ದಾರಿಯ ಕಷ್ಟದ ಸಂಕಷ್ಟದ ಕಥೆಗಳನ್ನು ಹೇಳಿಕೊಡಬೇಕು ಎಂದರು.

ಮುಸ್ಲಿಂ ನಾಮಧಾರಿಯಾಗಿ ಜೀವನ ನಿರ್ವಹಿಸುವುದರಿಂದ ಮುಸ್ಲಿಂ ಆಗಿರಲು ಸಾಧ್ಯವಿಲ್ಲ. ಇಸ್ಲಾಮಿನ ನೈಜ ಆದರ್ಶಗಳೊಂದಿಗೆ ಅದನ್ನು ಪರಿಪಾಲಿಸಿ ಮೈಗೂಡಿಸಿಕೊಂಡಲ್ಲಿ ಮಾತ್ರ ಒಬ್ಬ ನೈಜ ಮುಸ್ಲಿಂ ಆಗಲು ಸಾಧ್ಯ" ಎಂದು ಮನವರಿಕೆ ಮಾಡಿದರು.

ಸಮಾರೋಪ ಸಮಾರಂಭದಲ್ಲಿ ಸ್ವಲಾತ್ ಮಜ್ಲಿಸ್ ಹಾಗೂ ದುವಾಃ ನೇತೃತ್ವ ವಹಿಸಿದ್ದ ಸಯ್ಯದ್ ಸೀದೀ ಕೋಯ ಅಲ್ ಅಹ್ಸನಿ ತಂಙಳ್ ರವರು ಮಾತನಾಡಿ ಅಲ್ಲಾಹನ ಔಲಿಯಾ, ಉಲಮಾ, ಸಾದಾತ್ ಗಳ ಅನುಸ್ಮರಣೆ ಮಾಡುವುದು ಮತ್ತು ಅವರ ಕೀರ್ತನೆಗಳು ಹೇಳುವುದರ ಮುಖಾಂತರ ನಮ್ಮ ಜೀವನದಲ್ಲಿ ಮಾಡಿಟ್ಟ ಪಾಪಗಳನ್ನು ಅಲ್ಲಾಹನು ಕ್ಷಮಿಸಲು ಕಾರಣವಾಗಬಹುದು ಎಂದು ತಿಳಿಹೇಳಿದರು.

ಸಭಾ ಕಾರ್ಯಕ್ರಮದಲ್ಲಿ ಹಜ್ ಯಾತ್ರೆ ನಿರ್ವಹಿಸಲು ತೆರಳುತ್ತಿರುವ ಮೂವರನ್ನೂ ಬೀಳ್ಕೊಡಲಾಯಿತು. ಮದ್ರಸ ರಗಂದಲ್ಲಿ ೨೫ ವರ್ಷ ಸೇವೆಯನ್ನು ಸಲ್ಲಿಸಿದ ಮುಅಲ್ಲಿಂರಿಗೆ ನೀಡುವ ಪ್ರಶಸ್ತಿಯಾದ ಇಹತೀರಾಮ್ ಅವಾರ್ಡ್ ಅನ್ನು ಸ್ವೀಕರಿಸಿದ ಸುನ್ನಿ ಮುಸ್ಲಿಂ ಜುಮಾ ಮಸೀದಿ ಮಾಜಿ ಖತೀಬ್ ಅಬ್ದುಲ್ ಖಾದರ್ ಮದನಿ ರವರಿಗೆ ಜಮಾಅತ್ ವತಿಯಿಂದ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಬದ್ರಿಯಾ ಮಸೀದಿ ಸಂಪಾಜೆ ಖತೀಬ್ ಲುಕ್ಮಾನುಲ್ ಹಕೀಂ ಫೈಝಿ, ಬದ್ರಿಯಾ ಮಸೀದಿ ಗೂನಡ್ಕ ಖತೀಬ್ ಅಬೂಬಕ್ಕರ್ ಸಿದ್ದೀಕ್ ಸಖಾಫಿ ಅಲ್ ಅರ್ಶದಿ, ಅಬ್ದುಲ್ ಖಾದರ್ ಮದನಿ, ನೌಶಾದ್ ಫಾಳಿಲಿ, ಹಾಜಿ ಅಲವಿ ಕುಟ್ಟಿ, ಅಬ್ದುಲ್ ರಹಿಮಾನ್ ಎಸ್ ಪಿ, ಅಬ್ದುಲ್ ರಝಾಕ್ ಎಸ್ ಎ, ಹಂಸ ಸಿ, ಹನೀಫ್ ಎಸ್ ಪಿ, ಮುನೀರ್ ಪಿ ಎಂ, ರಹಮತ್ ಟಿ ಎಂ, ನಝೀರ್ ಮಾಡಶೇರಿ, ಉಸ್ಮಾನ್ ಎಂ ಹೆಚ್, ಅಶ್ರಫ್ ಹೆಚ್ ಎ, ಶಾಹುಲ್ ಹಮೀದ್ ಕುತ್ತಮೊಟ್ಟೆ, ಶರಪುದ್ದೀನ್ ಕುಂಬ್ರ, ಅಶ್ರಫ್ ಗುಂಡಿ, ಮಹಮ್ಮದ್ ಕುಂಞÉ ಗೂನಡ್ಕ, ಅಲಿ ಹಾಜಿ, ಉನೈಸ್ ಪೆರಾಜೆ, ಅಬ್ದುಲ್ಲಾ ಕೆ ಎ, ಹಾಗೂ ಹಲವಾರು ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ನಾಯಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು, ನೌಶಾದ್ ಫಾಳಿಲಿ ನಿರೂಪಿಸಿ ವಂದಿಸಿದರು.