ಸೋಮವಾರಪೇಟೆ, ಏ. ೧೫: ಸೋಮವಾರಪೇಟೆ ಪಟ್ಟಣದಿಂದ ಶಾಂತಳ್ಳಿ ಹಾಗೂ ಕೂತಿ ಸಂಪರ್ಕ ಕಲ್ಪಿಸುವ ರಾಜ್ಯಹೆದ್ದಾರಿ (ಎಸ್‌ಹೆಚ್ ೮೫) ಆಲೇಕಟ್ಟೆ ರಸ್ತೆಯ ಬಳಿ ಕುಸಿಯುವ ಭೀತಿಯಲ್ಲಿದ್ದು, ಇದೀಗ ಶಾಸಕ ಮಂತರ್ ಗೌಡ ಅವರು ರೂ. ೧.೫೦ ಕೋಟಿ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಚಾಲನೆ ನೀಡಿದರು.
ಆಲೇಕಟ್ಟೆ ರಸ್ತೆಯ ಬಳಿ ರಾಜ್ಯ ಹೆದ್ದಾರಿ ಹಾಗೂ ಚೌಡ್ಲು ಗ್ರಾ.ಪಂ.ನ ಕೆಲವು ವಾರ್ಡ್ಗಳು ಮತ್ತು ಹಾನಗಲ್ಲುಬಾಣೆ ಸಂಪರ್ಕ ರಸ್ತೆಯೂ ಸಹ ಮಣ್ಣು ಕುಸಿತದಿಂದ ಸಂಪರ್ಕ ಕಳೆದುಕೊಳ್ಳುವ ಭೀತಿ ಎದುರಾಗಿತ್ತು. ಕಳೆದ ೧೫ ವರ್ಷಗಳ ಹಿಂದೆ ರಾಜ್ಯಹೆದ್ದಾರಿಗೆ ನಿರ್ಮಿಸಿದ್ದ ಕಲ್ಲಿನ ತಡೆಗೋಡೆ, ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಕುಸಿದು ಬಿದ್ದಿತ್ತು.
ಪ್ರತಿ ಮಳೆಗಾಲದಲ್ಲೂ ಈ ಪ್ರದೇಶದಲ್ಲಿ ರಸ್ತೆಯ ಒಂದು ಬದಿ ಕುಸಿತಗೊಳ್ಳುತ್ತಿದ್ದು, ಆತಂಕ ಮುಂದುವರೆದಿತ್ತು. ಈ ಬಾರಿ ಮಳೆಗಾಲ ಆರಂಭಕ್ಕೂ ಮುನ್ನವೇ ಸಣ್ಣ ನೀರಾವರಿ ಇಲಾಖೆ ಮೂಲಕ ರೂ. ೧.೫೦ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಬೃಹತ್ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕ ಮಂತರ್ ಗೌಡ ಅವರು ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಶಾಸಕರು, ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಇಲಾಖೆ ಸಚಿವರಾಗಿರುವ ಭೋಸರಾಜು ಅವರೊಂದಿಗೆ ಕಾಮಗಾರಿಯ ಬಗ್ಗೆ ಚರ್ಚೆ ನಡೆಸಿದ ಸಂದರ್ಭ ತಕ್ಷಣಕ್ಕೆ ರೂ. ೧.೫೦ ಕೋಟಿ ಅನುದಾನ ಬಿಡುಗಡೆಗೊಳಿಸಿದ್ದಾರೆ. ಈ ಪ್ರದೇಶವು ಎರಡು ಪ್ರಮುಖ ಸಂಪರ್ಕ ರಸ್ತೆಗಳ ಜಂಕ್ಷನ್ ಆಗಿದ್ದು, ಭೂಕುಸಿತದಿಂದ ರಸ್ತೆಯೂ ಕುಸಿಯುವ ಆತಂಕ ಎದುರಾಗಿತ್ತು. ಇದೀಗ ರೂ. ೧.೫೦ ಕೋಟಿ ಅನುದಾನ ಒದಗಿಸಿದ್ದು, ಮಡಿಕೇರಿಯ ಹಳೆ ಖಾಸಗಿ ಬಸ್ ನಿಲ್ದಾಣದಲ್ಲಿ ನಿರ್ಮಿಸಿರುವಂತೆ ‘ಕೌಂಟರ್‌ಫೋಟ್ ರಿಟೈನಿಂಗ್ ವಾಲ್’ ನಿರ್ಮಾಣಗೊಳ್ಳಲಿದೆ ಎಂದರು.
