ಡಿ.ಕೆ.ಶಿ. ನೇತೃತ್ವದಲ್ಲಿ ಒಕ್ಕಲಿಗ ಶಾಸಕರ ಸಭೆ

ಬೆಂಗಳೂರು, ಏ. ೧೫: ರಾಜ್ಯ ಸರ್ಕಾರಕ್ಕೆ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಜನಗಣತಿ) ವರದಿ ವಿಚಾರದ ಕುರಿತು ಚರ್ಚಿಸಲು ಕುಮಾರ ಪಾರ್ಕ್ ಗಾಂಧಿ ಭವನ ರಸ್ತೆಯಲ್ಲಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸರ್ಕಾರಿ ನಿವಾಸದಲ್ಲಿ ಕಾಂಗ್ರೆಸ್ ಪಕ್ಷದ ಒಕ್ಕಲಿಗ ಶಾಸಕರು, ಮಾಜಿಶಾಸಕರು ಹಾಗೂ ಪ್ರಮುಖರ ಸಭೆ ನಡೆಯಿತು. ಮಾಗಡಿ ಬಾಲಕೃಷ್ಣ, ಕುಣಿಗಲ್ ರಂಗನಾಥ್, ಶಿವಲಿಂಗೇಗೌಡ, ಶಿವಶಂಕರ್ ರೆಡ್ಡಿ, ಡಿ.ಕೆ. ಸುರೇಶ್, ಶರತ್ ಬಚ್ಚೇಗೌಡ ಸೇರಿದಂತೆ ಅನೇಕ ನಾಯಕರು ಪಾಲ್ಗೊಂಡಿದ್ದರು. ಗಣತಿ ಸಾಧಕ-ಬಾಧಕ, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಬೇಕಾದ ಅಂಶಗಳು ಸಭೆಯಲ್ಲಿ ಚರ್ಚೆಯಾದವು.

ಜಾತಿ ಗಣತಿ - ವಿಶೇಷ ಅಧಿವೇಶನಕ್ಕೆ ಸತೀಶ್ ಜಾರಕಿಹೊಳಿ ಸಲಹೆ

ಬೆಳಗಾವಿ, ಏ. ೧೫: ಜಾತಿ ಗಣತಿ ವರದಿ ಜಾರಿ ಮಾಡಲು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಅಗತ್ಯ. ಅದಕ್ಕಾಗಿ ವಿಶೇಷ ಅಧಿವೇಶನ ಕರೆಯುವ ಅನಿವಾರ್ಯತೆ ಸರ್ಕಾರಕ್ಕಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು. ಈ ವರದಿ ವಿಚಾರದಲ್ಲಿ ಯಾರಿಗೆ ಆತಂಕ ಮತ್ತು ಗೊಂದಲ ಇವೆಯೋ ಅವರು ಅಧಿವೇಶನದಲ್ಲಿ ಚರ್ಚೆ ಮಾಡಬಹುದು. ಸುದೀರ್ಘವಾಗಿ ಚರ್ಚೆ ಆಗಬೇಕಿದೆ. ಅದಕ್ಕಾಗಿ ವಿಶೇಷ ಅಧಿವೇಶನ ಕರೆಯಬೇಕು. ಅದಕ್ಕಿಂತ ಉತ್ತಮ ಮಾರ್ಗ ಮತ್ತೊಂದಿಲ್ಲ ಎಂದು ತಿಳಿಸಿದರು. ಮುಖ್ಯವಾಗಿ ಜನ ತಿಳಿಯಬೇಕಾದದ್ದು ಏನೆಂದರೆ; ಈ ಜಾತಿ ಗಣತಿಯಿಂದ ರಾಜಕೀಯದ ಮೇಲೆ ಯಾವುದೇ ರೀತಿಯ ಪರಿಣಾಮ ಉಂಟಾಗುವುದಿಲ್ಲ. ನಮ್ಮ ರಾಜ್ಯದಲ್ಲಿ ಕೇವಲ ೧,೦೦೦ ಮತಗಳು ಇರುವ ಸಮುದಾಯದವರೂ ಶಾಸಕರಾಗಿದ್ದಾರೆ. ಪ್ರತಿ ಕ್ಷೇತ್ರದಲ್ಲಿ ಕನಿಷ್ಟ ೭೦ ಸಾವಿರಕ್ಕೂ ಹೆಚ್ಚು ಮತ ಇರುವ ಸಮಾಜದ ನಾಯಕರು ಏಕೆ ಆತಂಕ ಪಡಬೇಕು? ಎಂದೂ ಅವರು ಪ್ರಶ್ನಿಸಿದರು.

