ಮಡಿಕೇರಿ, ಏ. ೧೫: ಮಡಿಕೇರಿ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ತಾ. ೨೮ ರಂದು ಚುನಾವಣೆ ನಡೆಯಲಿದೆ.
ಈ ಸಂಬAಧ ಚುನಾವಣಾಧಿಕಾರಿಯಾಗಿರುವ ಉಪ ವಿಭಾಗಾಧಿಕಾರಿ ವಿನಾಯಕ್ ನರ್ವಡೆ ಆದೇಶ ಹೊರಡಿಸಿದ್ದಾರೆ. ಏಪ್ರಿಲ್ ತಿಂಗಳಿನಲ್ಲಿ ನಗರಸಭೆ ಆಡಳಿತದ ಮೊದಲ ಅವಧಿ ಪೂರ್ಣಗೊಂಡಿತ್ತು. ಅನಂತರ ಪ್ರಕಟಗೊಂಡಿದ್ದ ಮೀಸಲಾತಿ ವಿರೋಧಿಸಿ ಕೆಲವರು ನ್ಯಾಯಾಲಯದ ಮೊರೆ ಹೋದ ಹಿನ್ನೆಲೆ ಆಯ್ಕೆ ಪ್ರಕ್ರಿಯೆ ವಿಳಂಬವಾಗಿತ್ತು. ನ್ಯಾಯಾಲಯ ಅರ್ಜಿ ವಜಾಗೊಳಿಸಿ ಮೀಸಲಾತಿಯಲ್ಲಿ ಯಥಾಸ್ಥಿತಿ ಕಾಯ್ದಿರಿಸಿ ಆದೇಶಿಸಿತ್ತು.
ಇದೀಗ ಅಧಿಕೃತವಾಗಿ ಚುನಾವಣಾ ದಿನಾಂಕ ಘೋಷಣೆಯಾ ಗಿದ್ದು, ಬಿಜೆಪಿ ಸ್ಪಷ್ಟಬಹುಮತ ಇರುವ ಹಿನ್ನೆಲೆ ನಗರಸಭೆ ಚುಕ್ಕಾಣಿ ಹಿಡಿಯುವವರು ಯಾರೆಂಬ ಕೌತುಕಮೂಡಿದೆ.
ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಶ್ವೇತಾ ಪ್ರಶಾಂತ್, ಉಷಾ ಕಾವೇರಪ್ಪ, ಸವಿತಾ ರಾಕೇಶ್, ಸಬಿತಾ, ಚಿತ್ರಾವತಿ, ಕಲಾವತಿ ಪೈಪೋಟಿಗಿಳಿದಿದ್ದಾರೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮೀಸಲಾತಿಯಿದ್ದು, ಕೆ.ಎಸ್. ರಮೇಶ್ ಹಾಗೂ ಮಹೇಶ್ ಜೈನಿ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಕೆಲ ಮಹಿಳಾ ಸದಸ್ಯರು ತಮ್ಮ ಪ್ರಯತ್ನದಲ್ಲಿ ತೊಡಗಿಕೊಂಡಿದ್ದಾರೆ.