ಎರಡೂ ರಸ್ತೆಗಳಿಗೆ ಅನುಕೂಲವಾಗುವಂತೆ ೬೫ ಮೀಟರ್ ಉದ್ದ ಹಾಗೂ ೧೦ ಮೀಟರ್ ಎತ್ತರದ ತಡೆಗೋಡೆ ನಿರ್ಮಾಣವಾಗಲಿದೆ. ಮುಂದಿನ ದಿನಗಳಲ್ಲಿ ಉಳಿದ ಭಾಗದ ಕಾಮಗಾರಿ ಕೈಗೊಳ್ಳಲಾಗುವುದು. ಈಗಾಗಲೇ ಚೌಡ್ಲು ಗ್ರಾ.ಪಂ.ನ ಗಾಂಧಿನಗರದಲ್ಲಿ ೨ ಕೋಟಿ ವೆಚ್ಚದಲ್ಲಿ ತಡೆಗೋಡೆ ಕಾಮಗಾರಿ ಮುಕ್ತಾಯವಾಗಿದೆ. ಎರಡು ವಾರದಲ್ಲಿ ಉದ್ಘಾಟನೆಯಾಗಲಿದೆ ಎಂದು ಶಾಸಕರು ತಿಳಿಸಿದರು.
ಇದರೊಂದಿಗೆ ಸೋಮವಾರಪೇಟೆ-ಶಾಂತಳ್ಳಿ ರಾಜ್ಯ ಹೆದ್ದಾರಿ (ಎಸ್‌ಹೆಚ್೮೫)ಯು ಎಸ್‌ಹೆಚ್‌ಡಿಪಿ ಯೋಜನೆಯಡಿ ರಸ್ತೆ ಅಗಲೀಕರಣ ಕಾಮಗಾರಿ ಪ್ರಗತಿಯಲ್ಲಿದೆ. ಕ್ಷೇತ್ರದ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡಲಾಗುತ್ತಿದೆ. ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಬೇಕಿದೆ ಎಂದ ಶಾಸಕರು, ಕೆಲಸ ನಡೆಯುವ ಸಂದರ್ಭ ಸ್ಥಳೀಯರು ಸ್ಥಳದಲ್ಲಿ ನಿಂತು ಕೆಲಸ ಮಾಡಿಸಿಕೊಳ್ಳಬೇಕು ಎಂದರು.
ತಕ್ಷಣ ಕಾಮಗಾರಿ ಆರಂಭಿಸಿ ಮಳೆಗಾಲದೊಳಗೆ ಪೂರ್ಣಗೊಳಿಸಬೇಕು ಎಂದು ಇದೇ ಸ್ಥಳದಲ್ಲಿದ್ದ ಗುತ್ತಿಗೆದಾರ ಶ್ರೀನಿವಾಸ್ ಅವರಿಗೆ ಸೂಚಿಸಿದರು.
ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಮಾಜಿ ಅಧ್ಯಕ್ಷ ಕೆ.ಎಂ. ಲೋಕೇಶ್, ಚೌಡ್ಲು ಗ್ರಾ.ಪಂ. ಸದಸ್ಯ ಚೇತನ್, ಬ್ಲಾಕ್ ಕಾಂಗ್ರೆಸ್ ಖಜಾಂಚಿ ಚೇತನ್, ಗ್ರಾಮದ ಅಧ್ಯಕ್ಷ ಮುಕುಂದ, ಪ.ಪಂ. ನಾಮನಿರ್ದೇಶಿತ ಸದಸ್ಯ ಡಿ.ಯು. ಕಿರಣ್, ಸ್ಥಳೀಯರಾದ ಸುಕುಮಾರ್, ಸುಜಿತ್, ಇಲಾಖೆಯ ಅಭಿಯಂತರ ಕುಮಾರಸ್ವಾಮಿ ಸೇರಿದಂತೆ ಇತರರು ಇದ್ದರು.