ಜಾತಿಗಣತಿಗೆ ಒಕ್ಕಲಿಗರ ಸಂಘ ವಿರೋಧ - ಹೋರಾಟದ ಹೆಜ್ಜೆ

ಬೆಂಗಳೂರು, ಏ. ೧೫: ಜನಗಣತಿ ವಿರೋಧಿಸಿ ರಾಜ್ಯದಾದ್ಯಂತ ಹೋರಾಟ ನಡೆಸಲು ರಾಜ್ಯ ಒಕ್ಕಲಿಗರ ಸಂಘ ನಿರ್ಧರಿಸಿದ್ದು, ತಾ.೧೭ರ ನಂತರ ಹೋರಾಟದ ರೂಪುರೇಷೆಗಳ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ. ಅನ್ಯಾಯಕ್ಕೆ ಒಳಗಾಗಿರುವ ಲಿಂಗಾಯತ, ಬ್ರಾಹ್ಮಣ ಸೇರಿ ಇತರ ಸಮುದಾಯಗಳನ್ನು ಒಟ್ಟುಗೂಡಿಸಿ ರಾಜ್ಯವನ್ನೇ ಬಂದ್ ಆಗುವ ರೀತಿಯಲ್ಲಿ ಹೋರಾಟ ಮಾಡುವುದಾಗಿ ಒಕ್ಕಲಿಗ ಸಂಘದ ಅಧ್ಯಕ್ಷರು ಸೇರಿದಂತೆ ಎಲ್ಲ ನಿರ್ದೇಶಕರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ವರದಿ ಜಾರಿಯಾದರೆ ಸರ್ಕಾರ ಬೀಳಿಸುವ ಶಕ್ತಿ ನಮ್ಮ ಸಮುದಾಯಕ್ಕಿದೆ. ಜನಾಂಗಕ್ಕೆ ಅನ್ಯಾಯವಾದರೆ ಸಂಘದ ಎಲ್ಲ ನಿರ್ದೇಶಕರು ರಾಜೀನಾಮೆ ಕೊಟ್ಟು ಬೀದಿಗೆ ಇಳಿಯುತ್ತೇವೆ ಎಂದು ಎಚ್ಚರಿಸಿದರು. ಇದು ಅವೈಜ್ಞಾನಿಕ ವರದಿಯಾಗಿದೆ. ಸಿದ್ದರಾಮಯ್ಯನವರಿಗಾಗಿ ತಯಾರಿಸಿದ ವರದಿಯಾಗಿದೆ. ಯಾವುದೇ ಕಾರಣಕ್ಕೂ ಈ ವರದಿಯನ್ನು ನಮ್ಮ ಸಂಘ ಒಪ್ಪುವುದಿಲ್ಲ ಎಂದರು. ಸುದ್ದಿಗೊಷ್ಠಿಯಲ್ಲಿ ಸಂಘದ ಅಧ್ಯಕ್ಷ ಕೆಂಚಪ್ಪಗೌಡ, ಕಾರ್ಯದರ್ಶಿ ಕೋನಪ್ಪಗೌಡ ಸೇರಿದಂತೆ ಸಂಘದ ಎಲ್ಲ ನಿರ್ದೇಶಕರು ಹಾಜರಿದ್ದರು.

