ಕಣಿವೆ, ಏ. ೧೫: ಹಾರಂಗಿ ಜಲಾಶಯವನ್ನು ನಿರ್ಮಾಣ ಮಾಡುವ ಸಂದರ್ಭ ಯಡವನಾಡು ಗ್ರಾಮದಲ್ಲಿ ಬಂದು ಬದುಕು ಕಟ್ಟಿಕೊಂಡ ನಿವಾಸಿಗಳಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಬೇಕಾದುದು ಸರ್ಕಾರದ ಆದ್ಯ ಕರ್ತವ್ಯ. ಹಾಗಾಗಿ ಗ್ರಾಮಸ್ಥರ ಕೋರಿಕೆಗಳಿಗೆ ಅಗತ್ಯವಾಗಿ ಸ್ಪಂದಿಸಲಾಗುತ್ತದೆ ಎಂದು ಶಾಸಕ ಡಾ. ಮಂತರ್ ಗೌಡ ಹೇಳಿದರು.

ಯಡವನಾಡು ಗ್ರಾಮದ ಶಿವ ಬಸವೇಶ್ವರ ದೇವಾಲಯದಲ್ಲಿ ಕಳೆದ ಮೂರು ದಿನಗಳಿಂದ ನಡೆದ ಗ್ರಾಮದೇವರುಗಳ ಪೂಜೋತ್ಸವದ ಕೊನೆಯ ದಿನವಾದ ಸೋಮವಾರ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಸಂದರ್ಭ ದೇವತಾ ಸಮಿತಿಯ ಅಧ್ಯಕ್ಷ ಗಣೇಶ್ ಅವರು, ದೇವಾಲಯದ ಆವರಣದಲ್ಲಿ ಗ್ರಾಮಸ್ಥರ ಅನುಕೂಲಕ್ಕಾಗಿ ಸಮುದಾಯ ಭವನ ನಿರ್ಮಾಣ ಮಾಡಲು ಚಿಂತನೆ ಹೊಂದಲಾಗಿದೆ. ಇದಕ್ಕಾಗಿ ಸರ್ಕಾರದಿಂದ ಪೂರಕವಾದ ಅನುದಾನ ಬಿಡುಗಡೆ ಮಾಡಿಸಿಕೊಡಬೇಕು.

ದೇವಾಲಯದ ಸಮಗ್ರ ಅಭಿವೃದ್ಧಿಗೆ ಶಾಸಕರು ಹಾಗೂ ಸರ್ಕಾರದಿಂದ ಅಗತ್ಯ ಸಹಕಾರ ಬೇಕೆಂದು ಕೋರಿದಾಗ, ಗ್ರಾಮದ ನಿವಾಸಿಗಳ ಬೇಡಿಕೆಗಳನ್ನು ಅರಿತು ಅದರಂತೆ ಕಾರ್ಯನಿರ್ವಹಿಸಬೇಕಿದೆ. ಸಮುದಾಯ ಭವನ ನಿರ್ಮಾಣಕ್ಕೆ ಕಾವೇರಿ ನೀರಾವರಿ ಅಧಿಕಾರಿಗಳ ಬಳಿ ಚರ್ಚೆ ನಡೆಸಲಾಗುವುದು. ಅಗತ್ಯ ಬಂದಲ್ಲಿ ಜಲ ಸಂಪನ್ಮೂಲ ಸಚಿವರ ಬಳಿಯೂ ಚರ್ಚಿಸುವುದಾಗಿ ಹೇಳಿದರು.

ಈ ಬಾರಿ ಉತ್ತಮ ಮಳೆಯಾಗುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿವೆ. ದೇವರ ಅನುಗ್ರಹದಿಂದ ಎಲ್ಲಾ ರೈತಾಪಿಗಳ ಬದುಕು ಹಸನಾಗಲಿ ಎಂದು ಆಶಿಸಿದರು. ದೇವಾಲಯ ಸಮಿತಿಯ ಪದಾಧಿಕಾರಿಗಳಿದ್ದರು.