ಸೋಮವಾರಪೇಟೆ, ಏ. ೧೫: ಕಾಫಿ ತೋಟದ ಕೆಲಸಕ್ಕೆ ತೆರಳಿದ ಯುವಕನೋರ್ವ ಮೀನು ಹಿಡಿಯಲೆಂದು ಕೆರೆಯ ಬಳಿ ತೆರಳಿ ಆಯತಪ್ಪಿ ಕೆರೆಯೊಳಗೆ ಮುಳುಗಿ ದುರ್ಮರಣ ಕ್ಕೀಡಾಗಿರುವ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.
ಗರಗAದೂರು ಗ್ರಾಮ ಸಮೀಪದ ಬಟಕನಹಳ್ಳಿ ಎಂಬಲ್ಲಿ, ಹಾರಂಗಿ ಹಿನ್ನೀರು ಪ್ರದೇಶ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪಟ್ಟಣ ಸಮೀಪದ ನಗರೂರು ನಿವಾಸಿ ಅಪ್ಪು-ಮಂಜುಳ ದಂಪತಿ ಪುತ್ರ, ಕೂಲಿ ಕಾರ್ಮಿಕ ಯೋಗೇಶ್ (೨೪) ಎಂಬಾತನೇ ಆಕಸ್ಮಿಕ ಅವಘಡಕ್ಕೀಡಾಗಿ ಸಾವನ್ನಪ್ಪಿದ ದುರ್ದೈವಿ.
ಕಳೆದ ಒಂದು ತಿಂಗಳಿನಿAದ ಗರಗಂದೂರು ಎಸ್ಟೇಟ್ನಲ್ಲಿ ಮರ ಕಟಾವು ಮಾಡುವ ಕೆಲಸಕ್ಕೆ ತೆರಳಿದ್ದ ಯೋಗೇಶ್, ಸಹ ಕಾರ್ಮಿಕರೊಂದಿಗೆ ಅಲ್ಲೇ ತಂಗುತ್ತಿದ್ದ. ಕಳೆದ ನಾಲ್ಕು ದಿನಗಳ ಹಿಂದಷ್ಟೇ ಮನೆಗೆ ಆಗಮಿಸಿ ನಂತರ ವಾಪಸ್ ಆಗಿದ್ದ. ಇಂದು ಕೆಲಸಕ್ಕೆ ರಜೆ ಮಾಡಿದ ಹಿನ್ನೆಲೆ ಸ್ನೇಹಿತ ಪ್ರದೀಪ್ ಎಂಬಾತನೊAದಿಗೆ ಬಟಕನಹಳ್ಳಿಯಲ್ಲಿರುವ ಕೆರೆಗೆ ತೆರಳಿ ಮೀನು ಹಿಡಿಯುತ್ತಿದ್ದ ಎನ್ನಲಾಗಿದೆ.
ಈ ಸಂದರ್ಭ ಗಾಳದ ವಯರ್ ತುಂಡಾಗಿದ್ದು, ಅದನ್ನು ಮೇಲೆತ್ತಲೆಂದು ಬಗ್ಗಿದ ಸಂದರ್ಭ ಆಯತಪ್ಪಿ ನೀರಿನೊಳಗೆ ಬಿದ್ದಿದ್ದಾನೆ. ತಕ್ಷಣ ಸೇಹಿತ ಪ್ರದೀಪ್ ರಕ್ಷಣೆಗೆ ಧಾವಿಸಿದರೂ ಪ್ರಯೋಜನವಾಗಿಲ್ಲ.
ನಂತರ ಸ್ಥಳೀಯರಿಗೆ ವಿಷಯ ತಿಳಿಸಿದ್ದು, ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕೆರೆಯೊಳಗೆ ಮುಳುಗಿ ಅಸುನೀಗಿದ್ದ ಯೋಗೇಶ್ನ ಮೃತದೇಹವನ್ನು ಮೇಲೆತ್ತಿದ್ದಾರೆ.
ಈ ಬಗ್ಗೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸೋಮವಾರಪೇಟೆ ಶವಾಗಾರಕ್ಕೆ ಮೃತದೇಹವನ್ನು ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮೃತರು ತಂದೆ, ತಾಯಿ, ಓರ್ವ ಸಹೋದರಿ ಹಾಗೂ ಈರ್ವರು ಸಹೋದರರನ್ನು ಅಗಲಿದ್ದಾನೆ.
ಹಾರಂಗಿ ಹಿನ್ನೀರು ಪ್ರದೇಶ ವ್ಯಾಪ್ತಿಯಲ್ಲಿರುವ ಕಾಫಿ ತೋಟಗಳಿಗೆ ನೀರು ಹಾಯಿಸಲೆಂದು ತೋಡಿಗೆ ಕಟ್ಟೆ ಕಟ್ಟಿ ಕೆರೆಯಂತೆ ನೀರು ನಿಲ್ಲಿಸಲಾಗಿತ್ತು. ನಿನ್ನೆ ಭಾರೀ ಮಳೆಯಾಗಿದ್ದರಿಂದ ಕೆರೆಯಲ್ಲಿ ಹೆಚ್ಚಿನ ನೀರು ಸಂಗ್ರಹವಾಗಿತ್ತು. ಇಂತಹ ಸಂದರ್ಭದಲ್ಲಿಯೇ ಮೀನು ಹಿಡಿಯಲು ತೆರಳಿದ್ದರಿಂದ ಕೆಸರಿನಲ್ಲಿ ಜಾರಿ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.