ಬಂಧಿಸಲು ತೆರಳಿದ ಪೊಲೀಸರ ಮೇಲೆ ಹಲ್ಲೆ-ಆರೋಪಿಗೆ ಗುಂಡೇಟು

ಶಿವಮೊಗ್ಗ, ಏ. ೧೫: ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿಯೊಬ್ಬನ ಕಾಲಿಗೆ ಪೊಲೀಸರು ಗುಂಡು ಹಾರಿಸಿರುವ ಘಟನೆ ಭದ್ರಾವತಿಯಲ್ಲಿ ನಡೆದಿದೆ. ಆರೋಪಿ ನಝರುಲ್ಲಾ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಗಾಂಜಾ ಮಾರಾಟ ಪ್ರಕರಣದಲ್ಲಿ ಆರೋಪಿಯಾಗಿರುವ ನಝರುಲ್ಲಾನನ್ನು ಪೊಲೀಸರು ಬಂಧಿಸಲು ತೆರಳಿದ್ದರು. ಈ ವೇಳೆ ಆರೋಪಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ ಎನ್ನಲಾಗಿದ್ದು, ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿ ಕಾಲಿಗೆ ಗುಂಡು ಹೊಡೆದಿದ್ದಾರೆ ಎಂದು ತಿಳಿದು ಬಂದಿದೆ. ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ಮೇಲೆ ಗಾಂಜಾ ಪ್ರಕರಣ ದಾಖಲಾಗಿತ್ತು.

ಮುಡಾ ಪ್ರಕರಣ-ಮುಂದುವರಿದ ತನಿಖೆಗೆ ಆದೇಶ

ಬೆಂಗಳೂರು, ಏ. ೧೫: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನಗಳ ಅಕ್ರಮ ಹಂಚಿಕೆ ಆರೋಪಕ್ಕೆ ಸಂಬAಧಿಸಿದAತೆ ಸಲ್ಲಿಸಲಾಗಿರುವ ‘ಬಿ' ಅಂತಿಮ ವರದಿ ವಿರೋಧಿಸಿ ದೂರುದಾರ ಸ್ನೇಹಮಯಿ ಕೃಷ್ಣ ಮತ್ತು ಜಾರಿ ನಿರ್ದೇಶನಾಲಯ (ಇ.ಡಿ) ಸಲ್ಲಿಸಿದ್ದ ಅರ್ಜಿಗಳ ಆಧಾರದಡಿ ಲೋಕಾಯುಕ್ತ ಮುಂದುವರಿದ ತನಿಖೆ ನಡೆಸಬೇಕು ಎಂದು ಲೋಕಾಯುಕ್ತಕ್ಕೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ. "ಬಿ" ಅಂತಿಮ ವರದಿ ವಿರೋಧಿಸಿ ದೂರುದಾರ ಸ್ನೇಹಮಯಿ ಕೃಷ್ಣ ಮತ್ತು ಇ.ಡಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು, ಶಾಸಕರು ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಮಂಗಳವಾರ ಪ್ರಕಟಿಸಿದರು. ತನಿಖೆ ಮುಂದುವರಿಸಲು ಅನುಮತಿ ನೀಡುವಂತೆ ಕೋರಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಮನವಿಯನ್ನು ನ್ಯಾಯಾಧೀಶರು ಪುರಸ್ಕರಿಸಿದ್ದಾರೆ.

ವಾಂಟೆಡ್ ನಕ್ಸಲ್ ಪೊಲೀಸರಿಗೆ ಶರಣು

ಮಾನಪುರ, ಏ. ೧೫: ನಕ್ಸಲ್ ರೂಪೇಶ್ ಮಾಂಡವಿ ಅಲಿಯಾಸ್ ಸುಖದೇವ್ ಮಂಗಳವಾರ ಛತ್ತೀಸಗಢ ಪೊಲೀಸರಿಗೆ ಶರಣಾಗಿದ್ದಾನೆ. ಈತನ ಸುಳಿವು ನೀಡಿದವರಿಗೆ ರೂ. ೫ ಲಕ್ಷ ನಗದು ಬಹುಮಾನ ಘೋಷಿಸಲಾಗಿತ್ತು. ೨೦೧೨ರಲ್ಲಿ ನಕ್ಸಲ್ ಚಳವಳಿಗೆ ಸೇರಿದ್ದ ಸುಖದೇವ್, ಕೋಟರಿ ಪ್ರದೇಶ ಸಮಿತಿಯ ಸದಸ್ಯನಾಗಿದ್ದ ಮತ್ತು ರಾಜನಂದಗಾAವ್-ಕಾAಕರ್ ಗಡಿ ವಿಭಾಗದ ಸ್ಥಳೀಯ ಸಂಘಟನೆಯ ಸ್ಮಾಡ್ ಉಪ ಕಮಾಂಡರ್ ಆಗಿದ್ದ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.