ಕೂಡಿಗೆ, ಏ. ೧೫: ಶ್ರೀ ಮಾತಾ ಚಾಂಪಿಯನ್ ಲೀಗ್ ೨೦೨೫-೨೬ ಸೀಸನ್- ೧ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯು ಕೂಡಿಗೆ ಕ್ರೀಡಾ ಮೈದಾನದಲ್ಲಿ ನಡೆಯಿತು.

ಕ್ರೀಡಾಕೂಟದ ಉದ್ಘಾಟನೆಯನ್ನು ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ನೆರವೇರಿಸಿ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ಕ್ರೀಡಾಕೂಟಗಳ ಆಯೋಜನೆಗಳಿಂದ ಯುವಕ ಸಂಘಟನೆ ಮೂಲಕ ಒಗ್ಗೂಡಿ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ. ಕ್ರೀಡಾಕೂಟದ ಮುಖೇನ ತಮ್ಮ ಪ್ರತಿಭೆಯನ್ನು ಹೊರತರಲು ಸಹಕಾರಿಯಾಗುವುದು, ಕ್ರೀಡಾಪಟುಗಳು ಸರಕಾರದ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಲು ಕರೆ ನೀಡಿದರು.

ಸಭೆಯಲ್ಲಿ ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಟಿ. ಗಿರೀಶ್, ಜಿಲ್ಲಾ ಅಸಂಘಟಿತ ಕಾರ್ಮಿಕ ಸಂಘದ ಅಧ್ಯಕ್ಷ ಟಿ.ಪಿ. ಹಮೀದ್, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯ ಕೆ.ಎಂ. ಚಂದ್ರು ಮೂಡ್ಲಿಗೌಡ, ಕ್ರೀಡಾಕೂಟವನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಚಂದ್ರಶೇಖರ್, ಸೋಮಶೇಖರ್, ಕೂಡುಮಂಗಳೂರು ಪ್ರವೀಣ್, ಸೇರಿದಂತೆ ಶ್ರೀ ಮಾತಾ ಚಾಂಪಿಯನ್ ಕ್ರಿಕೆಟ್‌ನ ಸಂಘದ ಅಧ್ಯಕ್ಷ ಪ್ರವೀಣ್ ಸೇರಿದಂತೆ ಎಲ್ಲಾ ಸದಸ್ಯರು ಮತ್ತು ೧೨ ತಂಡಗಳ ಕ್ರೀಡಾಪಟುಗಳು ಹಾಜರಿದ್ದರು.