ಬಾಳೆಲೆ, ಏ. ೧೫: ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ಮಾಡಿನಲ್ಲಿ ಜಲಜೀವನ್ ಮಿಷನ್ ಯೋಜನೆಯಲ್ಲಿ ನಿರ್ಮಾಣಗೊಂಡ ಟ್ಯಾಂಕ್ ಕಳಪೆಯಾಗಿದೆ ಎಂದು ನಿಟ್ಟೂರು ಗ್ರಾಮ ಪಂಚಾಯಿತಿ ಆಡಳಿತ ಜಿಲ್ಲಾಡಳಿತಕ್ಕೆ ನೀಡಿದ್ದ ದೂರನ್ನಾಧರಿಸಿ ಶಕ್ತಿಯಲ್ಲಿ ವರದಿ ಪ್ರಕಟವಾಗಿದ್ದ ಹಿನ್ನೆಲೆ ಸಂಸದ ಯದುವೀರ್ ಒಡೆಯರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭ ಸ್ಥಳೀಯರು ಟ್ಯಾಂಕ್ ಕಾಮಗಾರಿಯು ಕಳಪೆಯಾಗಿದ್ದು, ಬೆಂಡೆಕುತ್ತಿ ಗಿರಿಜನ ಹಾಡಿ, ವಡ್ಡರಮಾಡು ಹೊಸ ಕಾಲೋನಿ ಸೇರಿದಂತೆ ಈ ಉದ್ದೇಶಿತ ಯೋಜನೆಯನ್ನು ಗುತ್ತಿಗೆದಾರರು ಟೆಂಡರ್ ಅವಧಿ ಮುಗಿದಿದ್ದರೂ ನೀರಿನ ಸಂಪರ್ಕ ಕಲ್ಪಿಸುವ ನಲ್ಲಿಗಳ ಜೋಡಣೆ ಈವರಗೂ ಪೂರ್ಣಗೊಳಿಸದ ಬಗ್ಗೆ ಆಸಮಾಧಾನ ತೋಡಿಕೊಂಡರು. ತಕ್ಷಣ ಜಿಲ್ಲಾ ಪಂಚಾಯಿತಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದ ಸಂಸದರು ಈ ಯೋಜನೆಯನ್ನು ಮಾರ್ಗ ಸೂಚಿಗೆ ಅನುಗುಣವಾಗಿ ಆನುಷ್ಠಾನಗೊಳಿಸಿ ಕಾಮಗಾರಿಯ ಪ್ರತಿ ಹಂತಕ್ಕೂ ಗ್ರಾಮ ಪಂಚಾಯಿತಿ ಅನುಮೋದನೆಯನ್ನು ಪಡೆದುಕೊಂಡು ಮನೆ ಮನೆಗಳಿಗೆ ನೀರು ತಲುಪಿಸುವಂತೆ ಸೂಚನೆಗಳನ್ನು ನೀಡಿದರು.
ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ವಿಫಲವಾಗಿರುವುದು ವಿಷಾಧನೀಯವಾಗಿದ್ದು ಈ ನ್ಯೂನ್ಯತೆಗಳನ್ನು ಸರಿಪಡಿಸುವುದಾಗಿ ಭರವಸೆ ನೀಡಿದರು. ನಿಟ್ಟೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಕಾಟಿಮಾಡ ಶರೀನ್ ಮುತ್ತಣ್ಣ, ಸದಸ್ಯರಾದ ಪಡಿಞರಂಡ ಕವಿತಾ ಸೇರಿದಂತೆ ಗ್ರಾಮದ ಪ್ರಮುಖರು ಹಾಜರಿದ್ದರು.